Urdu   /   English   /   Nawayathi

ಕೊಡಗು ಪ್ರವಾಹ: 4,320 ಮಂದಿ ರಕ್ಷಣೆ, ಎಲ್ಲಾ ಪ್ರವಾಸಿಗರ ಬುಕ್ಕಿಂಗ್ ರದ್ದು

share with us

ಕೊಡಗು: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ಸಂತ್ರಸ್ಥರ ರಕ್ಷಣಾ ಕಾರ್ಯ ಸೋಮವಾರ ಅಂತಿಮ ಹಂತ ತಲುಪಿದ್ದು, ಇದುವರೆಗೆ ಒಟ್ಟು 4,320 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಇಂದು ಅಂತಿಮ ಹಂತ ತಲುಪಿದ್ದು, 4,320 ಮಂದಿಯನ್ನು ರಕ್ಷಿಸಿ, ಜಿಲ್ಲೆಯ 41 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 50 ಮಂದಿ ಇನ್ನು ನಾಪತ್ತೆಯಾಗಿದ್ದಾರೆ ಅಥವಾ ಪ್ರವಾಹದಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ ಮತ್ತು ನೌಕಾಪಡೆ ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ, ಇನ್ನೂ ಯಾರಾದರೂ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡುಗು ಜಿಲ್ಲೆಯಲ್ಲಿ ಹಲವು ಪ್ರವಾಸಿಗರು ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಆಗಸ್ಟ್ 31ರ ವರೆಗೆ ಎಲ್ಲಾ ಹೋಟೆಲ್ ಗಳ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ.

ಪ್ರವಾಸಿಗರು ಹೋಟೆಲ್, ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಆಗಸ್ಟ್ 31ರ ವರೆಗೆ ಮಾಡಿದ್ದ ಬುಕ್ಕಿಂಗ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ಪ್ರವಾಸಿಗರ ರಕ್ಷಣೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಮಾರು 30 ಕ್ಯಾಂಪ್ ಗಳಲ್ಲಿರುವ ಸಂತ್ರಸ್ಥರಿಗೆ ಅಗತ್ಯ ಸೌಲಭ್ಯ ನೀಡಲು ಜಿಲ್ಲಾ ಆಡಳಿತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ ಕೊಡಗು ಇಂದು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಭಾಗಶಃ ಕೊಡಗು ಪ್ರವಾಹದಲ್ಲಿ ಮುಳುಗಿದೆ. ಆದರೆ ಕೊಡಗಿನ ಈ ಸ್ಥಿತಿಗೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا