Urdu   /   English   /   Nawayathi

ಜೊತೆಗೂಡಿ ಹೋರಾಡಲು ಪಣ

share with us

ಬೆಂಗಳೂರು: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) "ಹನ್ನೆರಡು ವರ್ಷಗಳ ದ್ವೇಷ' ಮುಗಿದಿದೆ. ಒಂದು ಕಾಲದ ಗುರು ಶಿಷ್ಯರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹದಿಮೂರು ವರ್ಷಗಳ ತರುವಾಯ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಮುಂಬರುವ ಉಪಚು ನಾವಣೆಯಲ್ಲಿ ಜತೆಗೂಡಿಯೇ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.

"ಬಿಜೆಪಿ ವಿರುದ್ಧ ಹೋರಾಟ ನಮ್ಮ ಗುರಿ. ಅದಕ್ಕಾಗಿ ವೈಯಕ್ತಿಕವಾಗಿ ಹಿಂದಿನ ಎಲ್ಲ ಕಹಿ ಘಟನೆಗಳನ್ನು ಮರೆತು ಒಂದಾಗಿ ಮುನ್ನಡೆಲು ತೀರ್ಮಾನಿಸಿದ್ದೇವೆ''ಎಂದು ಇಬ್ಬರೂ ನಾಯಕರು ಘೋಷಿಸುವ ಮೂಲಕ ರಾಜ್ಯ ರಾಜಕೀಯದ ಹೊಸ ಧ್ರುವೀಕರಣದ ಸುಳಿವು ನೀಡಿದರು. ಮೊದಲ ಹಂತವಾಗಿ,ಅ.30 ರಂದು ಶಿವಮೊಗ್ಗದಲ್ಲಿ ಆಯೋಜಿಸಿರುವ ಬೃಹತ್‌ ಸಮಾರಂಭದಲ್ಲಿ ಸಿದ್ದರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ ಎಲ್ಲರೂ ಒಂದೇ ವೇದಿಕೆಯಡಿ ಜೆಡಿಎಸ್‌-ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡಲಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಎಚ್‌.ಡಿ.ದೇವೇಗೌಡ, ರಾಷ್ಟ್ರ ರಾಜಕಾರಣ ಕವಲು ದಾರಿಯತ್ತ ಸಾಗುತ್ತಿದೆ. ನರೇಂದ್ರಮೋದಿಯವರು ಅಧಿಕಾರಕ್ಕೆ ಬಂದ ನಂತರ ನೆಮ್ಮದಿಯ ವಾತಾವರಣ ಇಲ್ಲ. ನಾನಾ ರೀತಿಯ ಸಂಕಷ್ಟಗಳು ಎದುರಾಗಿವೆ.ಹೀಗಾಗಿ, ಜಾತ್ಯತೀತ ಶಕ್ತಿಗಳು ಒಟ್ಟಾಗುವ ತೀರ್ಮಾನದಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೆವು.ಇದೀಗ ಉಪ ಚುನಾವಣೆಯಲ್ಲಿ ಒಟ್ಟಾಗಿ ಎರಡೂ ಪಕ್ಷಗಳು ಪ್ರಚಾರ ಮಾಡುತ್ತೇವೆ. ಐದೂ ಕ್ಷೇತ್ರ ಗೆಲ್ಲುತ್ತೇವೆ ಎಂದು ತಿಳಿಸಿದರು.

ದೇಶದಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಕೋಮುವಾದಿ ಬಿಜೆಪಿಗೆ ಸೂಕ್ತ ಪಾಠ ಕಲಿಸಲಿದ್ದೇವೆ. ಹನ್ನೆರಡು ವರ್ಷಗಳ ನಂತರ ನಾನು ಸಿದ್ದರಾಮಯ್ಯ ಒಟ್ಟಾಗಿದ್ದೇವೆ.ನಾವು ವೈಯಕ್ತಿಕ ಹಿತಾಸಕ್ತಿಗೆ ಒಂದಾಗಿಲ್ಲ. ಭವಿಷ್ಯದ ಹಿತದೃಷ್ಟಿಯಿಂದ ಹಳೆಯದನ್ನೆಲ್ಲ ಮರೆತು ಮುನ್ನಡೆಯಲು ತೀರ್ಮಾನಿಸಿದ್ದೇವೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧದ ಹೋರಾಟ ಕರ್ನಾಟಕದ ನೆಲದಿಂದಲೇ ಪ್ರಾರಂಭವಾಗಿದೆ''ಎಂದು ಹೇಳಿದರು.

ದೇವೇಗೌಡರು ಡಿ.ಕೆ.ಶಿವಕುಮಾರ್‌ ಒಂದಾಗಿಬಿಟ್ಟರು. ಸಿದ್ದರಾಮಯ್ಯ ದೇವೇಗೌಡರು ಒಂದಾದರೂ ಅಂತ ಕೆಲವು ಕುಹಕ ಆಡಬಹುದು.ಆದರೆ,ನಾನು ನಿನ್ನೆಯ ತನಕದ ಎಲ್ಲ ವಿಷಯ ಮರೆತಿದ್ದೇನೆ.ಮುಂದಿನದು ಮಾತ್ರ ನಮ್ಮ ಮುಂದಿರುವ ಗುರಿ ಎಂದರು.

ಒಂದಾದರೆ ಬಿಜೆಪಿ ಸೋಲಿಸಲು ಸಾಧ್ಯ:
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಜಾತ್ಯತೀತ ಶಕ್ತಿಗಳು ಒಂದಾದಾರೆ ಕೋಮುವಾದಿ ಬಿಜೆಪಿ ಸೋಲಿಸಲು ಸಾಧ್ಯ ಎಂಬ ಕಾರಣಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಒಂದಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಅದೇ ರೀತಿ ಉಪ ಚುನಾವಣೆ
ಯಲ್ಲೂ ಒಟ್ಟಾಗಿ ಹೋರಾಟ ಮಾಡುತ್ತೇವೆ . ತಳಮಟ್ಟದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿಯೇ ಕೆಲಸ ಮಾಡಲು ಮನವಿ ಮಾಡಲಿದ್ದೇವೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಕಾರ್ಯಕರ್ತರು ಎಂದೂ ಬಿಜೆಪಿ ಪರ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

"ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ರೈತರು, ಬಡಜನರು ಸಂಕಷ್ಟದಲ್ಲಿದ್ದಾರೆ. ಚುನಾವಣೆಗೆ ಮುಂಚೆ ನೀಡಿದ್ದ ಆಶ್ವಾಸನೆಗಳು ಈಡೇರಿಸಿಲ್ಲ. ಬಿಜೆಪಿ ಸೋಲಿಸುವ ನಮ್ಮ ಉದ್ದೇಶ ಈಡೇರಲಿದೆ. ಅದಕ್ಕೆ ಕರ್ನಾಟಕ ಸಾಕ್ಷಿಯಾಗಲಿದೆ. ರಾಷ್ಟ್ರ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತಿದೆ ಎಂಬುದು ದೇವೇಗೌಡರಿಗೆ ಗೊತ್ತಿದೆ. ಅವರಷ್ಟು ಮಾಹಿತಿ ಗೊತ್ತಿದ್ದವರು ಬೇರೆ ಇಲ್ಲ. ಅವರು ಜಾತ್ಯತೀತ ಶಕ್ತಿಗಳ ಒಗ್ಗೂಡಿಸಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಲಿದ್ದಾರೆ'' ಎಂದು ತಿಳಿಸಿದರು.

ದೇಹ ಎರಡಷ್ಟೇ!
ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರನ್ನು ಎರಡು ದೇಹ,ಒಂದೇ ಮನಸ್ಸು ಎಂದು ಮುಖ್ಯ ಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಬಣ್ಣಿಸಿದರು.

"ಇವರಿಬ್ಬರು ರಾಜಕೀಯ ಕಾರಣಗಳಿಗಾಗಿ ಕೆಲಕಾಲ ದೂರವಾಗಿದ್ದರು. ಇದೊಂದು ಐತಿಹಾಸಿಕ ದಿನ. ಇದೀಗ ಇಬ್ಬರೂ ನಾಯಕರು ಒಟ್ಟಾಗಿದ್ದಾರೆ. ಒಂದೇ ವೇದಿಕೆಯಲ್ಲಿ ರಾಜ್ಯದ ಜನತೆಗೆ ಸಂದೇಶ ರವಾನಿಸಿದ್ದಾರೆ. ಇದು ಮುಂದಿನ ಚುನಾವಣೆಗೂ ದಿಕ್ಸೂಚಿಯಾಗಲಿದೆ. ರಾಜ್ಯವಷ್ಟೇ ಅಲ್ಲದೆ ರಾಷ್ಟ್ರ ಮಟ್ಟದ ಬದಲಾವಣೆಗಳಿಗೂ ಇದು ಕಾರಣವಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಇದೇ ವೇಳೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫ‌ಲವಾಗಿದೆ. ಉಪ ಚುನಾವಣೆಯಲ್ಲಿ ನಾವು ಎಲ್ಲ ಕ್ಷೇತ್ರ ಗೆಲ್ಲುತ್ತೇವೆ ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಡಿ.ಕೆ.ಶಿವಕುಮಾರ್‌ ಹಾಜರಿದ್ದರು.

ದೇವೇಗೌಡ ಗರಂ
"ಹಿಂದಿನದೆಲ್ಲಾ ಮುಗಿದ ಅಧ್ಯಾಯ. ನೀವು ಹಳೆಯದು ನೆನಪಿಸಿ ನಮ್ಮ ಮನಸ್ಸುಗಳಲ್ಲಿ ಒಡಕು ತರುವ ಕೆಲಸ ಮಾಡಬೇಡಿ ಪ್ಲೀಸ್‌''ಹೀಗೆ ಹೇಳಿದ್ದು ಮಾಜಿ ಪ್ರಧಾನಿ ದೇವೇಗೌಡ. ಈ ಹಿಂದೆ ಪರಸ್ಪರ ಟೀಕೆ ಮಾಡಿಕೊಂಡ ನೀವು ಒಟ್ಟಾದರೆ ತಳಮಟ್ಟದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗುತ್ತಾರಾ ಎಂಬ ಪ್ರಶ್ನೆಗೆ ಗೌಡ ಉತ್ತರ ಇದಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಈ ಉಪ ಚುನಾವಣೆಯಲ್ಲಿ ಪ್ರಮುಖ ವಿಚಾರವೇ ಎಂದಾಗ, ""ನಾವು ಉಪ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುವ ತೀರ್ಮಾನ ಪ್ರಕಟಿಸಲು ಬಂದಿದ್ದೇವೆ. ಬೇರೆ ವಿಚಾರ ಇಲ್ಲಿ ಅನಗತ್ಯ'' ಎಂದು ಸಿಡುಕಿದರು.

ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಹೋರಾಟ ಮಾಡುವುದರಿಂದ ಬಿಜೆಪಿ ಬಲವರ್ಧನೆಯಾಗುವುದಿಲ್ಲವೇ? ಜೆಡಿಎಸ್‌- ಕಾಂಗ್ರೆಸ್‌ ತನ್ನ ಐಡೆಂಟಿಟಿ ಕಳೆದುಕೊಳ್ಳುವುದಿಲ್ಲವೇ ಎಂಬ ಪ್ರಶ್ನೆಗಳಿಗೆ, ಕೊಂಚ ಸಿಟ್ಟಾಗಿಯೇ ಉತ್ತರಿಸಿದ ದೇವೇಗೌಡರು, ""ನೀವು ಸಮಾಧಾನದಿಂದ ಇರಬೇಕು. ನಾವೇನೂ ಅಧಿಕಾರ ದಾಹಕ್ಕಾಗಿ ಇಲ್ಲಿ ಬಂದು ಕುಳಿತಿಲ್ಲ. ನಾವಿಬ್ಬರೂ ಒಟ್ಟಾಗುವುದು ನಿಮಗೆ ಇಷ್ಟವಿಲ್ಲವೇ? ಹಿಂದೆ ಮಾಧ್ಯಮಗಳಲ್ಲಿ ಏನೆಲ್ಲಾ ಆಗಿದೆ, ನನ್ನ ಮತ್ತು ರಾಮಕೃಷ್ಣ ಹೆಗಡೆ ನಡುವೆ ಏನೆಲ್ಲಾ ನಡೆದಿದೆ ಎಂದು ಬರೆದರು. ಅವೆಲ್ಲವೂ ಗೊತ್ತಿದೆ, ಸುಮ್ನನಿರಿ ಎಂದರು. ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಬೇಸರ  ಇರಬಹುದು. ಅವರ ಮನವೊಲಿಸುತ್ತೇವೆ ಒಟ್ಟಿಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು.

ನಾನು ನಿನ್ನೆಯ ತನಕದ ಎಲ್ಲ ವಿಷಯ ಮರೆತಿದ್ದೇನೆ. ಮುಂದಿನದು ಮಾತ್ರ ನಮ್ಮ ಮುಂದಿರುವ ಗುರಿ.
- ಎಚ್‌ ಡಿ ದೇವೇಗೌಡ

ರಾಷ್ಟ್ರ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತಿದೆ ಎಂಬುದು ದೇವೇಗೌಡರಿಗೆ ಗೊತ್ತಿದೆ. ಅವರಷ್ಟು ಮಾಹಿತಿ ಗೊತ್ತಿದ್ದವರು ಬೇರೆ ಇಲ್ಲ.
- ಸಿದ್ದರಾಮಯ್ಯ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا