Urdu   /   English   /   Nawayathi

ಡೋಗ್ರಾ ಪಡೆ ಸಾಹಸ, ಬೆಟ್ಟದಲ್ಲಿ ಸಿಲುಕಿದ್ದವರ ರಕ್ಷಣೆ

share with us

ಮಡಿಕೇರಿ: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಮುಕ್ಕೋಡ್ಲು ವಿಭಾಗದ ಗ್ರಾಮಾಂತರ ಪ್ರದೇಶದ ಬೆಟ್ಟದಲ್ಲಿ ಸಿಲುಕೊಂಡಿದ್ದ ಬಹುತೇಕ ಮಂದಿಯನ್ನು ಸೇನೆ ಹಾಗೂ ವಿವಿಧ ತಂಡಗಳು ರಕ್ಷಿಸಿ ಕರೆತಂದಿದ್ದು, ಇನ್ನು ನಾಪತ್ತೆಯಾಗಿರುವ 32 ಮಂದಿಗೆ ಹುಡುಕಾಟ ನಡೆದಿದೆ. ಮುಕ್ಕೋಡ್ಲು, ಹಮ್ಮಿಯಾಲ, ಕಾಲೂರು, ಸೂರ್ಲಬ್ಬಿ, ಆವಂದಿ ಭಾಗದಲ್ಲಿ ಹಲವು ಮಂದಿ ಕಳೆದ ಮೂರು ದಿನಗಳಿಂದ ಆಹಾರವಿಲ್ಲದೆ ಸಹಾಯಕ್ಕಾಗಿ ಮೊರೆ ಇಡುತ್ತಿದ್ದರು. ಪ್ರವಾಹದಿಂದ ಹಾಗೂ ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ತಲುಪಲು ಸೇನಾ ಯೋಧರಿಗೆ ಸಾಧ್ಯವಾಗಿರಲಿಲ್ಲ. ಭಾನುವಾರ ಪ್ರವಾಹದ ನಡುವೆಯೇ ಹಗ್ಗ ಕಟ್ಟಿಕೊಂಡು ಯೋಧರು ಹೊಳೆಯನ್ನು ದಾಟಿದರು. ಉದ್ದದ ಬಿದಿರು ಕಂಬಗಳನ್ನು ಹಿಡಿದುಕೊಂಡು ಭೂಕುಸಿತವಾಗಿ ಕೆಸರು ತುಂಬಿದ ಪ್ರದೇಶಗಳಲ್ಲಿ ಸೊಂಟದ ತನಕ ಹೂತುಹೋಗುತ್ತಿದ್ದರೂ ಅಪಾಯವನ್ನು ಲೆಕ್ಕಿಸದೆ ಮತ್ತೊಂದು ಬದಿಗೆ ತಲುಪುವಲ್ಲಿ ಯಶಸ್ವಿಯಾದರು. ನಂತರ ಹೊಳೆಯ ಎರಡೂ ಬದಿಗೆ ತಂತಿ ಕಟ್ಟಿ, ಭಾರಿ ಸಾಹಸ ಮಾಡಿ ಹಲವರನ್ನು ಕಾಪಾಡಿದರು. 

ಸೇನೆಯ ಡೋಗ್ರಾ ಬೆಟಾಲಿಯನ್‌ನ 20 ಯೋಧರು, 20 ಮಂದಿಯ ಸಿವಿಲ್‌ ಡಿಫೆನ್ಸ್‌ ತಂಡ, 8 ಮಂದಿ ನೌಕಾದಳದ ಯೋಧರು, ಮುಳುಗುತಜ್ಞರು, 4 ಮಂದಿ ಬೆಟ್ಟವೇರುವ ನುರಿತ ಮಂದಿ, ಪೊಲೀಸ್‌ ಸಿಬ್ಬಂದಿ ಸೇರಿದಂತೆ ವಿಶೇಷ ತಂಡ ಕಾಲೂರು, ದೇವಸ್ತೂರು, ಬಾರಿ ಬೆಳಚು, ಮಾಂದಲಪಟ್ಟಿ ಮುಂತಾದ ಗ್ರಾಮಗಳಲ್ಲಿ ಸಿಲುಕಿಕೊಂಡಿದ್ದವರನ್ನು 7 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ತೆರಳಿ ರಕ್ಷಿಸಿದರು. ಸುಮಾರು 130 ಮಂದಿಯನ್ನು ಕರೆತರುವಲ್ಲಿ ಯಶಸ್ವಿಯಾದರು. 

ತುಂಬು ಗರ್ಭಿಣಿ ರಕ್ಷಣೆ: ಯಾವುದೇ ಆಹಾರ, ನೆರವು ಇಲ್ಲದೆ ಬೆಟ್ಟದಲ್ಲಿ ಸಂಬಂಧಿಕರೊಂದಿಗೆ ಸಿಲುಕಿಕೊಂಡಿದ್ದ 8.5 ತಿಂಗಳ ತುಂಬು ಗರ್ಭಿಣಿಯನ್ನು ಈ ತಂಡ ಕಾಪಾಡಿದೆ. ಗರ್ಭಿಣಿಯನ್ನು ಸ್ಟ್ರಚರ್‌ನಲ್ಲಿ ಹೊತ್ತುಕೊಂಡು ಬಂದರು. ನಿತ್ರಾಣಗೊಂಡ ಗರ್ಭಿಣಿಗೆ ತುರ್ತು ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 
ಸುಮಾರು 9 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ವೃದ್ಧರು ಸೇರಿದಂತೆ 130 ಮಂದಿಯನ್ನು ಕರೆತರಲಾಗಿದೆ. ಇವರಲ್ಲಿ 30 ವೃದ್ಧರು, 50 ಮಕ್ಕಳು ಕೂಡ ಇದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ನಂತರ ಪುನರ್‌ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. 
ಜೋಡುಪಾಲ: ಸೇನೆ ಹಾಗೂ ಸಿವಿಲ್‌ ಡಿಫೆನ್ಸ್‌ ತಂಡ ಜೋಡುಪಾಲ ಹಾಗೂ ಮನೆನಾಡುವಿನಲ್ಲಿ ಭಾನುವಾರ ದಿನವಿಡೀ ಕಾರ್ಯಾಚರಣೆ ನಡೆಸಿದೆ. ಅಲ್ಲಿ ಸುಮಾರು 80 ಮಂದಿಯನ್ನು ರಕ್ಷಿಸಿ ಕರೆತರಲಾಗಿದೆ 

8 ಕಿ.ಮೀ. ನಡೆದು ಬಂದರು 

ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಹೋಂಸ್ಟೇನಲ್ಲಿ ಆಶ್ರಯ ಪಡೆದಿದ್ದ ಸುಮಾರು 90 ಮಂದಿ ಕ್ಷೇಮವಾಗಿ ಸೋಮವಾರಪೇಟೆಗೆ ಬಂದು ಮುಟ್ಟಿದ್ದಾರೆ.ಈ ಪ್ರದೇಶಕ್ಕೆ ಯೋಧರಿಗೆ ಕೂಡ ತೆರಳಲು ಸಾಧ್ಯವಾಗಲಿಲ್ಲ. ಸುತ್ತಮುತ್ತಲು ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಈ ಹೋಂಸ್ಟೇನಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದರು. ಇವರಿಗೆ ಮಾಲೀಕ ಹಂಚೆಟ್ಟಿರ ಮನು ಮುದ್ದಪ್ಪ ಅವರು ಆಶ್ರಯ ನೀಡಿ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದರು. ನಂತರ ರಕ್ಷಣೆಗೆ ಯಾರೂ ಬರುವ ಸಾಧ್ಯತೆ ಇಲ್ಲ ಎನ್ನುವುದನ್ನು ಅರಿತು 90 ಮಂದಿ ಸುಮಾರು 7 ಕಿ.ಮೀ. ದೂರ ನಡೆದುಕೊಂಡೇ ತೆರಳಿದರು. ಬೆಟ್ಟವನ್ನು ಹತ್ತಿ ಇಳಿದು ನಿತ್ರಾಣರಾದರು. ಹಿರಿಯನ್ನು ಕೆಲವರು ಹೊತ್ತುಕೊಂಡರು. ಬೆಳಗ್ಗೆ ಹೊರಟ ಮಂದಿ ಎದ್ದುಬಿದ್ದು ಸಂಜೆಯ ವೇಳೆಗೆ ಮುಖ್ಯರಸ್ತೆಗೆ ತಲುಪಿದರು. ಇವರಿಗೆ ಶಾಸಕ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌ ಅವರು ವಾಹನ ವ್ಯವಸ್ಥೆ ಮಾಡಿ ಸೋಮವಾರಪೇಟೆಗೆ ಕರೆದುಕೊಂಡು ಹೋದರು. 

ನಿಲ್ಲದ ಆ್ಯಂಬುಲೆನ್ಸ್‌ ಸೈರನ್‌ 

ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ಗಳ ಸೈನರ್‌ ನಿರಂತರವಾಗಿ ಕೇಳುತ್ತಿದೆ. ಜಿಲ್ಲೆಯಲ್ಲಿರುವ ಸರಕಾರಿ ಹಾಗೂ ಖಾಸಗಿ ಆ್ಯಂಬುಲೆನ್ಸ್‌ಗಳಲ್ಲದೆ ಪಕ್ಕದ ಜಿಲ್ಲೆಗಳಿಂದಲೂ ತರಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ಮುಕ್ಕೋಡ್ಲು, ಜೋಡುಪಾಲ, ಸಂಪಾಜೆ, ಕುಶಾಲನಗರ, ಮಾದಾಪುರ, ಹಟ್ಟಿಹೊಳೆ ಮುಂತಾದ ಕಡೆಗಳಲ್ಲಿ ರಕ್ಷಿಸಲಾದ ಮಂದಿಯನ್ನು ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ನಿರಾಶ್ರಿತರ ಕೇಂದ್ರಗಳಲ್ಲಿದ್ದ ಕೆಲವು ಹಿರಿಯರು ಕೂಡ ಅಸ್ವಸ್ಥಗೊಂಡಿದ್ದು, ಅವರುಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. 

ನೆರವಿನ ವಸ್ತುಗಳದ್ದೇ ತಲೆಬಿಸಿ 

ಕೊಡಗಿನಲ್ಲಿ ಜನರು ಸಂಕಷ್ಟ ಸಿಲುಕಿರುವ ಸುದ್ದಿ ಹರಡುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಇವುಗಳನ್ನು ಹೇಗೆ ಬಳಸಿಕೊಳ್ಳುವುದು ಎಂಬುದೇ ಇದೀಗ ಜಿಲ್ಲಾಡಳಿತದ ತಲೆನೋವಾಗಿದೆ. ಹಲವು ಭಾಗಗಳಿಂದ ಆಹಾರಗಳು ಬಂದ ಹಿನ್ನೆಲೆಯಲ್ಲಿ ಅದರ ಅಗತ್ಯ ಕಂಡು ಬರುತ್ತಿಲ್ಲ. ಈಗಾಗಲೇ ಪುನರ್‌ವಸತಿ ಕೇಂದ್ರಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಆಹಾರ ಪೂರೈಸುತ್ತಿವೆ. ಪರಿಣಾಮ, ಜಿಲ್ಲೆಯ ಹೊರಗಿನಿಂದ ಬಂದ ಆಹಾರಗಳು ಕೊಳೆಯುತ್ತಿವೆ. ಪರಿಣಾಮ, ಆಹಾರ ಪದಾರ್ಥಗಳನ್ನು ಕಳುಹಿಸಬೇಡಿ ಎಂದು ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 

ಎಂಎಲ್‌ಎ ನಾಪತ್ತೆ ವದಂತಿ 

ಈ ನಡುವೆ ಕೆಲವು ಸುದ್ದಿ ಚಾನಲ್‌ಗಳು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌ ಅವರು ಮುಕ್ಕೋಡ್ಲು ವಿಭಾಗದಲ್ಲಿ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಬಿತ್ತರಿಸಿದವು. ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಸ್ವತಃ ರಕ್ಷಣಾ ಕಾರ್ಯದಲ್ಲಿ ಅಪ್ಪಚ್ಚು ರಂಜನ್‌ ತೊಡಗಿಸಿಕೊಂಡರು. ಅವರ ಮೊಬೈಲ್‌ ಬ್ಯಾಟರಿ ಚಾರ್ಜ್‌ ಮುಗಿದ ಕಾರಣ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಇದರಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಬಿತ್ತರಿಸಿದವು. ಪರಿಣಾಮ, ಅಪ್ಪಚ್ಚು ರಂಜನ್‌ ಮನೆಯವರು ಹಾಗೂ ಕಾರ್ಯಕರ್ತರು ಆತಂಕಗೊಂಡರು. ಆದರೆ, ಅವರು ಕ್ಷೇಮವಾಗಿದ್ದಾರೆ, ಈ ರೀತಿ ಸುಳ್ಳು ಸುದ್ದಿ ಏಕೆ ಬಿತ್ತರಿಸುತ್ತೀರಿ ಎಂದು ಅವರ ಸಹೋದರ ಎಂಎಲ್‌ಸಿ ಸುನೀಲ್‌ ಸುಬ್ರಹ್ಮಣಿ ಸುದ್ದಿವಾಹಿನಿಯ ವರದಿಗಾರರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎದುರಿನಲ್ಲಿಯೇ ತರಾಟೆಗೆ ತೆಗೆದುಕೊಂಡರು. ನಂತರ ಬ್ರೇಕಿಂಗ್‌ ಸುದ್ದಿಯನ್ನು ತೆಗೆಸಲಾಯಿತು. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا