Urdu   /   English   /   Nawayathi

ಭಾರತದೊಂದಿಗೆ 'ಅಡ್ಡಿರಹಿತ' ಮಾತುಕತೆ ಬೇಕು: ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ

share with us

ಇಸ್ಲಾಮಾಬಾದ್: 20 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಾರತದೊಂದಿಗಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಉತ್ತಮ ಬಾಂಧವ್ಯ ಹೊಂದಲು ಯಾವುದೇ ಅಡೆತಡೆಯಿಲ್ಲದೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧ ಎಂದು ಅಲ್ಲಿನ ನೂತನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ತಿಳಿಸಿದ್ದಾರೆ. ಎರಡೂ ರಾಷ್ಟ್ರಗಳಿಗೆ ಸಮಸ್ಯೆ ಬಗೆಹರಿಸಲು ಬೇರೆ ಯಾವುದೇ ಮಾರ್ಗಗಳಿಲ್ಲದಿರುವುದರಿಂದ ಮಾತುಕತೆಯೊಂದೇ ಬುದ್ಧಿವಂತಿಕೆಯ ಮಾರ್ಗ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಜ್ಞಾ ವಿಧಿ ಸ್ವೀಕಾರದ ನಂತರ ಖುರೇಷಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು. 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸರ್ಕಾರದಲ್ಲಿ 2008ರಿಂದ 2011ರವರೆಗೆ ಖುರೇಷಿ ವಿದೇಶಾಂಗ ಸಚಿವರಾಗಿದ್ದರು. ಪಾಕಿಸ್ತಾನ ಮೂಲದ 10 ಎಲ್ಇಟಿ ಉಗ್ರಗಾಮಿಗಳು ವಾಣಿಜ್ಯ ನಗರಿ ಮುಂಬೈ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಖುರೇಶಿ ದೆಹಲಿಯಲ್ಲಿದ್ದರು.

ಪಾಕಿಸ್ತಾನ ಪೂರ್ವ ಮತ್ತು ಪಶ್ಚಿಮ ನೆರೆರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಮರುನಿರ್ಮಾಣ ಮಾಡಲು ಮತ್ತು ಶಾಂತಿ ನೆಲೆಸುವಂತೆ ಮಾಡಲು ಪಾಕಿಸ್ತಾನ ಬಯಸುತ್ತದೆ ಮತ್ತು ಭಾರತದೊಂದಿಗಿನ ಎಲ್ಲಾ ವಿಷಯಗಳನ್ನು ಬಗೆಹರಿಸಲು ಪಾಕಿಸ್ತಾನ ಬಯಸುತ್ತದೆ ಎಂದರು.

ನಮಗೆ ನಿರಂತರ ಯಾವುದೇ ಅಡೆತಡೆಯಿಲ್ಲದ ಮಾತುಕತೆಯ ಅಗತ್ಯವಿದೆ. ಇದೊಂದೇ ನಮಗಿರುವ ಬುದ್ಧಿವಂತಿಕೆಯ ದಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಪಾಕ್ ನಡುವಣ ಬಾಂಧವ್ಯ 2016ರಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ದಾಳಿ ಮತ್ತು ಭಾರತದ ಸರ್ಜಿಕಲ್ ಸ್ಟ್ರೈಕ್ ನಂತರ ಇನ್ನಷ್ಟು ಹದಗೆಟ್ಟಿತ್ತು. ಭಾರತದ ಗೂಢಚಾರಿ ಎಂದು ಹೇಳಲಾಗುತ್ತಿರುವ ಕುಲಭೂಷಣ್ ಜಾಧವ್ ಅವರಿಗೆ ಕಳೆದ ಏಪ್ರಿಲ್ ನಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆ ಪ್ರಕಟಿಸಿದ ಮೇಲಂತೂ ಅದು ಇನ್ನಷ್ಟು ಹದಗೆಡಲು ಆರಂಭವಾಯಿತು. ಪಾಕಿಸ್ತಾನ ಟೆಹ್ರೀಕ್ ಇ ಇನ್ಸಾಫ್ ಉಪಾಧ್ಯಕ್ಷರಾಗಿರುವ ಮಹಮ್ಮೂದ್ ಖುರೇಷಿ ಇಂದು ಹೇಳಿಕೆ ನೀಡಿ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿನಂದನೆ ಸಲ್ಲಿಸಿದ್ದು ಭಿನ್ನಾಭಿಪ್ರಾಯ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದರು.

ನಾವು ನೆರೆ ರಾಷ್ಟ್ರಗಳು ಮಾತ್ರವಲ್ಲದೆ, ಪರಮಾಣು ಶಕ್ತಿಶಾಲಿ ದೇಶಗಳು. ನಮ್ಮಲ್ಲಿ ಹಳೆಯ ಭಿನ್ನಾಭಿಪ್ರಾಯಗಳಿದ್ದು ಅವುಗಳೇನೆಂದು ಎರಡೂ ದೇಶಗಳಿಗೆ ಗೊತ್ತಿದೆ. ಅವುಗಳನ್ನು ಬಗೆಹರಿಸುವ ಅಗತ್ಯವಿದೆ ಎಂದು ಭಾರತದ ವಿದೇಶಾಂಗ ಸಚಿವೆಗೆ ಹೇಳಲು ಇಚ್ಛಿಸುತ್ತೇನೆ ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا