Urdu   /   English   /   Nawayathi

ಬೃಹತ್ ನಕಲಿ ಅಂಕಪಟ್ಟಿ ಜಾಲ ಪತ್ತೆ, ಕೇವಲ 15 ಸಾವಿರಕ್ಕೆ ಸಿಗುತ್ತೆ ಮಾರ್ಕ್ಸ್ ಕಾರ್ಡ್..!

share with us

ಬೆಂಗಳೂರು/ತುಮಕೂರು: 21 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬೃಹತ್ ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿದೆ. ನಕಲಿ ಅಂಕಪಟ್ಟಿ ಜಾಲದಿಂದಾಗಿ ರಾಜ್ಯದ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗುವ ಸಾಧ್ಯತೆ ಗೋಚರಿಸುತ್ತಿದೆ. ಹಣ ನೀಡಿದರೆ ಯಾವುದೇ ಪದವಿಯ ಅಂಕಪಟ್ಟಿಯನ್ನು ಮುಕ್ತ ವಿಶ್ವವಿದ್ಯಾಲಯ ಒಂದರ ಹೆಸರಿನಲ್ಲಿ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ. ಒಂದು ಪದವಿ ಕೋರ್ಸ್‍ನ ಅಂಕಪಟ್ಟಿ ಬೇಕಾದರೆ ಕೇವಲ 15000 ಸಾವಿರ ರೂ. ನೀಡಿದರೆ ಅದು ನಿಮ್ಮ ಕಾಲ ಬುಡಕ್ಕೆ ಬಂದು ಬೀಳುತ್ತದೆ. ಈ ಕುರಿತ ದಾಖಲೆ ಈ ಸಂಜೆ ಪತ್ರಿಕೆಗೆ ದೊರೆತಿದೆ.  ಈ ಜಾಲ ಅಂತರ್ ರಾಜ್ಯ ಮಟ್ಟಕ್ಕೂ ವಿಸ್ತರಣೆಯಾಗಿದ್ದು, ನಕಲಿ ಅಂಕಪಟ್ಟಿ ಯಿಂದ ರಾತ್ರಿ ಹಗಲು ಎನ್ನದೆ ಕಷ್ಟ ಪಟ್ಟು ಓದುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಬಿ.ಎ. ಅಂಕಪಟ್ಟಿಗೆ ಹೆಚ್ಚಿನ ಬೇಡಿಕೆ ಇರುವುದು ತನಿಖಾ ವರದಿಯಿಂದ ತಿಳಿದುಬಂದಿದೆ.

ಮೂಲ ಅಂಕಪಟ್ಟಿಯ ಮಾದರಿಯಲ್ಲೇ ನಕಲಿ ಅಂಕಪಟ್ಟಿ ಸಿದ್ಧವಾಗುತ್ತಿದೆ. ಇವೆರಡರ ಮಧ್ಯೆ ಯಾವುದೇ ಅನುಮಾನ ಬಾರದಷ್ಟು ಅವು ನಿಖರವಾಗಿವೆ. ಮುಕ್ತ ವಿಶ್ವವಿದ್ಯಾಲಯ ಒಂದರ ಹೆಸರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಕಲಿ ಅಂಕಪಟ್ಟಿ ಸಿದ್ಧವಾಗುತ್ತದೆ. ಕ್ರಮ ಸಂಖ್ಯೆ, ವರ್ಷ, ಕೋರ್ಸ್, ಹೆಸರು, ರಿಜಿಸ್ಟ್ರಾರ್ ನಂ, ವಿಷಯ ವಾರು ಅಂಕಗಳು, ಸೇರಿದಂತೆ ಇತರೆ ದೃಢೀಕರಣದ ಸಹಿ ಹಾಕಿದ ಅಂಕಪಟ್ಟಿ ಯಥಾವತ್ತಾಗಿ ಸಿದ್ಧಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಇದು ನಕಲಿ ಎಂದು ಅನಿಸುವುದಿಲ್ಲ. ತನಿಖಾ ಸಂಸ್ಥೆಗಳಿಗೆ ಆಗಲಿ ಶಿಕ್ಷಣ ಇಲಾಖೆಗೆ ಆಗಲಿ ಅನುಮಾನ ಬಾರದಂತೆ ಅತ್ಯಂತ ವ್ಯವಸ್ಥಿತವಾಗಿ ಅಂಕಪಟ್ಟಿ ಸಿದ್ಧವಾಗುತ್ತದೆ. ಈ ಬೃಹತ್ ನಕಲಿ ಅಂಕಪಟ್ಟಿ ಜಾಲದ ಮೂಲ ಬೆಂಗಳೂರಿನಲ್ಲಿದ್ದು, ಹಲವು ವರ್ಷಗಳಿಂದ ಎಗ್ಗಿಲ್ಲದೆ ಇಲ್ಲಿ ನಡೆಯುತ್ತಿದೆ ಎಂಬುದು ದೃಢಪಟ್ಟಿದೆ.

ಖಾಸಗಿ ಕಂಪನಿ, ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬಡ್ತಿ ಪಡೆಯಲು ಪದವಿಯ ಅಂಕಪಟ್ಟಿ ಬೇಕೇಬೇಕು. ಆಗ ಅವರು ಇದರ ಮೋರೆ ಹೋಗುತ್ತಾರೆ. ಬೆಂಗಳೂರು ಮಾಯಾನಗರಿ ಈ ಸಿಲಿಕಾನ್ ಸಿಟಿಯಲ್ಲಿ ದುಡ್ಡು ಕೊಟ್ಟರೆ ಸಾಕು ಏನು ಬೇಕಾದರೂ ಸಿಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎನ್ನಬಹುದು.

# ಅಧಿಕಾರಿಗಳ ಕೈವಾಡ ಶಂಕೆ : 
ಈ ನಕಲಿ ಅಂಕಪಟ್ಟಿ ಜಾಲದ ಹಿಂದೆ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಮಾತ್ರವಲ್ಲ ಕೆಲವು ಪೊಲೀಸ್ ಅಧಿಕಾರಿಗಳ ಕೃಪಾಕಟಾಕ್ಷ ಕೂಡ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದಿನಿಂದಲೂ ಈ ಜಾಲ ಕೆಲಸ ಮಾಡುತ್ತಿದೆ. ಮಾಧ್ಯಮಗಳು ಎಚ್ಚೆತ್ತುಕೊಂಡಾಗ ಒಮ್ಮೆ ಸ್ಥಗಿತಗೊಳ್ಳುವ ಇದರ ಕಾರ್ಯಚಟುವಟಿಕೆಗಳು ಮತ್ತೆ ರಾಜಾರೋಷವಾಗಿ ಮುಂದುವರಿಯುತ್ತದೆ. ಈ ಹಿಂದೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ರುವಾರಿ ಎನ್ನಲಾದ ಆರೋಪಿಯೊಬ್ಬನ ನಂಟು ಈ ಜಾಲದ ಹಿಂದೆಯೂ ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆತ ಜಾಮೀನಿನ ಮೇಲೆ ಹೊರಗಿದ್ದಾನೆ. ಮುಕ್ತ ವಿಶ್ವವಿದ್ಯಾಲಯ ಒಂದರ ಹೆಸರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ನಕಲಿ ಅಂಕಪಟ್ಟಿ ಜಾಲದ ಬಗ್ಗೆ ನಿಖರ ಮಾಹಿತಿ ಪಡೆದಿರುವ ಬೆಂಗಳೂರು ಪೊಲೀಸರು ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಜಾಲಕ್ಕೆ ಸಂಬಂಧಿಸಿದ ಸುಮಾರು 10ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا