Urdu   /   English   /   Nawayathi

ಕೇರಳ, ಕೊಡಗು ಮಾತ್ರವಲ್ಲ, ಗೋವಾಗೂ ಅಪಾಯ ತಪ್ಪಿದ್ದಲ್ಲ

share with us

ಕೊಡಗು: 21 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೊಡಗು ಮತ್ತು ಕೇರಳ ರಾಜ್ಯಕ್ಕೆ ಧಾರಕಾರ ಮಳೆ ಹೊಸತೇನಲ್ಲ. ಈ ವರ್ಷ ಬಿದ್ದಿರುವ ಮಳೆಗಿಂತಲೂ ಅಧಿಕ ಮಳೆಯನ್ನು ಕಂಡ ಜನ ಇಲ್ಲಿದ್ದಾರೆ. ಆದರೂ ಈ ವರ್ಷ ಬಿದ್ದ ಮಳೆ ಏಕೆ ಇಷ್ಟೊಂದು ಅನಾಹುತ-ಅವಘಡ ಸೃಷ್ಟಿಸಿದೆ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ. ಸಂತ್ರಸ್ತ ಪೀಡಿತ ಕೊಡಗು-ಕೇರಳದ ಸ್ಥಳೀಯರು, ಪಶ್ಚಿಮ ಘಟ್ಟದ ಬಗ್ಗೆ ಅಧ್ಯಯನ ಮಾಡಿರುವ ವಿಜ್ಞಾನಿಗಳು, ಪರಿಸರವಾದಿಗಳು, ಪರಿಸರ ಕಾಳಜಿಯ ಹೈಕೋರ್ಟ್‌ ನ್ಯಾಯಮೂರ್ತಿಗಳು... ಹೀಗೆ ಎಲ್ಲರೂ ಅರಸಿರುವ ಕಾರಣ ಒಂದೇ. ನಮ್ಮ ಅಭಿವೃದ್ಧಿ ಎಂಬುದು ಪರಿಸರ ಸ್ನೇಹಿಯಲ್ಲ, ಸಮತೋಲನದಿಂದ ಕೂಡಿಲ್ಲ, ಮಾನವ ಹಸ್ತಕ್ಷೇಪ ವಿಪರೀತವಾಗಿದೆ, ಕೊಡಗಿನ ಮೇಲೆ ಒತ್ತಡ ಹೆಚ್ಚಿದೆ. 

ಒಟ್ಟಾರೆ ಪರಿಸರದ ಮೇಲೆ ಏನಾಗುತ್ತಿದೆ ? ಈ ಕುರಿತು ಯಾರು ಏನು ಹೇಳಿದರು ಎಂಬುದರ ಬಗ್ಗೆ ಒಂದು ನೋಟ. 

1. ಸಂಪಾಜೆ ಶ್ರೇಣಿಯಷ್ಟೇ ಅಪಾಯಕ್ಕೆ ಸಿಲುಕಿದ್ದೇಕೆ? 

ಕೊಡಗಿನ ಎಲ್ಲ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಆದರೆ, ಎಲ್ಲ ಕಡೆಯೂ ಭೂ ಕುಸಿತವಾಗಿಲ್ಲ. ಮುಕ್ಕೋಡ್ಲು, ಹಮ್ಮಿಯಾಲ, ದೇವಸ್ತೂರು, ಕಾಲೂರು, ಗಾಳಿಬೀಡು, ಮದೆನಾಡು, ಜೋಡುಪಾಲ, ತಂತಿಪಾಲ, ಕಾಟಕೇರಿ, ಕಡಮಕಲ್ಲು, ಸಂಪಾಜೆ, ಅರೆಕಲ್ಲು ವಿಭಾಗ ಹಾಗೂ ಇದಕ್ಕೆ ಹೊಂದಿಕೊಂಡಂತಿರುವ ಸುಳ್ಯ ತಾಲೂಕಿನ ಕೆಲವು ಪ್ರದೇಶದ ಒಂದು ಘಟ್ಟದಲ್ಲಿ ಮಾತ್ರ ಭೂಕುಸಿತ ಭೀಕರವಾಗಿದೆ. ಸಂಪಾಜೆ ಶ್ರೇಣಿಯಲ್ಲಿ ಬಿದ್ದ ಬಿದ್ದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಡಗಿನ ಅತಿ ಎತ್ತರ ಬೆಟ್ಟವಾದ ತಡಿಯಂಡಮೋಳು, ಶಾಂತಳ್ಳಿ ವಿಭಾಗದಲ್ಲಿ ಪುಷ್ಪಗಿರಿ ಬೆಟ್ಟ, ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟ, ತಲಕಾವೇರಿ ಮುಂತಾದ ಬೆಟ್ಟದಲ್ಲಿ ಬಿದ್ದಿದೆ. ಆದರೆ ಈ ಭಾಗದಲ್ಲಿ ಏಕೆ ಈ ಪ್ರಮಾಣದ ಭೂಕುಸಿತ ಆಗಲಿಲ್ಲ ಎಂದು ಸಾಕಷ್ಟು ಮಂದಿ ಪ್ರಶ್ನಿಸುತ್ತಿದ್ದಾರೆ. ನಿರಂತರ ಭೂ ಕೊರೆತ, ಭಾರಿ ವಾಹನಗಳ ಓಡಾಟ, ಭೂಕಂಪನ ಕಾರಣವೇ ಇದಕ್ಕೆಲ್ಲಾ ಕಾರಣ ಎಂದು ಸ್ಥಳೀಯರೇ ಹೇಳುತ್ತಾರೆ. 

2. ಸುರಕ್ಷಿತ ಕುಶಾಲನಗರ ಮುಳುಗಿದ್ದೇಕೆ? 

ಈ ವರ್ಷ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು, ಅವಧಿಗೆ ಮುನ್ನವೇ ಹಾರಂಗಿ ಜಲಾಶಯ ಭರ್ತಿಯಾಗಿದೆ. 2859 ಅಡಿಗಳ ಗರಿಷ್ಠ ಸಾಮರ್ಥ್ಯ‌ದ ಅಣೆಕಟ್ಟೆಯಲ್ಲಿ ನೀರನ್ನು 2858.90 ಅಡಿಗಳ ತನಕ ಶೇಖರಿಸಿಡಲಾಗಿತ್ತು. ಭಾರಿ ಮಳೆ ಮತ್ತೆ ಆರಂಭವಾದಾಗ ಒಮ್ಮೆಗೆ 82,000 ಕ್ಯೂಸೆಕ್‌ ತನಕ ನೀರು ಬಿಡಲಾಗಿದೆ. ಕಬಿನಿಯಲ್ಲಿಯೂ ಇದೇ ರೀತಿ ಆಗಿದೆ. ಪರಿಣಾಮ ನೀರು ಹಿಮ್ಮುಖವಾಗಿ ತಳ್ಳಲ್ಪಟ್ಟಿದ್ದು ಕುಶಾಲನಗರ ಬಡಾವಣೆಗಳಿಗೆ ನುಗ್ಗಿ ಭಾರಿ ಹಾನಿಯಾಗಿದೆ. ಕುಶಾಲನಗರ ಅತ್ಯಂತ ಸುರಕ್ಷಿತ ಪ್ರದೇಶ ಎಂಬ ನಂಬಿಕೆ ಇತ್ತು. ಇಲ್ಲಿನ ಬಡಾವಣೆಗಳು ಮುಳುಗಿಹೋಗಿವೆ. 

3. ಗುಡ್ಡ ದ ಬದಿ ರೆಸಾರ್ಟ್‌ ಕುಸಿದವೇಕೆ? 

ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿಕ್ಕುದೆಸೆಯಿಲ್ಲದೆ ಬೆಳೆಯುತ್ತಿದೆ. ಪರಿಣಾಮ, ಬೃಹತ್‌ ರೆಸಾರ್ಟ್‌, ಹೋಂಸ್ಟೇಗಳು, ಐಷಾರಾಮಿ ಹೋಟೆಲ್‌ಗಳು ತಲೆ ಎತ್ತಿವೆ. ಮಡಿಕೇರಿ ಹೊರವಲಯದಲ್ಲಿ ಇಡೀ ಗುಡ್ಡವನ್ನು ಕೊರೆದು ರೆಸಾರ್ಟ್‌, ಹೋಂಸ್ಟೇಗಳನ್ನು ಕಟ್ಟಿದ್ದಾರೆ. ಗುಡ್ಡದ ಮೇಲ್ಭಾಗ ಸಮತಟ್ಟಾಗಿದ್ದು, ಕೆಳಗಡೆಯಿಂದ ಜೆಸಿಬಿ ಮೂಲಕ ನೆಲೆವನ್ನು ಬಗೆದು ದಾರಿ ನಿರ್ಮಿಸಲಾಗಿದೆ. ಪ್ರತಿಗುಡ್ಡ, ಬೆಟ್ಟದಲ್ಲಿ ಈ ರೀತಿಯ ದೃಶ್ಯ ಕಾಣಬಹುದು. ಮಾಂದಲಪಟ್ಟಿಯಂತಹ ಪ್ರವಾಸಿ ತಾಣ ವಿಪರೀತ ವಾಹನ ಸಂಚಾರದಿಂದ ನಲುಗಿದೆ. ಇದೀಗ ಬಿದ್ದ ಭಾರೀ ಮಳೆಯಿಂದ ಕೊರೆದ ಜಾಗವೆಲ್ಲವೂ ಕುಸಿದಿದೆ. 

ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೋಂಸ್ಟೇಗಳಿವೆ. ಇವುಗಳಲ್ಲಿ ಬಹುತೇಕ ಬೆಟ್ಟಗುಡ್ಡಗಳಲ್ಲಿವೆ. ಮಡಿಕೇರಿಯಲ್ಲಿಯೇ ಸಾವಿರಕ್ಕೂ ಮಿಕ್ಕಿ ಇವೆ. ಇವುಗಳಿಗೆ ನಿರಂತರವಾಗಿ ಜನರು ಆಗಮಿಸುತ್ತಿದ್ದು, ಮೋಜುಮಸ್ತಿಯ ಕೇಂದ್ರವಾಗಿತ್ತು. 

4. ಭಾರಿ ವಾಹನ ಓಡಾಟ ತಂತೇ ಕುತ್ತು? 

ಶಿರಾಡಿಘಾಟ್‌ ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಆರು ತಿಂಗಳಿನಿಂದ ಮಂಗಳೂರು, ಹಾಸನ ಭಾಗದಿಂದ ಕೊಡಗಿನ ರಸ್ತೆಗಳ ಮೂಲಕ ಭಾರಿ ವಾಹನಗಳು ಬಿಡುವೇ ಇಲ್ಲದಂತೆ ಸಂಚರಿಸಿವೆ. ಮಂಗಳೂರು ಬಂದರಿನಿಂದ ಮಲ್ಟಿ ಆಕ್ಸೆಲ್‌ಗಳು, ಟ್ರಕ್‌ಗಳು, ಟ್ಯಾಂಕರ್‌ಗಳು ಸಂಪಾಜೆ, ಮದೆನಾಡು, ಕೊಯನಾಡು, ಜೋಡುಪಾಲ ಮೂಲಕ ಮಡಿಕೇರಿಗೆ ಆಗಮಿಸಿ ಮೈಸೂರಿಗೆ ತೆರಳಿವೆ. ಇನ್ನು ಕೆಲವು ಮಡಿಕೇರಿಯ ಮೂಲಕ ಹಟ್ಟಿಹೊಳೆ, ಮಾದಾಪುರ ಮೂಲಕ ಹಾಸನಕ್ಕೆ ಓಡಾಡಿವೆ. ಭಾರಿ ವಾಹನಗಳ ಓಡಾಟದಿಂದ ಮನೆಗಳು, ಭೂಮಿ ಅಲುಗಾಡುತ್ತಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ, ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇರುವ ಒಂದು ರಸ್ತೆ ಬಂದ್‌ ಮಾಡಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಇದೀಗ ಈ ವಾಹನ ಓಡಾಡಿದ ಭಾಗದ ಗುಡ್ಡವೇ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈಗ ಕೇಳುವವರೇ ಇಲ್ಲದ ಸ್ಥಿತಿಯಲ್ಲಿದೆ. 

5. ಭಾರೀ ಮಳೆಯೂ ಹಾನಿ ತಂತು 

ಕೊಡಗಿನಲ್ಲಿ ಈ ಬಾರಿ ಸುರಿದಿರುವ ದಾಖಲೆಯ ಮಳೆ ಕೂಡ ಈ ಪರಿ ಅನಾಹುತಕ್ಕೆ ಕಾರಣವಾಗಿದೆ. 

* ಕೇರಳ ಎಲ್ಲರಿಗೂ ಪಾಠವಾಗಲಿ: ಮಾಧವ ಗಾಡ್ಗೀಳ್‌ 

ಪಣಜಿ: ಪರಿಸರ ಸೂಕ್ಷ್ಮತೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕೇರಳ ಎದುರಿಸುತ್ತಿರುವ ದುರಂತವನ್ನೇ ಗೋವಾವೂ ಎದುರಿಸಬೇಕಾದೀತು ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್‌ ಹೇಳಿದ್ದಾರೆ. 

ಪಶ್ಚಿಮ ಘಟ್ಟದ ಪರಿಸರ ಅಧ್ಯಯನ ಸಮಿತಿಯ ಮುಖ್ಯಸ್ಥರಾಗಿ 2011ರಲ್ಲಿ ಮಹತ್ವದ ವರದಿ ನೀಡಿದ್ದ ಗಾಡ್ಗೀಳ್‌ ಅವರು, ಅಪರಿಮಿತ ಲಾಭದ ಆಸೆಯಿಂದ ಗೋವಾದಲ್ಲೂ ಅತಿರೇಕದ ಚಟುವಟಿಕೆಗಳು ನಡೆಯುತ್ತಿದ್ದು, ಇದಕ್ಕಾಗಿ ಪಶ್ಚಿಮ ಘಟ್ಟವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. 

''ಖಂಡಿತವಾಗಿಯೂ ಗೋವಾ ಭಾಗದ ಪಶ್ಚಿಮ ಘಟ್ಟದಲ್ಲೂ ಕೆಲವೊಂದು ಪರಿಸರದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಗೋವಾದಲ್ಲಿ ಕೇರಳದಷ್ಟು ಎತ್ತರದ ಬೆಟ್ಟಗಳು ಇಲ್ಲವಾದರೂ ಅಪಾಯ ಮಾತ್ರ ತಪ್ಪಿದ್ದಲ್ಲ,'' ಎಂದು ಕೇರಳದ ಮಹಾಪ್ರವಾಹದ ಬಗ್ಗೆ ಪ್ರಸ್ತಾಪಿಸುತ್ತಾ ಹೇಳಿದ್ದಾರೆ. 

ಕೇಂದ್ರ ಸರಕಾರ ನೇಮಿಸಿದ ಎಂ.ಬಿ. ಶಾ ಆಯೋಗವು ಅಕ್ರಮ ಗಣಿಗಾರಿಕೆ ಮೂಲಕ 35000 ಕೋಟಿ ರೂ. ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಅಂದಾಜು ಮಾಡಿರುವುದನ್ನು ಉಲ್ಲೇಖಿಸಿರುವ ಅವರು, ''ಕಲ್ಲು ಗಣಿಗಾರಿಕೆ ಎನ್ನುವುದು ಕಡಿಮೆ ಹೂಡಿಕೆ, ದೊಡ್ಡ ಲಾಭದ ಉದ್ಯಮವಾಗಿದೆ. ಹೀಗೆ ಅಕ್ರಮ ಲಾಭ ಮಾಡಿಕೊಳ್ಳುವವರನ್ನು ನಿಯಂತ್ರಿಸದೇ ಹೋದರೆ, ಸಮಾಜದಲ್ಲಿ ಆರ್ಥಿಕ ಅಸಮಾನತೆ ಉಂಟಾಗುವ ಜತೆಗೆ ಪರಿಸರವೂ ನಾಶವಾಗಲಿದೆ,'' ಎಂದಿದ್ದಾರೆ. 
ಪಶ್ಚಿಮ ಘಟ್ಟದ ಕೇರಳ ಭಾಗದಲ್ಲಿ ಬರುವ ಹಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಬೇಕೆಂದು ಗಾಡ್ಗೀಳ್‌ ಸೂಚಿಸಿದ್ದರು. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا