Urdu   /   English   /   Nawayathi

ಸರ್ಕಾರ ಕೊಡಗಿನ ಜನತೆ ಜೊತೆ ಇದೆ, ಆತಂಕ ಪಡುವ ಅಗತ್ಯವಿಲ್ಲ: ಸಿಎಂ ಕುಮಾರಸ್ವಾಮಿ

share with us

ಬೆಂಗಳೂರು: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ರಾಜ್ಯ ಸರ್ಕಾರ ಕೊಡಗಿನ ಜನತೆಯ ಜೊತೆ ಇದೆ. ಪ್ರವಾಹ ಪರಿಸ್ಥಿತಿಗೆ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಯಾವುದಕ್ಕೂ ಜನರು ಆತಂಕ ಪಡುವುದು ಬೇಡ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ. 
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, 

ಕೊಡಗಿನಲ್ಲಿ ದೊಡ್ಡಮಟ್ಟದ ಅನಾಹುತ ಉಂಟಾಗಿದೆ. ಸರ್ಕಾರ ತಕ್ಷಣವೇ ಸ್ಪಂದಿಸುವಲ್ಲಿ ಯಾವುದೇ ಲೊಪದೋಷವಾಗಿಲ್ಲ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ ಎಂದರು.

ಕೊಡಗಿನಲ್ಲಿ ಪ್ರವಾಹದಿಂದಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 773 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 123 ಕಿ.ಮೀ. ರಸ್ತೆ ಹಾಳಾಗಿದೆ. 58 ಸೇತುವೆ, 278 ಸರ್ಕಾರಿ ಕಟ್ಟಡ ಹಾಗೂ 3800 ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದರು.

ಪ್ರವಾಹ ಸಂತ್ರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರ ನೂರು ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ನಂತರ ನಾನು ಎರಡು ದಿನ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ ಎಂದರು.

ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಭೂ ಕುಸಿತವಾಗುತ್ತೆ. ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಜ್ಞರನ್ನು ಕರೆಸುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೊಡಗಿನ ಕೆಲ ಬಡಾವಣೆಗಳು ಜಲಾವೃತವಾಗಿದ್ದು, ನೀರು ಹೊರಹಾಕಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈಗಾಗಲೇ ನೀರು ಹೊರಹಾಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ದಿನದ 24 ಗಂಟೆಯೂ ರಕ್ಷಣಾ ತಂಡ ಕೆಲಸ ಮಾಡುತ್ತಿದೆ. 1,720 ತಜ್ಞರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಾರಂಗಿ ಡ್ಯಾಂ ಬಳಿ ವಾಯುಸೇನೆ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಪುನರ್ವಸತಿ ಕಾರ್ಯಕ್ಕೆ ಇಬ್ಬರು ಐಎಎಸ್​ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಜಿಲ್ಲಾಧಿಕಾರಿ, ಎಸ್​ಪಿ ಹಾಗೂ ಉಸ್ತುವಾರಿ ಕಾರ್ಯದರ್ಶಿ ಕೂಡ ಮಹಿಳೆ ಆಗಿದ್ದಾರೆ. ಅವರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ವಾಯುಪಡೆಯಿಂದ ವಿಶೇಷ ವಿಮಾನ ಕೂಡಾ ಬೀಡುಬಿಟ್ಟಿದೆ. ಸಂತ್ರಸ್ತರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಿಸಲಾಗುವುದು ಎಂದ ಸಿಎಂ, ನೆರೆ ಸಂತ್ರಸ್ಥರು ಪಾತ್ರೆ ಖರೀದಿಸಲು ಸರ್ಕಾರದಿಂದಲೇ ಹಣ ನೀಡಲಾಗುವುದು ಎಂದು ತಿಳಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا