Urdu   /   English   /   Nawayathi

ಬೆಂಗಳೂರು: ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ; ಪತ್ರಕರ್ತ ಬಂಧನ

share with us

ಬೆಂಗಳೂರು: 21 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನನ್ನು ಬಂಧಿಸಿದ ಸದಾಶಿವನಗರ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದು ನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಇನ್ ಪುಟ್ ಚೀಫ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಕಾರನಗರ ನಿವಾಸಿ ಪತ್ರಕರ್ತ ಹೇಮಂತ್ ಕಶ್ಯಪ್, ನಗರದ ಖ್ಯಾತ ವೈದ್ಯ ಪದ್ಮಶ್ರೀ ಪುರಸ್ಕೃತ ಡಾ ರಮಣ ರಾವ್ ಎಂಬುವವರಿಗೆ ಬೆದರಿಕೆಯೊಡ್ಡಿ 50 ಲಕ್ಷ ರೂಪಾಯಿ ನೀಡುವಂತೆ ಪೀಡಿಸಿದ್ದ ಎಂಬ ನಿಖರ ದೂರಿನ ಮೇಲೆ ಕಳೆದ ಮಂಗಳವಾರ ಸಂಜೆ ಪೊಲೀಸರು ಬಂಧಿಸಿದ್ದರು. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಸಮಯ ಸುದ್ದಿ ವಾಹಿನಿಯ ಇನ್ ಪುಟ್ ಚೀಫ್ ಬೂಕನಕೆರೆ ಮಂಜುನಾಥ್ ಮತ್ತು ಕ್ಯಾಮರಾಮ್ಯಾನ್ ಮುರಳಿ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಡಿ ದೇವರಾಜ್ ತಿಳಿಸಿದ್ದಾರೆ. ಪ್ರಕರಣವೇನು? ಬೆಂಗಳೂರು ಮಾಧ್ಯಮ ಲೋಕದ ಅಪರಾಧ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದ ಪತ್ರಕರ್ತ ಹೇಮಂತ್ ಕಶ್ಯಪ್ ಸದಾಶಿವನಗರದ ವೈದ್ಯ ಡಾ ರಮಣ ರಾವ್ ಅವರಿಗೆ ಕಳೆದ ಮಾರ್ಚ್ 5ರಂದು ಕರೆ ಮಾಡಿ ತಮ್ಮಲ್ಲಿ ಮುಖ್ಯವಾದ ವಿಷಯ ಮಾತನಾಡುವುದಿದೆ ಎಂದಿದ್ದಾನೆ, ಅದಕ್ಕೆ ವೈದ್ಯರು ಕ್ಲಿನಿಕ್ ಗೆ ಬರುವಂತೆ ಸೂಚಿಸಿದರು. ಅಲ್ಲಿ ಹೇಮಂತ್ ತಾನು ಟಿವಿ 9 ವಾಹಿನಿಯ ವರದಿಗಾರ ಎಂದು ಪರಿಚಯಿಸಿ, ನೀವು ಭಾಗಿಯಾಗಿರುವ ಸೆಕ್ಸ್ ವಿಡಿಯೊವೊಂದು ನನ್ನ ಬಳಿಯಿದ್ದು ಹಣ ಕೊಟ್ಟರೆ ಪ್ರಕರಣವನ್ನು ಇಲ್ಲಿಗೇ ಮುಚ್ಚಿ ಹಾಕುತ್ತೇನೆ, ಇಲ್ಲದಿದ್ದರೆ ಎಲ್ಲಾ ವಾಹಿನಿಗಳಿಗಲ್ಲಿಯೂ ಪ್ರಸಾರವಾಗುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ನನ್ನ ಸೇರಿ ಮತ್ತೆ 5 ಮಂದಿ ವರದಿಗಾರರಲ್ಲಿ ನಿಮಗೆ ಸಂಬಂಧಪಟ್ಟ ಸೆಕ್ಸ್ ವಿಡಿಯೊ ಇದ್ದು ಪ್ರತಿಯೊಬ್ಬರಿಗೂ ತಲಾ 10 ಲಕ್ಷ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಪ್ರಸಾರ ಮಾಡಿಸುತ್ತೇವೆ ಎಂದು ಧಮಕಿ ಹಾಕಿದ್ದನು.

ಆತನ ಮಾತಿಗೆ ಕುಗ್ಗಿ ಹೋಗಿ ಡಾ ರಮಣ್ ರಾವ್ 5 ಲಕ್ಷ ರೂಪಾಯಿ ನೀಡಿ ಕಳುಹಿಸಿದ್ದರು. ನಂತರ ಕಳೆದ ಮಂಗಳವಾರ ಸಂಜೆ ಸಮಯ ಟಿವಿಯ ಮಂಜುನಾಥ್ ಮತ್ತು ಛಾಯಾಗ್ರಹಕ ತಮ್ಮ ಸಂಸ್ಥೆಯ ಲೋಗೋ ಹಿಡಿದುಕೊಂಡು ಬಂದು ಅದೇ ವಿಡಿಯೊ ತಮ್ಮ ಬಳಿ ಕೂಡ ಇದೆ ಎಂದು ಬೆದರಿಕೆ ಹಾಕಿದ್ದರು. ಆದರೆ ರಮಣ್ ರಾವ್ ಹಣ ನೀಡಲಿಲ್ಲ. ಒಂದೇ ವಿಷಯದಲ್ಲಿ ಇಬ್ಬಿಬ್ಬರು ಪತ್ರಕರ್ತರು ಬಂದು ತಮಗೆ ಬೆದರಿಕೆ ಹಾಕುತ್ತಿರುವುದು ನೋಡಿ ಸಂಶಯ ಬಂದು ರಮಣ್ ರಾವ್ ವಾಪಸ್ ಕಳುಹಿಸಿದರು. ಇತ್ತ 5 ಲಕ್ಷ ತೆಗೆದುಕೊಂಡು ಹೋಗಿದ್ದ ಕಶ್ಯಪ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮತ್ತೆ ಹಣದ ಬೇಡಿಕೆಯಿಟ್ಟಿದ್ದ. ಮತ್ತೆ ಕ್ಲಿನಿಕ್ ಗೆ ಬರುತ್ತೇನೆ, ಹಣ ನೀಡಿ ಎಂದು ಬೆದರಿಕೆ ಹಾಕಿದ್ದ. ಇದೇ ಸಂದರ್ಭದಲ್ಲಿ ವೈದ್ಯರು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರು ಸದಾಶಿವನಗರ ಪೊಲೀಸರಿಗೆ ಮಾಹಿತಿ ನೀಡಿ ಪತ್ರಕರ್ತನನ್ನು ಬಂಧಿಸುವಂತೆ ಆದೇಶ ನೀಡಿದರು. ಹೇಮಂತ್ ಕಶ್ಯಪ್ ಕ್ಲಿನಿಕ್ ಗೆ ಬರುವ ವೇಳೆಗೆ ಪೊಲೀಸರ ತಂಡ ಫ್ತಿಯಲ್ಲಿ ಬಂದು ಹಣ ಪಡೆಯುತ್ತಿದ್ದಾಗ ಸ್ಥಳದಲ್ಲಿಯೇ ಬಂಧಿಸಿದರು. ಆರೋಪಿ ಕಶ್ಯಪ್ ಬಳಿಯಿರುವ ವಿಡಿಯೊ ನಿಖರವಾಗಿರುವುದೇ ಅಥವಾ ನಕಲಿ ಸೃಷ್ಟಿಯೇ ಎಂದು ಪೊಲೀಸರು ಇನ್ನೂ ಪರಿಶೀಲನೆ ನಡೆಸಿಲ್ಲ. ಈ ಮಧ್ಯೆ ಪತ್ರಕರ್ತರಾದ ಹೇಮಂತ್ ಕಶ್ಯಪ್, ಬೂಕನಕೆರೆ ಮಂಜುನಾಥ್ ಮತ್ತು ಮುರಳಿಯನ್ನು ಕಂಪೆನಿಗಳು ಸೇವೆಯಿಂದ ವಜಾಗೊಳಿಸಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا