Urdu   /   English   /   Nawayathi

ಮಂಡ್ಯ ಬಸ್ ದುರಂತ: ಚಾಲಕನಿಗೆ ಜಾಮೀನು ಮಂಜೂರು

share with us

ಮಂಡ್ಯ: 11 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಕನಗನಮರಡಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸ್ ಚಾಲಕನಿಗೆ ಜೆಎಂಎಫ್'ಸಿ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ನ.24 ರಂದು ಭೀಕರ ದುರಂತವೊಂದು ಸಂಭವಿಸಿತ್ತು. ಖಾಸಗಿ ಬಸ್ ವೊಂದು ನಾಲೆಗೆ ಬಿದ್ದು 30 ಮಂದಿ ಜಲಸಮಾಧಿಯಾಗಿತ್ತು. ದುರಂತ ಬಳಿಕ ಚಾಲಕ ತಲೆಮರೆಸಿಕೊಂಡಿದ್ದ. ಇದರಂತೆ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಪಾಂಡವಪುರ ಪಟ್ಟಣದ ಸಿವಿಲ್ ನ್ಯಾಯಾಲಯ ಚಾಲಕನಿಗೆ ಜಾಮೀನು ನೀಡಿದೆ. 

ವಿಚಾರಣೆ ವೇಳೆ ಹೇಳಿಕೆ ನೀಡಿರುವ ಚಾಲಕ, ಕನಗನಮರಡಿ ನಾಲೆಯ ಬಳಿ ಬರುತ್ತಿದ್ದ ವೇಳೆ ಬಸ್ ನನ್ನ ನಿಯಂತ್ರಣ ತಪ್ಪಿತ್ತು. ಈ ವೇಳೆ ಬಸ್ ನಾಲೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿತ್ತು. ಇದನ್ನು ತಪ್ಪಿಸಲು ಪ್ರಯತ್ನಿಸಿದಾಗ ದುರಾದೃಷ್ಟವಶಾತ್ ಬಸ್ ನಾಲೆಗೆ ಉರುಳಿ ಬಿದ್ದಿತ್ತು ಎಂದು ಹೇಳಿದ್ದಾನೆ. ಬಸ್ ಚಾಲನೆಯಲ್ಲಿ ನನಗೆ 25 ವರ್ಷಗಳ ಅನುಭವವಿದೆ. ಈ ಹಿಂದೆಂದೂ ಇಂತಹ ಘಟನೆಗಳಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅಪಘಾತವಾಗಿದೆ ಎಂದು ಹೇಳಿಕೊಂಡಿದ್ದಾನೆ.  ಘಟನೆ ಸಂಭವಿಸಿದ ಬಳಿಕ ಪತ್ನಿಗೆ ಕರೆ ಮಾಡಿದ್ದ ಆರೋಪಿ ಚಾಲಕ ಶಿವಣ್ಣ ವಿಷಯ ತಿಳಿಸಿದ್ದಾನೆ. ನಂತರ ಬೆಂಗಳೂರಿಗೆ ಬಂದು ಖಾಸಗಿ ಹೋಟೆಲ್ ವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡಲು ಆರಂಭಿಸಿದ್ದ. ಈತನ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಟಿವಿ ಚಾನೆಲ್ ಹಾಗೂ ಸುದ್ದಿ ಪತ್ರಿಕೆಗಳ ಮೂಲಕ ಮಾಹಿತಿ ತಿಳಿದುಕೊಳ್ಳುತ್ತಿದ್ದ ಆರೋಪಿ ಶಿವಣ್ಣ, ಪತ್ನಿ ಜೊತೆಗೆ ಮಾತನಾಡಿದ ಬಳಿಕ ತನ್ನ ಮೊಬೈಲ್'ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಘಟನೆ ನಡೆದ ಮಾರನೆಯ ದಿನ ಶಿವಣ್ಣ ಬೆಂಗಳೂರಿಗೆ ಹೋಗಿದ್ದ ಎಂಬ ಮಾಹಿತಿಯನ್ನು ಆತನ ಸಂಬಂಧಿಕರು ನೀಡಿದ್ದರು. ಈ ಮಾಹಿತಿಯನ್ನು ಹಿಡಿದ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿ ಸೋಮವಾರ ಬಂಧನಕ್ಕೊಳಪಡಿಸಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا