Urdu   /   English   /   Nawayathi

ಇನ್ನು ಮುಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಜೇನುತುಪ್ಪ ಪೂರೈಕೆ

share with us

ಬೆಂಗಳೂರು: 25 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇನ್ನಷ್ಟು ಸಿಹಿಯಾಗಿ ಮತ್ತು ಆರೋಗ್ಯದಾಯಕವಾಗಿ ಸಿಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಬಿಸಿಯೂಟದ ತಿನಿಸುಗಳಲ್ಲಿ ಜೇನುತುಪ್ಪವನ್ನು ಕೂಡ ಸೇರಿಸಲು ನಿರ್ಧರಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಆದೇಶವನ್ನು ಪಾಲಿಸಲು ಮುಂದಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು ಅದರಲ್ಲಿ, ''ಜೇನುತುಪ್ಪದಲ್ಲಿ ಹೇರಳವಾಗಿ ರೋಗ ನಿರೋಧಕಗಳು, ಕಾರ್ಬೋಹೈಡ್ರೇಟ್ ಗಳು, ಉತ್ತಮ ಅಮಿನೊ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜ, ಪ್ರೊಟೀನ್ ಗಳಿವೆ. ಇದು  ದೇಹಕ್ಕೆ ಶಕ್ತಿ ನೀಡುವುದಲ್ಲದೆ ಲಘುವಾದ ಮಕ್ಕಳ ಹೊಟ್ಟೆಯಲ್ಲಿ ಹಸಿವಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ದೇಹದಲ್ಲಿ ಕ್ಯಾಲ್ಸಿಯಂನ ಸಮ್ಮಿಲನಕ್ಕೆ ಸಹಾಯ ಮಾಡುತ್ತದೆ. ಜೇನುತುಪ್ಪ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಕ್ಕಳು ಬ್ಯಾಕ್ಟೀರಿಯಾ ಮತ್ತು ಸೋಂಕು, ಶೀತ, ಕಫ, ಅಲರ್ಜಿಗಳಿಗೆ ತುತ್ತಾಗುವುದು ಕಡಿಮೆ. ದೇಹದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೂಡ ಸಹಾಯ ಮಾಡುತ್ತದೆ ಎಂದು ವಿವರಿಸಲಾಗಿದೆ.

ಆದರೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಜೇನುತುಪ್ಪ ನೀಡುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ. ಬಿಸಿ ಹಾಲಿನ ಜೊತೆ ಜೇನುತುಪ್ಪ ಸೇರಿಸಿ ಮಕ್ಕಳಿಗೆ ನೀಡಬಹುದು. ಪ್ರತ್ಯೇಕವಾಗಿ ನೀಡುವುದು ಕಷ್ಟ. ನಾವಿನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುತ್ತಾರೆ.

ರಾಷ್ಟ್ರೀಯ ಜೇನುಹುಳ ನಿಗಮದ ಕಾರ್ಯದಡಿಯಲ್ಲಿ ಬರುವ ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ಸಚಿವಾಲಯದ ಸೂಚನೆಯಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ.ಸ್ವಿಡ್ಜರ್ಲೆಂಡ್ ಮೂಲದ ಜೇನುಹುಳ ಸಂಶೋಧನಾ ಕೇಂದ್ರದ ಅಧ್ಯಯನ ಪ್ರಕಾರ, ಜೇನುತುಪ್ಪದಲ್ಲಿ ಸುಮಾರು 600 ಅಂಶಗಳು ಕಂಡುಬರುತ್ತಿವೆ. ಅವುಗಳ ಪೋಷಕಾಂಶಗಳ ಮೌಲ್ಯಗಳನ್ನು ಆಧರಿಸಿ ಜೇನುತುಪ್ಪ ಒಂದು ಉತ್ತಮ ಜೀರ್ಣಕಾರಿ ಎಂದು ಹೇಳಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಸಭೆ ನಡೆಸಿ ಅವುಗಳ ಪೌಷ್ಟಿಕಾಂಶ ಮೌಲ್ಯಗಳಿಗೆ ಹಲವು ತರದ ಜೇನುತುಪ್ಪಗಳನ್ನು ಪರೀಕ್ಷೆ ಮಾಡಲಾಗಿದ್ದು ಅವುಗಳಿಂದ ಬಂದಿರುವ ವರದಿಯಲ್ಲಿ ಜೇನುತುಪ್ಪದಲ್ಲಿ ಹಲವು ಕಾರ್ಬೊಹೈಡ್ರೇಟ್ ಗಳು, ಪ್ರೊಟೀನ್ ಗಳು, ಅಮಿನೊ ಅಮ್ಲ, ಖನಿಜಗಳು, ವಿಟಮಿನ್ ಗಳು, ಕಿಣ್ವಗಳು ಇರುವುದು ಕಂಡುಬರುತ್ತಿದೆ. ಜೇನುತುಪ್ಪ ತಯಾರಿಕೆಯಲ್ಲಿ ತೊಡಗಿರುವ ಸೊಸೈಟಿಗಳು, ಘಟಕಗಳು ಮತ್ತು ಕಂಪೆನಿಗಳು ಗುಣಮಟ್ಟದ ಜೇನುತುಪ್ಪವನ್ನು ಮಕ್ಕಳಿಗೆ ಪೂರೈಸುವಂತೆ ಮನವಿ ಮಾಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا