Urdu   /   English   /   Nawayathi

ಉತ್ತರ ಕರ್ನಾಟಕಕ್ಕೆ ದೇವೇಗೌಡರ ಕೊಡುಗೆಗಳ ಕುರಿತ 50 ಪುಟಗಳ ಪತ್ರ ಬಿಡುಗಡೆ

share with us

ಬೆಂಗಳೂರು: 19 ಜುಲೈ (ಫಿಕ್ರೋಖಬರ್ ಸುದ್ದಿ) ಮಾಜಿ ಪ್ರಧಾನಿ ದೇವೇಗೌಡರು ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿ ಯಾಗಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಮಾಜಿ ಶಾಸಕ ವೈ.ಎಸ್.ವಿ.ದತ್ತ ಇಂದು 50 ಪುಟಗಳ ಬಹಿರಂಗ ಪತ್ರ ಅಥವಾ ಉತ್ತರ ಪತ್ರವನ್ನು ಬಿಡುಗಡೆ ಮಾಡಿದರು.  ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಬಂಧುಗಳಿಗೆ ಒಂದು ಅಭಿಮಾನ ಪೂರ್ವಕ ಬಹಿರಂಗ ಪತ್ರ-ಉತ್ತ ರ ಪತ್ರ ಎಂಬ 50 ಪುಟಗಳ ಬಹಿರಂಗ ಪತ್ರವನ್ನು ಅವರು ಬಿಡುಗಡೆ ಮಾಡಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉತ್ತರ ಕರ್ನಾಟಕಕ್ಕೆ ದೇವೇಗೌಡರು ಏನು ಕೊಡುಗೆ ಕೊಟ್ಟಿದ್ದಾರೆ, ಈ ಭಾಗಕ್ಕೆ ಗೌಡರಿಂದ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಇದು ಉತ್ತರವಾಗಲಿದೆ. ಉತ್ತರ ಪತ್ರದಲ್ಲಿ ಇರುವ ಅಂಕಿಅಂಶಗಳು, ಆದೇಶಗಳು, ದಿನಾಂಕಗಳು ವಾಸ್ತವವಾಗಿದ್ದು, ಆಧಾರಸಹಿತವಾಗಿವೆ. ವೈಯಕ್ತಿಕ ನೆಲೆತಟ್ಟಿನಲ್ಲಿ ಉತ್ತರ ಪತ್ರವನ್ನು ಬಿಡುಗಡೆ ಮಾಡಿದ್ದೇನೆ ಎಂದರು.

ಉತ್ತರ ಕರ್ನಾಟಕಕ್ಕೆ ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ಹುಬ್ಬಳ್ಳಿಯಲ್ಲೇ ಬಹಿರಂಗ ಚರ್ಚೆಗೆ ಸಿದ್ದವಿದ್ದು, ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸುವವರು ಚರ್ಚೆಗೆ ಬರಬಹುದು ಎಂದರು.  ಉತ್ತರ ಕರ್ನಾಟಕ ಭಾಗದ ಅಭಿವೃದ್ದಿಗೆ ಮಾಡಿರುವ ಕಾರ್ಯಗಳ ಶ್ವೇತ ಪತ್ರ ಹೊರಡಿಸುವಂತೆ ಜಗದೀಶ್ ಶೆಟ್ಟರ್ ಮಾಡಿರುವ ಆಗ್ರಹವನ್ನು ಸ್ವಾಗತಿಸಲಾಗುವುದು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‍ಡಿಎ ಸರ್ಕಾರ ಉತ್ತರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಷ್ಟೆಂಬ ಬಗ್ಗೆ ಕಪ್ಪುಪತ್ರ ನೀಡಲೂ ಕೂಡ ಸಿದ್ದ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಹಾದಾಯಿ, ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ ಯೋಜನೆ ಸೇರಿದಂತೆ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಮುಂದಿನ ದಿನಗಳಲ್ಲಿ ಕಪ್ಪು ಪತ್ರ ಹೊರತರಲಾಗುವುದು ಎಂದರು. ದೇವೇಗೌಡರ 55 ವರ್ಷದ ಸಾರ್ವಜರ್ನಿಕ ಜೀವನದಲ್ಲಿ ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಅಧಿಕಾರದಲ್ಲಿ ಇದ್ದದು 6 ವರ್ಷ 4 ತಿಂಗಳು ಮಾತ್ರ. ತಮ್ಮ ಅಧಿಕಾರ ಅವಧಿಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಗೆ ಮಾಡಿರುವ ಕೊಡುಗೆಗಳನ್ನು ಅಂಕಿ ಅಂಶಗಳ ಸಹಿತ ಈ ಪತ್ರದಲ್ಲಿ ನೀಡಲಾಗಿದೆ.

ಅದರಲ್ಲಿ ಮುಖ್ಯವಾಗಿ ಬಚಾವತ್ ಆಯೋಗ ರಾಜ್ಯಕ್ಕೆ ಹಂಚಿಕೆ ಮಾಡಿದ್ದ 734 ಟಿಎಂಸಿ ಅಡಿ ನೀರನ್ನು 2000 ಇಸವಿಯೊಳಗೆ ಬಳಕೆ ಮಾಡಿಕೊಳ್ಳಬೇಕಾದ ತೂಗುಗತ್ತಿ ಇತ್ತು. 1996ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆ ನೀರನ್ನು ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಂಡು ಉಕ ಜನರು ನಿಟ್ಟುಸಿರು ಬಿಡುವಂತಾಯಿತು. ಇಲ್ಲದಿದ್ದರೆ ಬಳಕೆಯಾಗದೆ ಉಳಿದ ನೀರನ್ನು ಮರು ಹಂಚಿಕೆ ಮಾಡುವ ಆತಂಕವಿತ್ತು ಎಂದು ಹೇಳಿದರು.

ರಾಜ್ಯಕ್ಕೆ ಪ್ರತ್ಯೇಕ ರೈಲ್ವೆ ವಲಯಕ್ಕಾಗಿ ಹೋರಾಟ ಮಾಡಿದವರು ದೇವೇಗೌಡರು. ಅದರ ಪರಿಣಾಮ ಬೆಂಗಳೂರಿನಲ್ಲಿ ರೈಲ್ವೆ ವಲಯ ಸ್ಥಾಪನೆಯಾಯಿತು. ಹುಬ್ಬಳ್ಳಿಯ ರೈಲ್ವೆ ವರ್ಕ್‍ಶಾಪ್‍ಗೂ ಪ್ರಧಾನಿಯಾಗಿದ್ದಾಗ ಕಾಯಕಲ್ಪ ಕೊಟ್ಟರು. ಹುಬ್ಬಳ್ಳಿ-ಅಂಕೋಲ ರೈಲ್ವೆ ಮಾರ್ಗ ಅಧಿಕಾರದಲ್ಲಿದ್ದಾಗ ಹಣ ನೀಡಿದ್ದರು. ಇದುವರೆಗೂ ಅದು ಕಾರ್ಯಗತವೇ ಆಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ರೈಲ್ವೆ, ನೀರಾವರಿ, ಮೂಲಸೌಲಭ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯುಳ್ಳ ಪತ್ರ ಬರೆಯಲಾಗಿದೆ ಎಂದರು. ಉತ್ತರ ಕರ್ನಾಟಕದ ಜನರು ದೇವೇಗೌಡರು ಮಾಡಿರುವ ಕಾರ್ಯಗಳನ್ನು ಅಭಿಮಾನದಿಂದ ಕಾಣುತ್ತಿದ್ದಾರೆ ಎಂದು ದತ್ತ ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا