Urdu   /   English   /   Nawayathi

ಮಹಿಳೆಗೆ ಅಪಮಾನವಾಗಿದ್ದರೆ ರಾಜೀನಾಮೆ ನೀಡಲು ಸಿದ್ಧ: ಹೇಳಿಕೆ ಸಮರ್ಥಿಸಿಕೊಂಡ ಸಿಎಂ

share with us

ಬೆಂಗಳೂರು: 19 ನವೆಂಬರ್ (ಫಿಕ್ರೋಖಬರ್ ಸುದ್ದಿ) ನಾನು ಮಹಿಳೆಗೆ ಅವಮಾನ ಮಾಡಿದ್ದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ರೈತ ಮಹಿಳೆ ಬಗ್ಗೆ ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಹೆಣ್ಣುಮಗಳ ಬಗ್ಗೆ ನಾನು ಯಾವುದೇ ಕೆಟ್ಟ ಪದ ಬಳಸಿಲ್ಲ. ಅಗೌರವ ತೋರುವಂತಹ ಪದ ಬಳಸಿಲ್ಲ. ಅದು ಬಾಯ್ತಪ್ಪಿ ಹೇಳಿದ ಮಾತೂ ಅಲ್ಲ. ಗ್ರಾಮೀಣ ಭಾಷೆಯಲ್ಲಿ ಮಾತನಾಡುವಂತೆ ಮಹಿಳೆಗೆ ತಾಯಿ ಎಂಬ ಪದ ಬಳಸಿದ್ದೇನೆ. ತಾಯಿ ,ಇಷ್ಟು ದಿನ ಎಲ್ಲೋಗಿದ್ದೆ, ಎಲ್ಲಿ ಮಲಗಿದ್ದೆ ಎಂದಿದ್ದೆ. ಮಹಿಳೆಗೆ ತಾಯಿ ಎಂಬ ಪದ ಬಳಸಿದ್ದೇನೆ.

ಎಂದು ಹೇಳಿದ್ದೇನೆ. ಆದರೆ, ಅವರೆಲ್ಲ ನನ್ನನ್ನು ನಾಲಾಯಕ್ ಮುಖ್ಯಮಂತ್ರಿ ಎಂದು ಏಕವಚನದಲ್ಲಿ ಜರಿದಿದ್ದಾರೆ. ವೈಯಕ್ತಿಕ ಜೀವನ ಇರಲಿ ಯಾವುದೇ ಇರಲಿ, ಮಹಿಳೆಗೆ ಅವಮಾನ ಮಾಡಿದ್ದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳು ನಿನ್ನೆ ಬೆಳಗಾವಿಗೆ ಹೋಗಿ ರೈತರ ಜತೆ ಮಾತುಕತೆ ನಡೆಸಿದ್ದಾರೆ. ಕಬ್ಬಿನ‌ ಬಾಕಿ ವಿವರ ಪಡೆದಿದ್ದಾರೆ. ನಮ್ಮ ಸರ್ಕಾರ ಬರುವ ಮೊದಲು 2,500 ಕೋಟಿ ರು. ಬಾಕಿ ಇತ್ತು. ನಂತರ ನಮ್ಮ ಸಚಿವರು ಆಸಕ್ತಿ ವಹಿಸಿ ಬಾಕಿ ಪಾವತಿ ಮಾಡಿಸಿದ್ದಾರೆ. ಈಗ ಬಾಕಿ ಉಳಿದಿರುವುದು ಕೇವಲ 35 ಕೋಟಿ ಮಾತ್ರ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕಾರ್ಖಾನೆ ಮಾಲೀಕರಿಂದ ಬಾಕಿ ಇರುವ ಪ್ರಮಾಣ ಶೇ. 0.36ರಷ್ಟು ಮಾತ್ರ ಎಂದು ಎಚ್ ಡಿಕೆ ಮಾಹಿತಿ ನೀಡಿದರು.

ಪ್ರತಿಭಟನೆ ಹೆಸರಲ್ಲಿ ನನ್ನ ಪ್ರತಿಕೃತಿ ನಿರ್ಮಿಸಿ, ಅದಕ್ಕೆ ಫೋಟೋ ಹಾಕಿದ್ದಾರೆ. ಆ ಫೋಟೋಗೆ ಕೊಡಲಿಯಿಂದ ಹೊಡೆಯುವ ದೃಶ್ಯವನ್ನು ಮಾಧ್ಯಮದಲ್ಲಿ ಪದೇ ಪದೇ ತೋರಿಸಲಾಗುತ್ತಿದೆ. ನಾನೇನು ತಪ್ಪು ಮಾಡಿದ್ದೇನೆ?  ಕೊಡಲಿಯಲ್ಲಿ ಹೊಡೆಯುವ ರೈತನನ್ನು ಸಭೆಗೆ ಕರೆದಿದ್ದೇನೆ. ಚರ್ಚೆ ಮಾಡುತ್ತೇನೆ. ಅಷ್ಟು ಸುಲಭವಾಗಿ ನಾನು ಹೆದರುವವನಲ್ಲ ಎಂದರು.

ಇದೇ ವೇಳೆ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ನಾನು ಕ್ಷಮೆ ಕೇಳಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಬಿಜೆಪಿಯವರು ಸದನಕ್ಕೆ ಬಂದರೆ ಚರ್ಚೆ ಮಾಡುತ್ತೇನೆ. ಕೆಲವು ಪ್ರಾಯೋಜಿತ ಪ್ರತಿಭಟನೆ ಬಗ್ಗೆಯೂ ನನಗೆ ಗೊತ್ತು. ಗೊಬ್ಬರ ಕೊಡಿ ಎಂದು ಬಂದ ರೈತರಿಗೆ ಗುಂಡಿಟ್ಟವರು ಈಗ ದೇವೇಗೌಡರ ಬಗ್ಗೆ ಮಾತಾಡುತ್ತಾರೆ. ನನಗೇ ಬುದ್ದಿ ಹೇಳ್ತೀರಾ ಯಡಿಯೂರಪ್ಪನವರೇ? ನಾನೆಂದೂ ನಿಮ್ಮ ಹಾಗೆ ದುರಹಂಕಾರದಿಂದ ವರ್ತಿಸಿಲ್ಲ ಎಂದು ಕಿಡಿಕಾರಿದರು. 10ರಿಂದ 20 ವರ್ಷ ಸಿಎಂ ಆಗಿರುತ್ತೇನೆ ಎಂದು ಎಲ್ಲೂ ಹೇಳಿಲ್ಲ. 2006ರಲ್ಲಿಯೂ ನಾವು 38 ಶಾಸಕರಿದ್ದೆವು. ಆಗ ನಿಮ್ಮ ಜೊತೆ ಸರ್ಕಾರ ಮಾಡಿದ್ದೆವು. ನೀವೇ ಗೋಗರೆದಿದ್ದಕ್ಕೆ ಸರ್ಕಾರ ರಚನೆ ಮಾಡಿದ್ದೆ. ನಿಮ್ಮಿಂದ ಈಗ ನಾನು ಹೇಳಿಸಿಕೊಳ್ಳಬೇಕಾ? ಎಂದು ಯಡಿಯೂರಪ್ಪ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا