Urdu   /   English   /   Nawayathi

ಡಿ-ನೋಟಿಫೈ ಪ್ರಕರಣ : ಬಿಎಸ್‍ವೈ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ದ್ವಿಸದಸ್ಯ ಪೀಠ

share with us

ನವದೆಹಲಿ (ಪಿಟಿಐ): 21 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಬೆಂಗಳೂರಿನ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾದ ನೂರಾರು ಕೋಟಿ ರೂ.ಗಳ ಭೂಮಿಯನ್ನು ಡಿ-ನೋಟಿಫೈ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಪ್ರಕರಣದಿಂದ ತಾತ್ಕಾಲಿಕ ರಿಲೀಫ್ ದೊರೆತಿದೆ. ಈ ಪ್ರಕರಣದ ವಿಚಾರಣೆಯಿಂದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಹಿಂದಕ್ಕೆ ಸರಿದಿದೆ. ಇದರಿಂದಾಗಿ ಯಡಿಯೂರಪ್ಪ ಸದ್ಯಕ್ಕೆ ನಿರಾಳರಾಗಿದ್ದಾರೆ. ನ್ಯಾಯಮೂರ್ತಿಗಳಾದ ಎ.ಎಂ.ಸಪ್ರೆ ಮತ್ತು ಉದಯ್ ಲಲಿತ್ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಈ ಹಿಂದೆ ವಕೀಲರಾಗಿದ್ದ ಉದಯ್ ಲಲಿತ್ ಅವರು ಈ ಪ್ರಕರಣದಲ್ಲಿ ಬಿಎಸ್‍ವೈ ಪರ ವಕಾಲತ್ತು ವಹಿಸಿ ವಾದ ಮಂಡಿಸಿದ್ದರು. ಈಗ ಅವರು ನ್ಯಾಯಮೂರ್ತಿಯಾಗಿರುವುದರಿಂದ ಈ ಡಿ-ನೋಟಿಫೈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದು ಸಮಂಜಸವಲ್ಲ ಎಂಬ ಕಾರಣಗಳಿಂದಾಗಿ ಹಿಂದೆ ಸರಿದಿದ್ದಾರೆ.

ಈಗ ಈ ಪ್ರಕರಣವು ಬೇರೆ ಪೀಠಕ್ಕೆ ವರ್ಗಾವಣೆಯಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಹಿಂದೆ ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಭ್ರಷ್ಟ್ರಾಚಾರ ನಿಗ್ರಹ ದಳ(ಎಸಿಬಿ) ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.  ಯಡಿಯೂರಪ್ಪ ಅವರು ಡಿ-ನೋಟಿಫೈ ಮಾಡಿ ರಾಜ್ಯ  ಸರ್ಕಾರಕ್ಕೆ ಅಪಾರ ನಷ್ಟ ಉಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನ ಸಾಮಾನ್ಯರ ವೇದಿಕೆ ಎಸಿಬಿಗೆ ದೂರು ನೀಡಿತ್ತು.

ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ) 2008ರಲ್ಲಿ ಬೆಂಗಳೂರು ಉತ್ತರ ತಾಲೂಕು ಮತ್ತು ಉತ್ತರ ಹೆಚ್ಚುವರಿ ತಾಲೂಕಿನ 17 ಗ್ರಾಮಗಳ 3546 ಎಕರೆಗಳ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ಅದರ ಸ್ವಾದೀನಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಭೂಮಿಯ ಪೈಕಿ 257 ಎಕರೆಗಳ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡುವಂತೆ ಆದೇಶಿಸಿದ್ದರು. ಆದಾದ ನಂತರ ಅ ಭೂಮಿಯನ್ನು ಡಿನೋಟಿಫೈ ಮಾಡಲಾಗಿತ್ತು.

ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾದ=ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಡಿನೋಟಿಫೈ ವಿರುದ್ಧ ಜನ ಸಾಮಾನ್ಯರ ವೇದಿಕೆ ಧರಣಿ ನಡೆಸಿತ್ತು. ನಂತರ ಹೈಕೋರ್ಟ್ ಮೆಟ್ಟಿಲೇರಿದ್ದ ಈ ವಿವಾದ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا