Urdu   /   English   /   Nawayathi

ರೆಡ್ಡಿ ಡೀಲ್ ಪ್ರಕರಣ ತನಿಖೆ ಮಾಡಿದ್ದ 3 ಅಧಿಕಾರಿಗಳು ದಿಢೀರ್ ವರ್ಗಾವಣೆ!

share with us

ಬೆಂಗಳೂರು: 15 ನವೆಂಬರ್ (ಫಿಕ್ರೋಖಬರ್ ಸುದ್ದಿ) ಜನಾರ್ಧನ ರೆಡ್ಡಿ ಡೀಲ್ ಪ್ರಕರಣದ ತನಿಖೆ ಮಾಡಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳನ್ನುಬುಧವಾರ ದಿಢೀರ್ ವರ್ಗಾವಣೆ ಮಾಡಲಾಗಿದೆ. ಪ್ರಮುಖವಾಗಿ ಇಡಿ ಡೀಲ್ ಪ್ರಕರಣದಲ್ಲಿ ಬಳ್ಳಾರಿಯ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಲಭ್ಯವಾದ ಬೆನ್ನಲ್ಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆ ಪ್ರಕರಣದ ತನಿಖಾ ತಂಡದಲ್ಲಿದ್ದ ಸಿಸಿಬಿಯ ಮೂವರು ಎಸಿಪಿಗಳನ್ನು ಬುಧವಾರ ದಿಢೀರ್‌ ವರ್ಗಾವಣೆ ಮಾಡಿದ್ದಾರೆ. ಇಲಾಖೆ ಮೂಲಗಳು ತಿಳಿಸಿರುವಂತೆ ಸಿಸಿಬಿಯ ಎಸಿಪಿಗಳಾದ ಪಿ.ಟಿ.ಸುಬ್ರಹ್ಮಣ್ಯ, ಎಂ.ಎಚ್‌.ಮಂಜುನಾಥ್‌ ಚೌಧರಿ ಹಾಗೂ ಮರಿಯಪ್ಪ ಅವರನ್ನು ವರ್ಗಾಯಿಸಲಾಗಿದೆ.

ಅವರಿಂದ ತೆರವಾದ ಸ್ಥಾನಗಳಿಗೆ ಎಸಿಪಿಗಳಾಗಿ ಬಿ.ಬಾಲರಾಜು, ಶೋಭಾ ಕಟಾವ್ಕರ್‌, ಬಿ.ಆರ್‌.ವೇಣುಗೋಪಾಲ್‌ ಹಾಗೂ ಇನ್ಸ್‌ಪೆಕ್ಟರ್ ಗಳಾದ ಸಿ.ನಿರಂಜನ್‌ ಕುಮಾರ್‌ ಮತ್ತು ಕೆ.ಅಂಜನ್‌ ಕುಮಾರ್‌ ಅವರನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಅವರು ಆದೇಶಿಸಿದ್ದಾರೆ.

ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಷ್ಟೇ, ವರ್ಗಾವಣೆ ಹಿಂದೆ ವಿವಾದವಿಲ್ಲ

ಇನ್ನು ವರ್ಗಾವಣೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಇಲಾಖೆ, 'ಬೆಂಗಳೂರಿನಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿ ಕಾರ್ಯನಿರ್ವಹಿಸಿದ ಕಾರಣಕ್ಕೆ ಎಸಿಪಿಗಳ ವರ್ಗಾವಣೆಯಾಗಿದೆ. ಹೀಗಾಗಿ ಅಧಿಕಾರಿಗಳ ವರ್ಗಾಣೆಗೂ ತನಿಖೆಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ತನಿಖಾ ತಂಡದಲ್ಲಿನ ಅಧಿಕಾರಿಗಳ ಬದಲಾವಣೆಯೂ ಚರ್ಚೆಗೆ ಕಾರಣವಾಗಿದೆ.

ಎಸಿಪಿಗಳಾದ ಪಿ.ಟಿ.ಸುಬ್ರಹ್ಮಣ್ಯ, ಎಂ.ಎಚ್‌.ಮಂಜುನಾಥ್‌ ಚೌಧರಿ ಹಾಗೂ ಮರಿಯಪ್ಪ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ಕಾರ್ಯಾಚರಣೆಗೆ ರಚಿಸಲಾಗಿದ್ದ ತನಿಖಾ ದಳಗಳ ನೇತೃತ್ವ ವಹಿಸಿದ್ದರು. ಈ ಪೈಕಿ ಮಂಜುನಾಥ ಚೌಧರಿ ಅವರು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ಹಾಗೆಯೇ ಸುಬ್ರಹ್ಮಣ್ಯ ಅವರು ಹೈದರಾಬಾದ್‌ನಲ್ಲಿ ಬೀಡುಬಿಟ್ಟು ರೆಡ್ಡಿ ಅವರಿಗೆ ಹುಡುಕಾಟ ನಡೆಸಿದ್ದರು.

ಅಲೋಕ್‌ ಆಪ್ತರ ನೇಮಕ

ಸಿಸಿಬಿಗೆ ಐದು ವರ್ಷದ ಸೇವಾವಧಿ ಕಾಲಮಿತಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ನಗರದಿಂದ ಹೊರಹೋಗಿದ್ದ ಡಿವೈಎಸ್ಪಿಗಳಾದ ಬಿ.ಬಾಲರಾಜ್‌, ವೇಣುಗೋಪಾಲ್‌ ಮರು ಪ್ರವೇಶ ಪಡೆದಿದ್ದಾರೆ. ಇನ್ನು ಮೂವರು ಎಸಿಪಿಗಳ ಪೈಕಿ ಇಬ್ಬರನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರ ಶಿಫಾರಸಿನ ಮೇರೆಗೆ ವರ್ಗಾವಣೆ ಮಾಡಲಾಗಿದೆ. ರೆಡ್ಡಿ ವಿರುದ್ಧ ಕಾನೂನು ಹೋರಾಟದಲ್ಲಿ ಹಿನ್ನಡೆ ಉಂಟಾದ ಕಾರಣಕ್ಕೆ ಅಲೋಕ್‌ ಕುಮಾರ್‌, ತನಿಖೆಯಲ್ಲಿ ಚಾಣಾಕ್ಷರು ಎನ್ನಲಾದ ಬಿ.ಬಾಲರಾಜ್‌ ಅವರನ್ನು ಮತ್ತೆ ಸಿಸಿಬಿಗೆ ಕರೆ ತಂದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا