Urdu   /   English   /   Nawayathi

‘ಕಾಂಗ್ರೆಸ್ ಬಿಡಲ್ಲ, ಸಿಎಲ್‌ಪಿಗೂ ಹೋಗಲ್ಲ’ : ಶಾಸಕ ನಾಗೇಂದ್ರ ನಿಗೂಢ ನಡೆ

share with us

ಬೆಂಗಳೂರು: 17 ಜನುವರಿ (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್ ಪಕ್ಷ ಬಿಡುವುದೂ ಇಲ್ಲ, ಶಾಸಕಾಂಗ ಪಕ್ಷ ಸಭೆಗೆ ಹಾಜರಾಗುವುದೂ ಕಷ್ಟಸಾಧ್ಯವಾಗುತ್ತದೆ ಎಂದು ಶಾಸಕ ಬಿ.ನಾಗೇಂದ್ರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.  ಬೇಲೇಕೇರಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರುವಂತಹ ಯಾವುದೇ ಪ್ರಮೇಯವಿಲ್ಲ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಆದರೆ, ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸ್ವಲ್ಪ ಕಷ್ಟವಾಗುತ್ತದೆ. ನಾಳೆಯೂ ನನಗೆ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಕೋರ್ಟ್‍ಗೆ ಹಾಜರಾಗಬೇಕಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಈ ಮೂಲಕ ಶಾಸಕಾಂಗ ಪಕ್ಷದ ಸಭೆಗೆ ಗೈರಾಗುವ ಮುನ್ಸೂಚನೆಯನ್ನು ನಾಗೇಂದ್ರ ಅವರು ನೀಡಿದ್ದಾರೆ ಎಂದೇ ಭಾವಿಸಲಾಗಿದೆ. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಗೈರು ಹಾಜರಾದರೆ ನಿಯಮ-10 (1) ಅನ್ವಯ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನೀಡಲಾಗಿದೆ. ಈ ನಡುವೆಯೂ ಶಾಸಕ ನಾಗೇಂದ್ರ ಅವರು ಈ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಆಪರೇಷನ್ ಕಮಲಕ್ಕೆ ನಾಗೇಂದ್ರ ಅವರು ಒಳಗಾಗಿದ್ದಾರೆ, ಮುಂಬೈನ ಹೊಟೇಲ್‍ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ನ್ಯಾಯಾಲಯದ ವಿಚಾರಣೆ ಇರುವುದರಿಂದ ಇಂದು ಅವರು ಬೆಂಗಳೂರಿಗೆ ಆಗಮಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸಿಎಲ್‍ಪಿಗೆ ಗೈರು ಹಾಜರಾಗುವ ಮುನ್ಸೂಚನೆ ನೀಡಿದ್ದಾರೆ. ಶಾಸಕ ಆನಂದ್‍ಸಿಂಗ್ ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದು, ಸರ್ಕಾರದ ಬಗ್ಗೆ ನಮ್ಮ ನಾಯಕರು ಮಾತನಾಡುತ್ತಾರೆ. ಪದೇ ಪದೇ ನನ್ನನ್ನು ಕೇಳಿದರೆ ನಾನೇನು ಹೇಳಲಿ.

ನಾನು ಕಾಂಗ್ರೆಸ್ ಪಕ್ಷ ತೊರೆಯುವುದಿಲ್ಲ. ನಾನೂ ಸಿಎಲ್‍ಪಿ ಸಭೆಗೆ ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‍ಗೌಡ, ಮಹೇಶ್ ಕುಮಟಹಳ್ಳಿ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಗುಡ್‍ಬೈ ಹೇಳಲಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಭಾಗವಾಗಿ ರಾಜ್ಯ ಬಿಜೆಪಿ ಶಾಸಕರು ಹರಿಯಾಣದ ಗುರುಗ್ರಾಮ ಹೊಟೇಲ್‍ನಲ್ಲಿ ಕಳೆದ ವಾರದಿಂದ ವಾಸ್ತವ್ಯ ಹೂಡಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದು, ರಹಸ್ಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಆಪರೇಷನ್ ಕಮಲ ಠುಸ್ ಆಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಹೇಳುತ್ತಿವೆ. ಇನ್ನೆರಡು ದಿನ ಕಾದು ನೋಡಿ ಎಂದು ಬಿಜೆಪಿ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ರಾಜಕೀಯ ಮೇಲಾಟ ಮುಂದುವರಿದಿದೆ. ಹಲವು ಅತೃಪ್ತ ಕೈ ಶಾಸಕರು ಕಾಂಗ್ರೆಸ್‍ನಲ್ಲೇ ಮುಂದುವರಿಯುವ ಹೇಳಿಕೆ ನೀಡಿದ್ದಾರೆ. ಇನ್ನೂ ಹಲವರು ಸಂಪರ್ಕಕ್ಕೆ ಸಿಕ್ಕಿಲ್ಲ. ಏನಾಗಲಿದೆಯೋ ಕಾದು ನೋಡಬೇಕು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا