Urdu   /   English   /   Nawayathi

ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಎರಡೂವರೆ ಲಕ್ಷ ರೂ. ಪರಿಹಾರ

share with us

ಬೆಂಗಳೂರು: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೊಡಗು ಸೇರಿದಂತೆ ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಎರಡೂವರೆ ಸಾವಿರ ನಾಗರಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಧಾರಾಳವಾಗಿ ನೆರವು ನೀಡಲಿದ್ದು, 2ರಿಂದ ಎರಡೂವರೆ ಲಕ್ಷ ರೂ. ನೀಡಲು ಸೂಚಿಸಲಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ 50 ಜೆಸಿಬಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಮನಗರ, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳ ಕಂದಾಯ ಇಲಾಖೆ ಅಧಿಕಾರಿಗಳನ್ನು ನೆರೆ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದೆ. ವೈದ್ಯರ ತಂಡಗಳನ್ನೂ ಕಳುಹಿಸಿ ಕೊಡಲಾಗಿದೆ ಎಂದರು.

ಮಕ್ಕಳ ಆಹಾರ, ಔಷಧಿ, ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಸೂಚಿಸಿರುವುದಾಗಿ ಹೇಳಿದ ಸಿಎಂ, ಕಳೆದ ಏಪ್ರಿಲ್‍ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಅನಾಹುತಕ್ಕೆ 153 ಮಂದಿ ಮೃತಪಟ್ಟಿದ್ದು, 11,427 ಮನೆಗಳು ಹಾನಿಗೀಡಾಗಿವೆ. 723 ಜಾನುವಾರುಗಳು ಮೃತಪಟ್ಟಿವೆ. ಕೊಡಗಿನಲ್ಲಿ ಇದುವರೆಗೂ 6 ಮಂದಿ ಮೃತಪಟ್ಟಿದ್ದು, 800ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಖಾತೆಯಲ್ಲಿ 237ಕೋಟಿ ರೂ. ಹಣವಿದ್ದು, ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗುವುದು. ಕೊಡಗಿನಲ್ಲಿ 30 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 2260 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 70 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಹಲವು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು, ಅಡಿಕೆ, ಕಾಫಿ, ಕಾಳು ಮೆಣಸು ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ನಷ್ಟದ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಶಿವಮೊಗ್ಗ, ಹಾಸನ , ಮೈಸೂರು ಮತ್ತಿರರ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಕೊಡಗು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಗುಡ್ಡ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದ ಜನರನ್ನು ರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆ ಹಾಕದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಭಾರತೀಯ ಸೇನೆಯ 75 ಮಂದಿ, ಭಾರತೀಯ ಜಲಸೇನೆಯ (ನೇವಿ) 12 ಮಂದಿ, ಎನ್‍ಡಿಆರ್‍ಎಫ್‍ನ 31 ಮಂದಿ, ಅಗ್ನಿಶಾಮಕದಳ, ಎನ್‍ಸಿಸಿ, ನಾಗರಿಕ ಸೇನೆಯ 527 ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ರಕ್ಷಣಾ ಕಾರ್ಯಕ್ಕೆ ಬೋಟ್‍ಗಳನ್ನು ಬಳಸಲಾಗುತ್ತಿದೆ. ಸೇನೆಯ ಹೆಲಿಕಾಫ್ಟರ್ ಮೂಲಕ ಜನರನ್ನು ರಕ್ಷಿಸಲಾಗಿದ್ದು, ಆಹಾರ ಪೂರೈಕೆಯನ್ನು ಮಾಡಲಾಗುತ್ತಿದೆ. ಜೋಡಪಾಲದಲ್ಲಿ 200ರಿಂದ 300 ಎಕರೆ ಪ್ರದೇಶ ಕುಸಿತಕ್ಕೆ ಒಳಗಾಗಿದ್ದು, 347 ಮಂದಿಯನ್ನು ರಕ್ಷಿಸಲಾಗಿದೆ ಎಂದರು.

# ದೊಡ್ಡಮಟ್ಟದಲ್ಲಿ ಅನಾಹುತ:
ಕೊಡಗಿನಲ್ಲಿ ದೊಡ್ಡಮಟ್ಟದಲ್ಲಿ ಅನಾಹುತವಾಗಿದ್ದು, ತುರ್ತಾಗಿ ಅಗತ್ಯವಿರುವ ಅಡುಗೆ ಆನಿಲ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯನ್ನು ಆದ್ಯತೆ ಮೇರೆಗೆ ಪೂರೈಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಎಟಿಎಂಗಳಲ್ಲಿ ಹಣ ಪೂರೈಕೆ ಮಾಡುವಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ.  ಡಿತವಾಗಿರುವ ವಿದ್ಯುತ್ ಸಂಪರ್ಕ, ದೂರಸಂಪರ್ಕಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿರುವುದಾಗಿ ತಿಳಿಸಿದ ಸಿಎಂ, ವಿದ್ಯುತ್ ಮಾರ್ಗ ಸರಿಪಡಿಸಲು ಇತರೆ ಜಿಲ್ಲೆಗಳಿಂದ ಸಿಬ್ಬಂದಿಗಳನ್ನು ಕರೆಸಿಕೊಳ್ಳುವಂತೆ ಹೇಳಿದ್ದೇನೆ ಎಂದರು.   ಸಚಿವರಾದ ಡಿ.ಸಿ.ತಮ್ಮಣ್ಣ, ಜಯಮಾಲಾ, ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا