Urdu   /   English   /   Nawayathi

ಅಕ್ರಮ ಸಕ್ರಮ ಅರ್ಜಿ ವಿಲೇ ಪ್ರಗತಿ

share with us

ಮಂಗಳೂರು/ಉಡುಪಿ: 16 ಜೂನ್ 2019 (ಫಿಕ್ರೋಖಬರ್ ಸುದ್ದಿ) ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಯೋಜನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. 2014ರಿಂದ 2019ರ ಮಾರ್ಚ್‌ವರೆಗೆ ಸಲ್ಲಿಸಲಾಗಿದ್ದ ಅರ್ಜಿ ವಿಲೇವಾರಿಗೆ ದ.ಕ. ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡಿದೆ. ಯೋಜನೆ ಅನುಷ್ಠಾನದಲ್ಲಿ ಗ್ರಾಮೀಣ ಪ್ರದೇಶದ ಮನೆ ಸಕ್ರಮೀಕರಣ 94ಸಿ ಅಡಿ ಶೇ.90 ಮತ್ತು ನಗರ ಪ್ರದೇಶದ ಮನೆ ಸಕ್ರಮೀಕರಣ 94 ಸಿಸಿ ಅಡಿ ಶೇ.86ರಷ್ಟು ಪ್ರಗತಿ ದಾಖಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಗ್ರಾಮೀಣ ಪ್ರದೇಶದಲ್ಲಿ 94ಸಿ ಯೋಜನೆಯಡಿ 1,07,190 ಅರ್ಜಿಗಳು ಸಲ್ಲಿಕೆಯಾಗಿದ್ದು, 95,765 ಅರ್ಜಿ ವಿಲೇವಾರಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ 94ಸಿಸಿ ಯೋಜನೆಯಡಿ 40,245 ಮಂದಿ ಅರ್ಜಿ ಸಲ್ಲಿಸಿದ್ದು, 34,608 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿದೆ. 94ಸಿ ಅಡಿ ಅರ್ಜಿ ಇತ್ಯರ್ಥದಲ್ಲಿ ಮಂಗಳೂರು ಮತ್ತು ಮೂಲ್ಕಿ ತಾಲೂಕು ಮುಂಚೂಣಿಯಲ್ಲಿದೆ. ಮಂಗಳೂರು ತಾಲೂಕಿನಲ್ಲಿ ಸ್ವೀಕರಿಸಿದ 8070 ಮತ್ತು ಮೂಲ್ಕಿ ತಾಲೂಕಿನಲ್ಲಿ ಸ್ವೀಕರಿಸಿದ 1194 ಅರ್ಜಿಗಳು ಸಂಪೂರ್ಣ ವಿಲೇವಾರಿಯಾಗಿವೆ. 94 ಸಿಸಿ ಅಡಿ ಮಂಗಳೂರು ಮತ್ತು ಸುಳ್ಯ ಕ್ರಮವಾಗಿ ಶೇ.91 ಮತ್ತು ಶೇ.90ರಷ್ಟು ಪ್ರಗತಿ ದಾಖಲಿಸಿದೆ.

ಉಡುಪಿ ಜಿಲ್ಲೆ ಶೇ.86 ಪ್ರಗತಿ: ಉಡುಪಿ ಜಿಲ್ಲೆಯಲ್ಲಿ 94 ಸಿ, 94 ಸಿಸಿ ಅರ್ಜಿ ವಿಲೇವಾರಿಯಲ್ಲಿ ಮೇ ತಿಂಗಳಾಂತ್ಯಕ್ಕೆ ಶೇ.86ರಷ್ಟು ಪ್ರಗತಿ ದಾಖಲಿಸಲಾಗಿದೆ.
94ಸಿ ಮೂಲಕ 33,728 ಅರ್ಜಿಗಳು ಸಲ್ಲಿಕೆಯಾಗಿದ್ದು, 29,184 ಅರ್ಜಿ ವಿಲೇವಾರಿಯಾಗಿದೆ, 4,544 ಅರ್ಜಿಗಳು ಬಾಕಿ ಇವೆ. 94ಸಿಸಿ ಮೂಲಕ 8921 ಅರ್ಜಿ ಸಲ್ಲಿಕೆಯಾಗಿದ್ದು, 7735 ಅರ್ಜಿ ವಿಲೇವಾರಿಯಾಗಿ 1,186 ಅರ್ಜಿಗಳು ಬಾಕಿ ಇವೆ. ಕಾಪು ತಾಲೂಕಿನಲ್ಲಿ ಶೇ.96.96ರಷ್ಟು ಮತ್ತು ಕಾರ್ಕಳ ತಾಲೂಕಿನಲ್ಲಿ 97.39ರಷ್ಟು 94ಸಿ ಅರ್ಜಿಗಳು ವಿಲೇವಾರಿಯಾಗಿವೆ. 94ಸಿಸಿ ಅಡಿಯಲ್ಲಿ ಕಾಪು ಮತ್ತು ಕುಂದಾಪುರ ಶೇ.100 ಪ್ರಗತಿ ದಾಖಲಿಸಿದ್ದು, ಉಡುಪಿ ಶೇ.90 ಮತ್ತು ಕಾರ್ಕಳದಲ್ಲಿ ಶೇ.96ರಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ.

ಕಟ್ಟುನಿಟ್ಟಿನ ಪರಿಶೀಲನೆ: ಚುನಾವಣೆ ಪೂರ್ವ ಅರ್ಜಿ ಸಲ್ಲಿಸುವ ಅವಧಿಯನ್ನು ರಾಜ್ಯ ಸರ್ಕಾರ ಮಾರ್ಚ್ 31ರ ತನಕ ವಿಸ್ತರಿಸಿತ್ತು. ಅನಧಿಕೃತವಾಗಿ ಸಾಗುವಾಳಿ ನಡೆಸುತ್ತಿರುವ ಭೂಮಿಯನ್ನು ಬಗರ್‌ಹುಕುಂ ಯೋಜನೆಯಡಿ ಸಕ್ರಮಗೊಳಿಸುವ ಯೋಜನೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಇದರಿಂದ ವಾಸ್ತವ್ಯದ ಮನೆ ಹಾಗೂ ಸಾಗುವಳಿ ಜಮೀನನ್ನು ಸಕ್ರಮಗೊಳಿಸಲು ಅಸಾಧ್ಯವಾಗಿರುವ ಅರ್ಹ ಫಲಾನುಭವಿಗಳಿಗೆ ಕೊನೆಯ ಅವಕಾಶ ಸಿಕ್ಕಂತಾಗಿತ್ತು. ಗ್ರಾಮೀಣ ಪ್ರದೇಶದ 94ಸಿ ಅಡಿ ಅರ್ಜಿಗಳನ್ನು ತಿರಸ್ಕರಿಸದಂತೆ ಮುಖ್ಯಮಂತ್ರಿ ಆದೇಶ ನೀಡಿದ್ದರು. ಸೌಲಭ್ಯ ಪಡೆಯುವ ಸಲುವಾಗಿಯೇ ಸರ್ಕಾರಿ ಭೂಮಿಯಲ್ಲಿ ತಾತ್ಕಾಲಿಕ ಮನೆ ನಿರ್ಮಿಸಿ ಹಲವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ್ದ ಕಂದಾಯ ಇಲಾಖೆ ಇಂಥ ಅರ್ಜಿಗಳನ್ನು ಪರಿಶೀಲಿಸಿ ತಿರಸ್ಕರಿಸಿತ್ತು. ಯೋಜನೆ ದುರುಪಯೋಗ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ ಇಲಾಖೆ ಅಧಿಕಾರಿಗಳು ಅರ್ಜಿ ಇತ್ಯರ್ಥ ಸಂದರ್ಭ ಖುದ್ದು ಪರಿಶೀಲನೆ ನಡೆಸಿದ್ದರು.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಗೊಂಡ ಹಿನ್ನೆಲೆಯಲ್ಲಿ 94ಸಿ ಹಾಗೂ 94ಸಿಸಿ ಯೋಜನೆಯಡಿ ಮಾರ್ಚ್ 31ರವರೆಗೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ನಡೆದಿತ್ತು. ಅರ್ಜಿ ವಿಲೇವಾರಿ ತ್ವರಿತಗತಿಯಲ್ಲಿ ನಡೆದಿದ್ದು ಶೇ.90ರಷ್ಟು ಪ್ರಗತಿ ದಾಖಲಿಸಿದೆ. ಬಾಕಿ ಇತ್ಯರ್ಥ ಮತ್ತು ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗಿದೆ.
– ಮಂಜುನಾಥ್, ದ.ಕ ಜಿಲ್ಲಾ ಅಧೀಕ್ಷಕ, ಕಂದಾಯ ಇಲಾಖೆ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا