Urdu   /   English   /   Nawayathi

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀನು ಸುರಿದ ಗೋವಾ ಅಧಿಕಾರಿಗಳು

share with us

ಕಾರವಾರ: 12 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಗೋವಾದ ಷರತ್ತುಗಳನ್ನು ಪಾಲಿಸಿ ರಾಜ್ಯದಿಂದ ಮೀನುಗಳನ್ನು ಸಾಗಿಸಿದ ಲಾರಿಯನ್ನೂ ಗಡಿಭಾಗ ಪೋಳೆಂ ಚೆಕ್‌ಪೋಸ್ಟ್‌ನಲ್ಲಿ ತಡೆಯಲಾಗಿದೆ. ಅಲ್ಲದೇ ಆ ಮೀನನ್ನು ಗೋವಾದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (ಎಫ್‌ಡಿಎ) ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿದಿದ್ದಾರೆ. ಈ ಮೂಲಕ ರಾಜ್ಯದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಜಿಲ್ಲಾ ಮೀನು ಮಾರಾಟಗಾರರ ಸಂಘದ ಕಾರ್ಯದರ್ಶಿ ಪ್ರವೀಣ ಜಾವಕರ್ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ರೋಹಿದಾಸ್ ತಾಂಡೇಲ್ ಎನ್ನುವವರು ಸುಮಾರು ₹ 10 ಲಕ್ಷ ಮೌಲ್ಯದ ಇಶ್ವಾಣ್ (ಕಿಂಗ್ ಫಿಶ್) ಮೀನನ್ನು ಗೋವಾಕ್ಕೆ ಕಳುಹಿಸಿದ್ದರು. ಲಾರಿಯ ಚಾಲಕ ರಾಮಣ್ಣ ಎನ್ನುವವರು ಇನ್ಸುಲೇಟೆಡ್ (ಸಂಪೂರ್ಣ ಮುಚ್ಚಿದ) ಲಾರಿಯ ಮೂಲಕ ಶನಿವಾರ ಗೋವಾಕ್ಕೆ ಕೊಂಡೊಯ್ದಿದ್ದರು. ಈ ವೇಳೆ ಗೋವಾ ಗಡಿ ಪೋಳೆಂನಲ್ಲಿ ಲಾರಿಯನ್ನು ಅಲ್ಲಿನ ಅಧಿಕಾರಿಗಳು ತಡೆದರು’ ಎಂದು ವಿವರಿಸಿದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆಸೆದರು: ‘ನಿಮ್ಮ ಲಾರಿಯಲ್ಲಿರುವ ಮೀನಿನಲ್ಲಿ ಫಾರ್ಮಲಿನ್ ಅಂಶ ಇದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಪರಿಶೀಲನೆ ಮಾಡಬೇಕು ಎಂದು ಪಣಜಿಯ ಎಫ್‌ಡಿಎ ಕಚೇರಿಗೆ ಲಾರಿಯನ್ನು ತೆಗೆದುಕೊಂಡು ಹೋದರು. ನಂತರ ಭಾನುವಾರ ಒಂದು ದಿನ ಪೂರ್ತಿ ಲಾರಿಯನ್ನು ಅಲ್ಲೇ ಇರಿಸಿಕೊಂಡರು. ಮೀನಿನಲ್ಲಿ ಫಾರ್ಮಲಿನ್ ಅಂಶ ಇಲ್ಲ ಎಂದು ಸೋಮವಾರ ತಿಳಿಸಿದರು. ಆದರೆ, ಮೀನುಗಳನ್ನು ಎಲ್ಲಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿಲ್ಲ. ಹೀಗಾಗಿ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ಆದೇಶದಂತೆ ಲಾರಿಯಲ್ಲಿರುವ ಮೀನನ್ನು ತ್ಯಾಜ್ಯಕ್ಕೆ ಎಸೆಯಲಾಗುವುದು ಎಂದು ಹೇಳಿದರು. ಈ ವೇಳೆ ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಬಿಡಲಿಲ್ಲ. ಕೊನೆಗೂ ಮೀನುಗಳನ್ನು ತ್ಯಾಜ್ಯ ಘಟಕಕ್ಕೆ ಸುರಿದರು’ ಎಂದು ದೂರಿದರು. ಈ ಕುರಿತು ಲಾರಿ ಚಾಲಕ ರಾಮಣ್ಣ ಮಾತನಾಡಿ, ‘ನಾವು ಗೋವಾ ರಾಜ್ಯದ ಷರತ್ತುಗಳನ್ನು ಪಾಲಿಸಿದ್ದೆವು. ಇನ್ಸುಲೇಟೆಡ್ ಲಾರಿಯಲ್ಲೇ ಮೀನನ್ನು ಕೊಂಡೊಯ್ದಿದ್ದೆವು. ಜತೆಗೆ, ನಮ್ಮ ಬಳಿ ಎಫ್‌ಡಿಎ ಪರವಾನಗಿ ಕೂಡ ಇತ್ತು. ಆದರೂ ಅಲ್ಲಿನ ಅಧಿಕಾರಿಗಳು ನಮ್ಮ ಬಳಿ ದುರ್ವರ್ತನೆ ತೋರಿದರು’ ಎಂದು ಆರೋಪಿಸಿದರು. ‘ಮೀನುಗಳನ್ನು ತ್ಯಾಜ್ಯಕ್ಕೆ ಎಸೆಯದಂತೆ ಕಾಲು ಹಿಡಿದು, ಕಣ್ಣೀರು ಸುರಿಸಿ ಬೇಡಿಕೊಂಡರೂ ಅಧಿಕಾರಿಗಳು ಕೇಳಲಿಲ್ಲ. ನಮ್ಮ ರಾಜ್ಯಕ್ಕೆ ವಾಪಸ್ ಹೋಗಲು ಅವಕಾಶ ನೀಡಿ ಅಥವಾ ಅನಾಥಾಶ್ರಮಗಳಿಗಾದರೂ ಈ ಮೀನನ್ನು ಕಳುಹಿಸಿಕೊಡಿ ಎಂದು ಕೇಳಿಕೊಂಡರೂ ಸ್ಪಂದಿಸಲಿಲ್ಲ’ ಎಂದು ಅಳಲು ತೋಡಿಕೊಂಡರು. ‘ಕೊನೆಗೆ ಅಲ್ಲಿನ ಅಧಿಕಾರಿಯೊಬ್ಬ, ಕರ್ನಾಟಕದವರು ಕಳ್ಳರು. ನಿಮ್ಮ ಮೀನು ನಮಗೆ ಬೇಡ. ಇಲ್ಲಿನ ಘಟನಾವಳಿಗಳನ್ನು ನಿಮ್ಮ ರಾಜ್ಯಕ್ಕೆ ಹೋಗಿ ತೋರಿಸು ಎಂದು, ತ್ಯಾಜ್ಯ ಮೀನನ್ನು ಸುರಿಯುವುದನ್ನು ವಿಡಿಯೊ ಮಾಡಿಸಿದರು’ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ, ಜಿಲ್ಲಾ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಗಣಪತಿ ‌ಮಾಂಗ್ರೆ, ಮೀನುಗಾರ ಮುಖಂಡ ರಾಜೇಶ್ ಮಾಜಾಳಿಕರ್ ಇದ್ದರು.

ರಾಜೀನಾಮೆಗೆ ಆಗ್ರಹ: ‘ಗೋವಾ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಅಲ್ಲಿನ ಮುಖ್ಯಮಂತ್ರಿಯ ಸಲಹೆಯನ್ನೂ ಕೇಳದೇ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮೀನಿನಲ್ಲಿ ಫಾರ್ಮಲಿನ್ ಅಂಶವಿದೆಯೆಂದು ಉಭಯ ರಾಜ್ಯಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಸ್ಥಾನಕ್ಕೆ ರಾಣೆ ಹಾತೊರೆಯುತ್ತಿದ್ದಾರೆ. ಅವರಿಂದ ಕೂಡಲೇ ರಾಜೀನಾಮೆ ಪಡೆಯಬೇಕು. ಅವರನ್ನು ರಾಜಕಾರಣದಿಂದಲೇ ದೂರ ಇಡಬೇಕು’ ಎಂದು ಗಣಪತಿ ಮಾಂಗ್ರೆ ಆಗ್ರಹಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا