Urdu   /   English   /   Nawayathi

ಅಕಾಲಿಕ ಕಡಲ್ಕೊರೆತ: ಆತಂಕ ಸೃಷ್ಟಿ

share with us

ಬೈಂದೂರು: 18 ಮಾರ್ಚ್ (ಫಿಕ್ರೋಖಬರ್ ಸುದ್ದಿ) ತ್ರಾಸಿ- ಹೊಸಪೇಟೆ- ಕಂಚುಗೋಡು ಕಡಲ ತೀರದಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಉಂಟಾಗುವ ಕಡಲ್ಕೊರೆತ ಈಗ ಕಾಣಿಸಿಕೊಂಡಿರುವುದು ಅಲ್ಲಿನ ತೀರ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.  ಗುರುವಾರ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಕೊರೆತ ಅದೇ ವೇಗದಲ್ಲಿ ಮುಂದುವರಿದ ಕಾರಣ ಕೊರೆತಕ್ಕೆ ಈಡಾದ ಭಾಗ ಹೆಚ್ಚುತ್ತಿದೆ. ಸುಮಾರು 200 ಮೀಟರ್ ಉದ್ದದ ಕಡಲ ತೀರ ಸಮುದ್ರ ಪಾಲಾಗಿದೆ. ಕಡಲ ತೀರದಲ್ಲಿರುವ ಗಾಳಿ ಮತ್ತು ಅನ್ಯ ಮರಗಳು ಒಂದೊಂದಾಗಿ ಉರುಳುತ್ತಿವೆ. ಈ ಭಾಗದಲ್ಲಿ 200ಕ್ಕೂ ಮಿಕ್ಕಿ ಮೀನುಗಾರಿಕಾ ದೋಣಿಗಳನ್ನು ಇಡಲಾಗುತ್ತಿದ್ದು, ಕೊರೆತದ ಕಾರಣದಿಂದ ದೋಣಿ, ಬಲೆ ಹಾಗೂ ಎಂಜಿನ್‌ಗಳಿಗೆ ಹಾನಿಯಾಗಿದೆ. ಅಪಾಯಕ್ಕೆ ಒಳಗಾಗಬಹುದಾದ ದೋಣಿಗಳನ್ನು ದಡದ ಮೇಲಕ್ಕೆ ಸರಿಸಲಾಗಿದ್ದು, ಕೊರೆತ ಮುಂದೊತ್ತುವ ಅಪಾಯವಿರುವುದರಿಂದ ಎಲ್ಲ ದೋಣಿಗಳನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಇದೆ ಎಂದು ಮೀನುಗಾರರು ಭಾವಿಸಿದ್ದಾರೆ. ಕೊರೆತ ಮುಂದುವರಿದರೆ ಹತ್ತಿರದ ಮನೆಗಳಿಗೂ ಅಪಾಯ ತಟ್ಟುವ ಸಾಧ್ಯತೆ ಇದೆ. ಈ ಅಕಾಲಿಕ ಕಡಲ್ಕೊರೆತಕ್ಕೆ ಮರವಂತೆ- ತ್ರಾಸಿ ತೀರದಲ್ಲಿ ನಡೆಯುತ್ತಿರುವ ಸುಸ್ಥಿರ ಕಡಲ ತೀರ ನಿರ್ವಹಣಾ ಯೋಜನೆ ಕಾರಣ ಎಂದು ಮೀನುಗಾರರು ಶಂಕಿಸುತ್ತಿದ್ದಾರೆ. ತ್ರಾಸಿ ಉದ್ಯಾನವನದ ಸಮೀಪ ಯೋಜನೆಯ ಕೊನೆಯ ಗ್ರೋಯಿನ್ ನಿರ್ಮಿಸಲಾಗಿದೆ. ಅದರ ದಕ್ಷಿಣ ದಿಕ್ಕಿನಲ್ಲಿ ಕೊರೆತ ಸಂಭವಿಸಿದೆ. ಇಲ್ಲಿಂದ ನೂರು ಮೀಟರ್ ದೂರದಲ್ಲಿ ಇನ್ನೊಂದು ಗ್ರೋಯಿನ್ ನಿರ್ಮಿಸಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.

ಆರಂಭವಾಗದ ಕಾಮಗಾರಿ: ತ್ರಾಸಿ ಉದ್ಯಾನವದ ಬಳಿ ದಕ್ಷಿಣ ದಿಕ್ಕಿನಲ್ಲಿ ಕಡಲ್ಕೊರೆತ ತಡೆಯುವ ಉದ್ದೇಶದಿಂದ ಭಾರಿ ಗಾತ್ರದ ಕಲ್ಲುಗಳನ್ನು ಹಾಕಿ  ವರ್ಷಗಳು ಕಳೆದಿದ್ದರೂ, ಈವರೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ತ್ರಾಸಿ- ಹೊಸಪೇಟೆ ಪ್ರದೇಶದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈವರೆಗೆ ಮಂಜೂರಾತಿ ದೊರೆತಿಲ್ಲ. ಹೀಗಾಗಿ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬ ಉತ್ತರ ಬಂದರು ಇಲಾಖೆಯ ಅಧಿಕಾರಿಗಳಿಂದ ಸಿಗುತ್ತಿದೆ. ಬೇಸಿಗೆಯಲ್ಲಿ ಕಾಣಿಸಿಕೊಂಡಿರುವ ಈ ಕಡಲ್ಕೊರೆತ ತಡೆಯಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا