Urdu   /   English   /   Nawayathi

ಸರಕಾರದ ಖಜಾನೆಗೆ ದಾರಿದ್ರ್ಯ ಬಂದಿಲ್ಲ

share with us

ಮಡಿಕೇರಿ: 19 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ತಾಯಿ ಕಾವೇರಿ ಹಾಗೂ ಚಾಮುಂಡಿಯ ಆಶೀರ್ವಾದದಿಂದ ಈ ರಾಜ್ಯದಲ್ಲಿರುವ ಜನರ ಖಜಾನೆಗೆ ದಾರಿದ್ರ್ಯ ಬಂದಿಲ್ಲ. ಸರ್ಕಾರದ ಖಜಾನೆ ಶ್ರೀಮಂತವಾಗಿರಲು ಅಧಿಕಾರಿಗಳ ಸಹಕಾರವೇ ಕಾರಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸಂತ್ರಸ್ತರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯಾವುದೇ ಹಣದ ಕೊರತೆ ಇಲ್ಲ. ರೈತರ ಸಾಲಮನ್ನಾಕ್ಕೂ ಆರ್ಥಿಕ ಅಡಚಣೆ ಇಲ್ಲ. ಸರ್ಕಾರ ಈಗಾಗಲೇ ಪರಿಹಾರ ಕಾರ್ಯಕ್ಕಾಗಿ 122 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಭೂಕುಸಿತದಿಂದ ಉಂಟಾಗಿರುವ ಪ್ರದೇಶವನ್ನು ಪರಿಶೀಲಿಸಿ, ಯಾವ ಬೆಳೆಯನ್ನು ಬೆಳೆಯಲು ಸಾಧ್ಯ ಎನ್ನುವ ಬಗ್ಗೆ ಹೆಚ್ಚುವರಿ ಅಧಿಕಾರಿಗಳ ಮೂಲಕ ಮಾಹಿತಿಯನ್ನು ಪಡೆಯಲಾಗುವುದು. ನಿರಾಶ್ರಿತರ ಕುಟುಂಬಗಳಿಗೆ 800 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಹೊಸ ಬದುಕನ್ನು ಕಟ್ಟಿ ಕೊಡಲು ಮತ್ತು ಹಾನಿಗೀಡಾದ ಪ್ರದೇಶಗಳನ್ನು ಪುನರ್‌ ನಿರ್ಮಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕೊಡಗು ಪುನರ್‌ ನಿರ್ಮಾಣ ಪ್ರಾಧಿಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಸಂಕಷ್ಟದಲ್ಲಿರುವ ಜನರ ಬದುಕಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಉದ್ದೇಶದಿಂದ ಮಾನವೀಯ ನೆಲೆಗಟ್ಟಿನಲ್ಲಿ ಎನ್‌ ಡಿಆರ್‌ಎಫ್ ನಿಯಮವನ್ನು ಬದಿಗೊತ್ತಿ, ತಲಾ 50 ಸಾವಿರ ರೂ.ಗಳಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಆದೇಶಿಸಲಾಗಿದೆ. ಈಗಾಗಲೆ ಇದಕ್ಕಾಗಿ 6 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಮುಂದಿನ ಮೂರು, ನಾಲ್ಕು ದಿನಗಳಲ್ಲಿ ಸಂತ್ರಸ್ತರ ಖಾತೆಗಳಿಗೆ ತಲಾ 50 ಸಾವಿರ ರೂ.ಜಮೆ ಆಗಲಿದೆ ಎಂದರು.

ತಲಕಾವೇರಿ, ಅಧಿಕಾರ ಮತ್ತು ಸಿಎಂ ಕುಮಾರಸ್ವಾಮಿ 
ಮಡಿಕೇರಿ: ಧಾರಾಕಾರ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರೊಂದಿಗೆ ಸಂವಾದ ನಡೆಸಬೇಕೆಂದು ಕೊಡಗು ಜಿಲ್ಲೆಯ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ಆದರೆ, ಇಂದೇ ತಾಯಿ ಕಾವೇರಿ ನದಿಯ ತೀಥೋìದ್ಭವವಾಗುತ್ತಿರುವುದು ಕಾಕತಾಳೀಯ. ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ಆ ಮೂಲಕ ನಾನು ಅಧಿಕಾರದಲ್ಲಿ ಗಟ್ಟಿಯಾಗಿ ಇರುತ್ತೇನೆಯೇ ಎನ್ನುವುದನ್ನು ಪರೀಕ್ಷೆ ಮಾಡಿಯೇ ಬಿಡೋಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಭಾಗಮಂಡಲ, ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎನ್ನುವ ಮಾತಿದೆ. ನನಗೆ ಅಧಿಕಾರ ಮುಖ್ಯವಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆನ್ನುವ
ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗಲೂ ತಲಕಾವೇರಿಗೆ ಭೇಟಿ ನೀಡಿದ್ದೆ. ಆದರೆ, ಅಧಿಕಾರ ಕಳೆದುಕೊಂಡಿರಲಿಲ್ಲ. ಪ್ರಸ್ತುತ ಮುಖ್ಯಮಂತ್ರಿಯಾದ ನಂತರ ಕೂಡ ತಲಕಾವೇರಿಗೆ ತೆರಳಿ ಪೂಜೆ ಸಲ್ಲಿಸಿದ್ದೇನೆ.
ಕಾವೇರಿ ತಾಯಿಯ ಆಶೀರ್ವಾದದಿಂದ ಸರ್ಕಾರ ಸುಭಿಕ್ಷವಾಗಿದೆ. ಈಗಲೂ ತಲಕಾವೇರಿಗೆ ತೆರಳುತ್ತಿದ್ದು, ನಾನು ಅಧಿಕಾರದಲ್ಲಿ ಗಟ್ಟಿಯಾಗಿ ಇರುತ್ತೇನೆಯೇ, ಇಲ್ಲವೇ ಎನ್ನುವುದನ್ನು ಪರೀಕ್ಷೆ ಮಾಡಿಬಿಡೋಣ ಎಂದರು.

ರೈತರು ಮಾಡಿರುವ ಸಾಲದ ಬಗ್ಗೆ ಮಾಹಿತಿ ನೀಡಿ ಎಂದು ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ತಿಳಿಸಿ 2 ತಿಂಗಳು ಕಳೆದಿದೆ. ಆದರೆ, ಇಲ್ಲಿಯವರೆಗೆ ಮಾಹಿತಿ ನೀಡಿಲ್ಲ. ಸಾಲಗಾರರಿಗೆ ಬ್ಯಾಂಕ್‌ಗಳು ತಿಳಿವಳಿಕೆ ಪತ್ರ ನೀಡುವ ಕೆಲಸ ಮಾಡುತ್ತಿವೆ ಅಷ್ಟೆ. 2 ಲಕ್ಷ ರೂ. ಗಳವರೆಗಿನ ಸಾಲಮನ್ನಾಕ್ಕೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆಯಲಾಗಿದೆ. ಆದರೂ, ಬ್ಯಾಂಕ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ.
● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا