Urdu   /   English   /   Nawayathi

ಗ್ರಾಮೀಣ ಭಾಗದ ಹಕ್ಕಿಗಳು ವಲಸೆ

share with us

ಉಳ್ಳಾಲ: 23 ಮೇ 2019 (ಫಿಕ್ರೋಖಬರ್ ಸುದ್ದಿ) ಈ ವರ್ಷ ಬೇಸಿಗೆಯ ಬಿಸಿ ಮನುಷ್ಯರಿಗೆ ಮಾತ್ರವಲ್ಲ, ಹಕ್ಕಿಗಳಿಗೂ ತಟ್ಟಿದೆ. ಸೂರ್ಯೋದಯಕ್ಕೆ ಮುನ್ನವೇ ಜನರಿಗೆ ಮುದ ನೀಡುತ್ತಿದ್ದ ಹಕ್ಕಿಗಳ ಕಲರವ ಈ ವರ್ಷ ಮಾಯವಾಗಿವೆ. ನಗರ ಪ್ರದೇಶಗಳಲ್ಲಿ ಹಕ್ಕಿಗಳಿಗೆ ನೀರು, ಆಹಾರ ನೀಡುವ ನಿಟ್ಟಿನಲ್ಲಿ ಪರಿಸರ ಪ್ರೇಮಿಗಳು ವರ್ಷಂಪ್ರತಿ ವಿವಿಧ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಾ ಬಂದಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಕೃತಕ ವ್ಯವಸ್ಥೆಯ ಅವಶ್ಯಕತೆ ಇದುವರೆಗೂ ಬಂದಿರಲಿಲ್ಲ. ಆ ಕಾರಣಕ್ಕೆ ಇಲ್ಲಿನ ಜನ ಹಕ್ಕಿಗಳ ಆಹಾರ, ನೀರಿನ ವ್ಯವಸ್ಥೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಮಾವು ಸಹಿತ ವಿವಿಧ ಹಣ್ಣಿನ ಮರ, ಬಳ್ಳಿ, ಪೊದೆಗಳು ಇರುವುದರಿಂದ ಹಿಂದಿನಿಂದಲೂ ಹಕ್ಕಿಗಳಿಗೆ ಕೊರತೆ ಇರಲಿಲ್ಲ. ಹಕ್ಕಿಗಳ ಪೈಕಿಯಂತೂ ಜೋರಾದ ಶಬ್ದದಲ್ಲಿ ಕೆರೆ ಕೆರೆ ಎನ್ನುತ್ತಾ ರಾಶಿ ರಾಶಿಯಾಗಿ ಬರುತ್ತಿದ್ದ ಬಜಕರ ಹಕ್ಕಿಗಳ ಕಲರವೇ ವಿಭಿನ್ನವಾಗಿರುತ್ತಿತ್ತು. ಇನ್ನು ಮೈನಾ, ಪಾರಿವಾಳ, ಗಿಳಿ, ಕೋಗಿಲೆ, ಗುಬ್ಬಚ್ಚಿ, ಮರಕುಟುಕ ಹೀಗೆ ಭಿನ್ನ ವಿಭಿನ್ನ ರೀತಿಯ ಹಕ್ಕಿಗಳು ದರ್ಶನ ನೀಡುತ್ತಿದ್ದ ರೀತಿಯಂತೂ ಬಣ್ಣಿಸಲಾಧ್ಯ. ಇತರ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಹಿಂದಿನ ಕಲರವ ಕಡಿಮೆಯಾಗಿರಲಿಲ್ಲ. ಆದರೆ ಈ ವರ್ಷ ಬೇಸಿಗೆಯಲ್ಲಿ ಹಕ್ಕಿಗಳೆಲ್ಲವೂ ಮಾಯವಾಗಿವೆ. ಕಾಗೆಗಳೂ ಅಪೂರ್ವ ಎನಿಸಿವೆ. ಇಂದೇನಾದರೂ ಗ್ರಾಮೀಣ ಭಾಗದಲ್ಲಿ ಹಕ್ಕಿಗಳಿದ್ದರೆ ನವಿಲುಗಳು ಮಾತ್ರ.

ಅಂಬ್ಲಮೊಗರುವಿನಲ್ಲಿದೆ ರಾಶಿ ರಾಶಿ ಹಕ್ಕಿಗಳು!:  ನೀರು, ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದ ಹಕ್ಕಿಗಳು ಅದರ ಹುಡುಕಾಟದಲ್ಲಿ ವಲಸೆ ಹೋಗಿವೆ. ಇದೇ ವೇಳೆ ಅಂಬ್ಲಮೊಗರುವಿನಲ್ಲಿ ವಿವಿಧ ಹಕ್ಕಿಗಳ ಹಿಂಡು ಕಾಣಲು ಸಾಧ್ಯವಾಗಿದೆ. ಇಲ್ಲಿರುವ ಕೆರೆಗಳಲ್ಲಿ ಈಗಲೂ ನೀರು ಸಂಗ್ರಹವಾಗಿದ್ದು ನೀರಿನೊಂದಿಗೆ ಅದರಲ್ಲಿ ಮೀನುಗಳು ಆಹಾರವಾಗಿ ಸಿಗುವುದರಿಂದ ಅಲ್ಲೇ ಹಕ್ಕಿಗಳು ಠಿಕಾಣಿ ಹೂಡಿವೆ. ಅದರಲ್ಲೂ ಕೊಕ್ಕರೆಗಳ ಸಂಖ್ಯೆ ಅತ್ಯಧಿಕವಾಗಿದೆ. 

ಮಲಿನ ನೀರು ಮಾರಕ: ಅಂಬ್ಲಮೊಗರುವಿನಲ್ಲಿರುವ ನೀರು ಮಲಿನಗೊಂಡಿರುವುದು ಕಂಡುಬರುತ್ತಿದೆ. ಈ ಭಾಗದಲ್ಲಿರುವ ನಾಲೆಯ ಮೂಲಕ ಇತರ ಕಡೆಗಳಿಂದಲೂ ಮಳೆನೀರು ಹರಿದು ಬರುತ್ತಿದ್ದು, ಜನರೇ ಎಸೆಯುವ ತ್ಯಾಜ್ಯದ ಕಟ್ಟುಗಳೂ ತೇಲುತ್ತಾ ಬಂದು ಸಂಗ್ರಹಗೊಂಡಿದೆ. ಈ ನೀರು, ಆಹಾರ ಸೇವಿಸುವ ಹಕ್ಕಿಗಳ ಜೀವಕ್ಕೆ ಸಂಚಕಾರ ಬರುವುದನ್ನು ಅಲ್ಲಗಳೆಯುವಂತಿಲ್ಲ.

ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಕೊಳ, ಕೆರೆಗಳು ಇರುವುದರಿಂದ ಹಕ್ಕಿಗಳಿಗೆ ನೀರಿಗೆ ಸಮಸ್ಯೆ ಇರಲು ಸಾಧ್ಯವಿಲ್ಲ. ಆದರೆ ಈ ವರ್ಷ ಬಿಸಿಲು ತುಂಬಾ ಇದ್ದು ಹಕ್ಕಿಗಳು ಪೂರಕ ವಾತಾವರಣ ಅರಸಿ ವಲಸೆ ಹೋಗಿರುವ ಸಾಧ್ಯತೆಗಳು ಹೆಚ್ಚಿವೆ.
ಪಿ.ಶ್ರೀಧರ್, ವಲಯ ಅರಣ್ಯಾಧಿಕಾರಿ

ಪ್ರಸ್ತುತ ದಿನಗಳಲ್ಲಿ ಕಾಡುಗಳ ನಾಶ, ಮೊಬೈಲ್ ಟವರ್‌ಗಳಿಂದಾಗಿ ಹಕ್ಕಿಗಳಿಗೆ ತರಂಗಾಂತರ ಸಮಸ್ಯೆ ಇದೆ, ಈ ವರ್ಷ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇದ್ದು ವಾತಾವರಣವೂ ಹಕ್ಕಿಗಳಿಗೆ ಪೂರಕವಾಗಿಲ್ಲ, ಇದರಿಂದ ವಾತಾವರಣ, ಆಹಾರ, ನೀರು ಇರುವಲ್ಲಿಗೆ ಹಕ್ಕಿಗಳು ವಲಸೆ ಹೋಗುತ್ತಿವೆ.
ಡಾ.ಪ್ರಶಾಂತ್ ನಾಯ್ಕ, ವಿವಿ ಪ್ರಾಧ್ಯಾಪಕ, ಜೀವ ವಿಜ್ಞಾನ ವಿಭಾಗ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا