Urdu   /   English   /   Nawayathi

ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

share with us

ಮಂಗಳೂರು: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಕ್ಷಿಣ ಕನ್ನಡ ಉಪ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಎಸ್.ಮಹದೇವಪ್ಪ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಜೋಯಿಡಾ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಎಂಬುವರು ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಹದೇವಪ್ಪ ಕಚೇರಿ ಮತ್ತು ನಗರದ ಕದ್ರಿಪಾದೆಯಲ್ಲಿರುವ ಬಾಡಿಗೆ ಮನೆಗಳ ಮೇಲೆ ಎಸಿಬಿ ಪಶ್ಚಿಮ ವಲಯ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದ ತಂಡ ದಾಳಿ ಮಾಡಿ, ಶೋಧ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದೆ. ಬೆಂಗಳೂರು ಮತ್ತು ಚಿತ್ರದುರ್ಗದಲ್ಲೂ ಶೋಧ ನಡೆದಿದೆ. ಬೆಂಗಳೂರಿನಲ್ಲಿ ನಾಲ್ಕು ಅಂತಸ್ತಿನ ಒಂದು ಡ್ಯೂಪ್ಲೆಕ್ಸ್ ಮನೆ, ಚಿತ್ರದುರ್ಗದಲ್ಲಿ ಒಂದು ಮನೆ, ಬೆಂಗಳೂರಿನಲ್ಲಿ ಎರಡು ಮತ್ತು ಚಿತ್ರದುರ್ಗದಲ್ಲಿ ಮೂರು ನಿವೇಶನ ಹೊಂದಿದ್ದಾರೆ. ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟು 18 ಎಕರೆ ಕೃಷಿ ಜಮೀನು ಹೊಂದಿರುವ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಡಾಲರ್, ನಗದು, ವಾಹನ ಪತ್ತೆ
ಸಹಾಯಕ ಇಂಜಿನಿಯರ್ ಎಸ್.ಮಹದೇವಪ್ಪ ನಿವಾಸದಲ್ಲಿ 3,11,355 ರೂ. ನಗದು, 2,150 ಅಮೆರಿಕನ್ ಡಾಲರ್, 4,800 ಹಾಂಕಾಂಗ್ ಡಾಲರ್, ಬ್ಯಾಂಕ್ ಖಾತೆಗಳಲ್ಲಿ 6,49,700 ರೂ. ಪತ್ತೆಯಾಗಿದೆ. ಠೇವಣಿ ಮತ್ತು ನಿರಖು ಠೇವಣಿಯಲ್ಲಿ 12 ಲಕ್ಷ ರೂ. ತೊಡಗಿಸಿರುವುದು ಕಂಡು ಬಂದಿದೆ. 1 ಬುಲೆಟ್ ಬೈಕ್, 1 ಸ್ಕೂಟರ್, 1 ರಿಟ್ಜ್ ಕಾರು, 5.5 ಕೆ.ಜಿ. ಬೆಳ್ಳಿ ಆಭರಣ ಮತ್ತು ವಸ್ತುಗಳು, ಜೀವ ವಿಮಾಪಾಲಿಸಿಗಳೂ ದೊರಕಿದ್ದು, ಪರಿಶೀಲನೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಡಿವೈಎಸ್ಪಿ ಮಂಜುನಾಥ, ಇನ್‌ಸ್ಪೆಕ್ಟರ್‌ಗಳಾದ ಯೋಗೀಶ್ ಕುಮಾರ್, ಮೋಹನ್ ಕೊಟ್ಟಾರಿ, ಸತೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜೋಯಿಡಾ ಅಧಿಕಾರಿಯ ಮನೆಯಲ್ಲಿ ಲಕ್ಷಾಂತರ ರೂ. 
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಜೋಯಿಡಾ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಎಂಬುವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.
ಬೆಳಗಾವಿಯ ವಾಸ್ತವ್ಯದ ಮನೆ, ದಾಂಡೇಲಿಯಲ್ಲಿರುವ ಮನೆ, ಜೊಯಿಡಾ ಮತ್ತು ದಾಂಡೇಲಿ ಕಚೇರಿ ಸೇರಿ ಒಟ್ಟು 4 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಈ ಸಂದರ್ಭ 3 ನಿವೇಶನ ದಾಖಲೆ, 11 ಲಕ್ಷ ರೂ.ನಗದು, ಎಲ್ಲ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 31,43,500 ರೂ., ಚಿನ್ನ ಮತ್ತು ಬೆಳ್ಳಿಯ ಆಭರಣ ದೊರಕಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا