Urdu   /   English   /   Nawayathi

ಗ್ಯಾಸ್ ಕಟರ್ ಬಳಸಿ ಬೆಂಗಳೂರಿನ ರಾಜಾಜಿನಗರ ಆಂಧ್ರಬ್ಯಾಂಕ್‍ ಎಟಿಎಂ ದರೋಡೆಗೆ ವಿಫಲ ಯತ್ನ

share with us

ಬೆಂಗಳೂರು: 26 ನವೆಂಬರ್ (ಫಿಕ್ರೋಖಬರ್ ಸುದ್ದಿ) ಮಧ್ಯರಾತ್ರಿ ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್ ಆವರಣ ಪ್ರವೇಶಿಸಿದ ದರೋಡೆಕೋರನೊಬ್ಬ ಸಿಸಿ ಕ್ಯಾಮೆರಾಕ್ಕೆ ರಾಸಾಯನಿಕ ಸಿಂಪಡಿಸಿ ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರ ಮುರಿದು ಹಣ ದೋಚಲು ವಿಫಲ ಯತ್ನ ನಡೆಸಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ನವರಂಗ್ ಬಾರ್ ಸಮೀಪದ ಆಂಧ್ರಬ್ಯಾಂಕ್‍ನ ರಾಜಾಜಿನಗರ ಶಾಖೆಯಲ್ಲಿನ ಎಟಿಎಂ ಸೆಂಟರ್‍ನಲ್ಲಿ ಈ ಘಟನೆ ನಡೆದಿದೆ. ಖ್ಯಾತ ಚಿತ್ರನಟ ಅಂಬರೀಶ್ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟುಡಿಯೋ ಆವರಣದಲ್ಲಿ ನೆರವೇರುತ್ತಿರುವುದರಿಂದ ಪೊಲೀಸರು ಅತ್ತ ಗಮನಹರಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಎಟಿಎಂ ಮುರಿದು ಹಣ ದೋಚಬಹುದು ಎಂದು ಲೆಕ್ಕಾಚಾರ ಹಾಕಿದ್ದ ದರೋಡೆಕೋರ ಎಟಿಎಂ ಲೂಟಿ ಮಾಡಲು ಸಂಚು ರೂಪಿಸಿದ್ದ. ಅದರಂತೆ ಬೆಳಗಿನಜಾವ 3.30ರ ಸಮಯದಲ್ಲಿ ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್ ಆವರಣ ಪ್ರವೇಶಿಸಿದ ದರೋಡೆಕೋರ, ತಾನು ತಂದಿದ್ದ ರಾಸಾಯನಿಕ ವಸ್ತುವನ್ನು ಸಿಸಿ ಕ್ಯಾಮೆರಾಕ್ಕೆ ಸಿಂಪಡಿಸಿ ನಂತರ ಗ್ಯಾಸ್ ಸಿಲಿಂಡರ್ ಮತ್ತು ಕಟರ್‍ನಿಂದ ಎಟಿಎಂ ಮುರಿದು ಹಣ ದೋಚಲು ಯತ್ನಿಸಿದ್ದಾನೆ. ಎಟಿಎಂ ಮುರಿಯುತ್ತಿದ್ದಂತೆ ಬ್ಯಾಂಕ್‍ಗೆ ಭದ್ರತಾ ವ್ಯವಸ್ಥೆ ಅಳವಡಿಸಿದ್ದ ಮುಂಬೈನಲ್ಲಿರುವ ನಿಶಾ ಸೆಕ್ಯೂರಿಟಿ ಸಂಸ್ಥೆಯಲ್ಲಿ ಅಲಾರಾಂ ಬಾರಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಅಲ್ಲಿನ ಸಿಬ್ಬಂದಿ ಕೂಡಲೇ ರಾಜಾಜಿನಗರ ಆಂಧ್ರಬ್ಯಾಂಕ್ ಶಾಖೆಯ ಮುಖ್ಯ ವ್ಯವಸ್ಥಾಪಕರನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ಮಾಹಿತಿ ರವಾನಿಸಿದ್ದಾರೆ. ಭದ್ರತಾ ಸಿಬ್ಬಂದಿಯವರು ವಿಷಯ ತಿಳಿಸಿದ ತಕ್ಷಣ ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕರಾದ ಸಿರಿಲ್.ಎಂ ಅವರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆಗೆ ದರೋಡೆಕೋರ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ನಗರದ ಹಲವು ಪ್ರದೇಶಗಳಲ್ಲಿ ನಾಕಾಬಂಧಿ ನಿರ್ಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಎಟಿಎಂ ದರೋಡೆ ಮಾಡಲು ಎಷ್ಟು ಮಂದಿ ದರೋಡೆಕೋರರು ಬಂದಿದ್ದರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಸಿಸಿ ಕ್ಯಾಮೆರಾದಲ್ಲಿ ಒಬ್ಬ ದರೋಡೆಕೋರನು ಮಾತ್ರ ಕಾಣಿಸುತ್ತಿದ್ದಾನೆ. ಬ್ಯಾಂಕ್‍ಗೆ ಅಳವಡಿಸಲಾಗಿರುವ ಅತ್ಯಾಧುನಿಕ ಅಲಾರಾಂ ವ್ಯವಸ್ಥೆಯಿಂದ ದರೋಡೆ ಯತ್ನ ವಿಫಲವಾಗಿದ್ದು, ಆದಷ್ಟು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ರಾಜಾಜಿನಗರ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا