Urdu   /   English   /   Nawayathi

ಮಡಿಕೇರಿ:ಇಂದು ಸಾವಿರಕ್ಕೂ ಹೆಚ್ಚು ಜನರ ರಕ್ಷಣೆ; ಸಿಎಂ ಸಮೀಕ್ಷೆ

share with us

ಮಡಿಕೇರಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಕೊಡಗು ಜಿಲ್ಲೆಯಲ್ಲಿ ಗಾಳಿ, ಮಳೆ ಮುಂದುವರಿದಿದ್ದು, ಕಂಡ ಕಂಡಲ್ಲಿ ಗುಡ್ಡ ಕುಸಿತವಾಗುತ್ತಿದ್ದು ಜನರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು , ಸೇನಾ ಪಡೆಗಳು ಶನಿವಾರ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದು,ಶನಿವಾರ 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. 2 ದಿನಗಳಿಂದ ಚೇರಂಬಾಣೆ ಎಂಬಲ್ಲಿ ಗುಡ್ಡದಲ್ಲಿ ಆಶ್ರಯ ಪಡೆದಿದ್ದ 400 ಮಂದಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 

ಸಿಎಂ ಮಹತ್ವದ ಸಭೆ 
ಕೊಡಗು ಜಿಲ್ಲೆಗೆ ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದು, ಪರಿಹಾರ ಕಾರ್ಯಾಚರಣೆ ಪರಿಶೀಲಿಸಲಿದ್ದಾರೆ. ಅದಕ್ಕೂ ಮುನ್ನಾ ಬೆಂಗಳೂರಿನ  ಗೃಹ ಕಚೇರಿ ಕೃಷ್ಣಾದಲ್ಲಿ  ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಪ್ರವಾಹ ಹಾನಿಯ ಕುರಿತು ಮಾಹಿತಿ ಪಡೆದರು. 

ಕೊಡಗು ಜಿಲ್ಲೆಯ ಪರಿಸ್ಥಿತಿ ಪರಿಶೀಲಿಸಲು ಮುಖ್ಯಮಂತ್ರಿ ಎಚ್‌ಡಿಕೆ ಅವರು ಪಿರಿಯಾಪಟ್ಟಣದಲ್ಲಿ ಬಂದಿಳಿದು ಬಳಿಕ ರಸ್ತೆಮಾರ್ಗವಾಗಿ ಕೊಡಗಿಗೆ ತೆರಳಿದರು. 

ವೈಮಾನಿಕ ಸಮೀಕ್ಷೆ ಇಲ್ಲ
ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. 

ಇನ್ನೆರಡು ದಿನ ಭಾರೀ ಮಳೆ 

ಕೊಡಗು ಜಿಲ್ಲೆಯಲ್ಲಿ  ಇನ್ನೆರಡುದಿನ ಅಗಸ್ಟ್‌ 20 ರ ವರೆಗೆ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ಕೇಂದ್ರ ನೀಡಿದ್ದು ,ಜನರ ಆತಂಕ ಇನ್ನು ಹೆಚ್ಚಾಗಿದ್ದು ಎಲ್ಲೆಡೆ ಕಣ್ಣೀರಿಡುತ್ತಿರುವ ದೃಶ್ಯ ಕಂಡು ಬಂದಿದೆ.  

ಕೊಡಗಿನಲ್ಲಿ ಈಗಾಗಲೇ ಭಾರೀ ಮಳೆಯ ಅವಾಂತರಕ್ಕೆ 6 ಮಂದಿ ಪ್ರಾಣ ಕಳೆದುಕೊಂಡಿದ್ದು , ಹಲವು ಗ್ರಾಮಗಳೇ ನೀರಿನಲ್ಲಿ ಕೊಚ್ಚಿ ಹೋಗಿವೆ. 

 ಮಡಿಕೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ಗುಡ್ಡ ಕುಸಿತದಿಂದ ಮನೆಗಳು ನಾಶ ವಾಗಿವೆ. ಪ್ರಮುಖವಾಗಿ ಎತ್ತರದ ಪ್ರ‌ದೇಶ ವಾಗಿರುವ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಸಾಲು ಸಾಲಾಗಿ ಮನೆಗಳು ಕುಸಿಯುತ್ತಿವೆ. ಭಾರೀ ಅಪಾಯದ ಪರಿಸ್ಥಿತಿ ಇರುವ ಕಾರಣ 1,300 ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಮಡಿಕೇರಿಯ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಗಳು ಕಣ್ಮರೆಯ ಸ್ಥಿತಿಯಲ್ಲಿವೆ. ವಾಸದಮನೆ, ಕೃಷಿ ಭೂಮಿ ನಾಪತ್ತೆಯಾಗಿವೆ. ಆತಂಕಿತ ನೂರಾರು ಕುಟುಂಬಗಳು ಮನೆ ತೊರೆದಿದ್ದರೆ, ಮತ್ತೆ ನೂರಾರು ಮಂದಿ ನೆರವಿಗಾಗಿ ಕಾಯುತ್ತಿದ್ದಾರೆ.ಈಗಾಗಲೆ ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.

ಅಗ್ನಿ ಶಾಮಕ ದಳ, ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಅರಣ್ಯ ಸಿಬಂದಿಗಳು ಮತ್ತು ಸ್ಥಳೀಯರು ಸಂಕಷ್ಟದಲ್ಲಿರುವವರ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. 

ತುರ್ತು ಸಹಾಯವಾಣಿ: ಜಿಲ್ಲಾಧಿಕಾರಿ - 9482628409, ಜಿ.ಪಂ. ಸಿಇಒ- 9480869000, ಸೇನಾ ರಕ್ಷಣಾ ತಂಡ- 9446568222

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا