Urdu   /   English   /   Nawayathi

ಬೆಳಗಾವಿಯ ನಶೆ ರಾಣಿ ವಿರುದ್ಧ ಗಡಿಪಾರು ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ?!

share with us

ಬೆಳಗಾವಿ: 17 ಜನುವರಿ (ಫಿಕ್ರೋಖಬರ್ ಸುದ್ದಿ) ತನ್ನ ಕುತ್ತಿಗೆ ಮೇಲೆ ಗಾಂಜಾ ಎಲೆಯ ಟ್ಯಾಟೋ ಹಾಕಿಕೊಂಡು ಗಡಿ ಭಾಗದ ಡ್ರಗ್ಸ್ ಮಾಫಿಯಾ ಕ್ವೀನ್ ಎಂದೇ ಹವಾ ಕ್ರಿಯೇಟ್ ಮಾಡಿರುವ ಕುಂದಾನಗರಿಯ ಪ್ರಿಯಂಕಾ ಅಲಿಯಾಸ್ ಪ್ರಿಯಾ ಡಾನ್ ವಿರುದ್ಧ ಮಹಾನಗರ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರುವಾಗ ಮಾರ್ಕೆಟ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಟಿಳಕವಾಡಿಯ ಪ್ರಿಯಾ ಬೆಳಗಾವಿಯ ಡ್ರಗ್ಸ್ ಮಾಫಿಯಾದಲ್ಲಿ ಮುಂಚೂಣಿಯಲ್ಲಿರುವ ಸ್ಫೋಟಕ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಇನ್ನಿತರ ಸ್ನಾತಕೋತ್ತರ ಹಾಗೂ ಪದವಿ ಶಿಕ್ಷಣ ಪಡೆಯಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಬೆಳಗಾವಿಗೆ ಆಗಮಿಸುವ ಯುವಕ-ಯುವತಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು ಎನ್ನಲಾದ ಪ್ರಿಯಾ, ಗಾಂಜಾ, ಡ್ರಗ್ಸ್ ಪೂರೈಸುವ ಮೂಲಕ ಯುವಕರನ್ನು ನಶೆಯಲ್ಲಿ ತೇಲುವಂತೆ ಮಾಡುತ್ತಿದ್ದಳು ಎಂಬ ಆರೋಪಗಳಿವೆ. ಮೆಡಿಕಲ್, ಇಂಜಿನಿಯರಿಂಗ್, ಪದವಿ ವಿದ್ಯಾರ್ಥಿಗಳ ಜತೆಗೆ ಬೆಳಗಾವಿಯ ಹೈಸ್ಕೂಲ್ ವಿದ್ಯಾರ್ಥಿಗಳೆಲ್ಲರಿಗೂ ಈಕೆ ಚಿರಪರಿಚಿತೆ. ಹಲವು ವರ್ಷಗಳಿಂದ ಮಾದಕರಾಣಿಯಾಗಿ ಮೆರೆದಿರುವ 24 ವರ್ಷದ ಪ್ರಿಯಾ ಡಾನ್ ಇದೀಗ ಕಂಬಿ ಎಣಿಸುತ್ತಿದ್ದು, ಈಕೆಯನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಡ್ರಗ್ಸ್ ಪೂರೈಕೆ ನಿಯಂತ್ರಣಕ್ಕೆ ತರಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಈ ಸಂಗತಿಯನ್ನು ಮಹಾನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ. ರಾಜಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಮಹಾನಗರದ ಬಹುತೇಕ ಕಾಲೇಜು ಆವರಣದಲ್ಲಿ ಗಾಂಜಾ ಹಾಗೂ ಡ್ರಗ್ಸ್ ಪೂರೈಕೆ ಆಗುತ್ತಿರುವ ಬಗ್ಗೆ ಪೊಲೀಸರಿಗೆ ಹಲವು ಸಲ ದೂರು ಬಂದಿವೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಿಗೆ ಕ್ಯಾರೆ ಎನ್ನದೆ ಕಾಲೇಜು ಆವರಣಕ್ಕೆ ನುಗ್ಗುತ್ತಿದ್ದ ಈಕೆ ಕಾಲೇಜು ಆವರಣದಲ್ಲಿ ಯುವಕರನ್ನು ನಶೆಯಲ್ಲಿ ತೇಲಿಸುತ್ತಿದ್ದಳು. ಸಂಜೆ ಆರು ಗಂಟೆಗೆ ಹೆಚ್ಚು ಸಕ್ರಿಯವಾಗುವ ಈಕೆ ಕಾಲೇಜು ಯುವಕ-ಯುವತಿಯರು ಹೇಳಿದ ಜಾಗಕ್ಕೆ ಡ್ರಗ್ಸ್, ಪೆನ್ನಿ ಹಾಗೂ ಗಾಂಜಾ ಪೂರೈಸುತ್ತಿದ್ದಳು. ಈಕೆಯ ಜತೆಗೆ ನಾಲ್ವರು ಪುರುಷರು ಹಾಗೂ ಏಳೆಂಟು ಹುಡುಗಿಯರಿದ್ದಾರೆ ಎಂದು ತಿಳಿದು ಬಂದಿದೆ. 

ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಪೊಲೀಸರು ಹಲವು ವರ್ಷಗಳಿಂದ ಎಷ್ಟೆಲ್ಲಾ ಪ್ರಯೋಗ ಮಾಡಿದರೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಆದರೆ ಮಾರ್ಕೆಟ್ ಎಸಿಪಿ ನೇತೃತ್ವದ ತಂಡ ಈ ಗ್ಯಾಂಗ್​ನ್ನು ಖೆಡ್ಡಾಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಯುವಕರಿಗೆ ಧಮ್ಕಿ ಹಾಕಿದ, ಕುಡಿದ ನಶೆಯಲ್ಲಿ ಪೊಲೀಸರೊಂದಿಗೆ ಬೀದಿ ರಂಪಾಟ ಮಾಡಿದ ಪ್ರಕರಣ ಸಂಬಂಧ ಈಕೆಯ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಮಹಾನಗರದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಪೂರೈಸುತ್ತಿದ್ದ ಪ್ರಿಯಾ ನಂದಗಡಕರ, ನಾಜೀಮ್ ಮುಲ್ಲಾ ಹಾಗೂ ಮುಸ್ತಾಕ್ ಭಾಗವಾನ್ ಒಳಗೊಂಡ ಗ್ಯಾಂಗ್ ಅರೆಸ್ಟ್ ಆಗಿದೆ. ಇನ್ನು ಬೆಳಗಾವಿಗೆ ಡ್ರಗ್ಸ್ ಹಾಗೂ ಗಾಂಜಾ ಪೂರೈಸುತ್ತಿದ್ದ ಮುಂಬೈ ಮೂಲದ ಮುಖ್ಯ ಕಿಂಗ್‍ಪಿನ್‍ಗಾಗಿ ಪೊಲೀಸರು ಶೋಧಕ್ಕೆ ಮುಂದಾಗಿದ್ದಾರೆ. ಮುಂಬೈನಲ್ಲಿ ಕುಳಿತು ಬೆಳಗಾವಿ ಹುಡುಗರನ್ನು ನಶೆಯಲ್ಲಿ ತೇಲಿಸುತ್ತಿರುವ ಆ ಕಿಂಗ್‍ಪಿನ್ ಅಂದರ್ ಆದರೆ ಮಾತ್ರ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا