Urdu   /   English   /   Nawayathi

ಅತೃಪ್ತರು ಬಿಜೆಪಿಗೆ ಬರ್ತೀವಿ ಅಂದ್ರೆ ಸುಮ್ಮನಿರೊಕಾಗುತ್ತಾ..? : ಶ್ರೀರಾಮುಲು

share with us

ಬಳ್ಳಾರಿ: 07 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ನಾವು ಯಾವುದೇ ರೀತಿಯ ಆಪರೇಷನ್ ಕಮಲ ನಡೆಸುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಅತೃಪ್ತ ಶಾಸಕರು ನಮ್ಮ ಪಕ್ಷದತ್ತ ಬರಲು ಮುಂದಾದರೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಶಾಸಕ ಶ್ರೀರಾಮುಲು ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಯಾವೊಬ್ಬ ಶಾಸಕರಿಗೆ ನಾವು ಆಮಿಷವೊಡ್ಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿಲ್ಲ. ಅತೃಪ್ತ ಶಾಸಕರು ಪಕ್ಷದ ಸಿದ್ದಾಂತ ಒಪ್ಪಿ ಬರುತ್ತಾರೆ ಎಂದರೆ ಸುಮ್ಮನಿರಲು ಸಾಧ್ಯವೇ ಎಂದು ಮಾಧ್ಯಮದವರನ್ನೇ ರಾಮುಲು ಮರು ಪ್ರಶ್ನೆ ಹಾಕಿದರು.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಅನೇಕರು ಸರ್ಕಾರದ ಕೆಲವು ತೀರ್ಮಾನಗಳಿಂದಲೂ ಬೇಸರಗೊಂಡಿದ್ದಾರೆ. ತಮ್ಮಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ತಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರಲು ಆಪರೇಷನ್ ಕಮಲದ ಹೆಸರು ಹೇಳುತ್ತಿದ್ದಾರೆ. ಇದರಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.37 ಶಾಸಕರನ್ನು ಹೊಂದಿರುವ ಜೆಡಿಎಸ್‍ನವರು ಮುಖ್ಯಮಂತ್ರಿಯಾಗುತ್ತಾರೆ ಎಂದರೆ 104 ಶಾಸಕರನ್ನು ಹೊಂದಿರುವ ನಾವು ಏಕೆ ಅಧಿಕಾರ ನಡೆಸಬಾರದು. ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುವ ಭಿನ್ನ ಮತವನ್ನು ವಿರೋಧ ಪಕ್ಷವಾಗಿ ನಾವು ಲಾಭ ಮಾಡಿಕೊಂಡರೆ ತಪ್ಪೇನಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಇನ್ನು 100 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿ. ಇನ್ನಷ್ಟು ಅಧಿಕಾರಿಗಳ ವರ್ಗಾವಣೆ ಮಾಡಿಕೊಂಡು ದುಡ್ಡು ಮಾಡಲಿ. ಉಳಿದವರು ಹಾಗೆಯೇ ನೋಡಿಕೊಂಡು ಕೂರುತ್ತಾರೆಯೇ? ಸ್ಥಾನಮಾನ ಸಿಗದ ಶಾಸಕರು ಸಿಡಿದೇಳುವುದು ಸರ್ವೆ ಸಾಮಾನ್ಯ ಎಂದರು. ಉಪ ಚುನಾವಣೆಯಲ್ಲಿ ಬಳ್ಳಾರಿಯಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನಾನು ಒಬ್ಬ ಕಾರ್ಯಕರ್ತನಾಗಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಜಿಲ್ಲೆಯಲ್ಲಿ ಬಿಜೆಪಿ ಸಾಕಷ್ಟು ಪ್ರಬಲವಾಗಿದೆ. ಈ ಬಾರಿ ನಮ್ಮ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾನು ಬಳ್ಳಾರಿ ಸಂಸದನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕೇಂದ್ರದಿಂದ ಅನುದಾನ ತಂದು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿದ್ದೇನೆ. ನನಗೆ ಸೇವೆ ಮಾಡಲು ಅವಕಾಶ ಕೊಟ್ಟ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا