Urdu   /   English   /   Nawayathi

ರಾಜ್ಯದಲ್ಲಿರುವ 50 ಸಾವಿರ ನಕಲಿ ವೈದ್ಯರ ಹಾವಳಿ ಬರುತ್ತಿದೆ ಹೊಸ ಕಾಯ್ದೆ

share with us

ಬೆಂಗಳೂರು: 15 ಜುಲೈ (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ 50 ಸಾವಿರ ನಕಲಿ ವೈದ್ಯರನ್ನು ಪತ್ತೆಹಚ್ಚಿದ್ದು, ಕಠಿಣ ಕಾನೂನು ಕ್ರಮಗಳ ಮೂಲಕ ಇವರ ನಿಯಂತ್ರಣಕ್ಕೆ ಹೊಸ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಇಂದಿಲ್ಲಿ ಹೇಳಿದರು. ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ವೈದ್ಯಕೀಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ನೀಡಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿರುವ ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಸರ್ಕಾರ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ ತನಿಖೆ ನಡೆಸಿ 50 ಸಾವಿರ ನಕಲಿ ವೈದ್ಯರನ್ನು ಪತ್ತೆಹಚ್ಚಿದ್ದು, ಹೊಸ ಕಾಯ್ದೆ ರೂಪಿಸುವ ಮೂಲಕ ಈ ಹಾವಳಿ ತಡೆಗಟ್ಟಲಾಗುವುದು ಎಂದು ಹೇಳಿದರು.

ಶುದ್ಧ ಕುಡಿಯುವ ನೀರು, ಉತ್ತಮ ಆಹಾರ, ಇನ್ನಿತರ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ದಿನೇ ದಿನೇ ನಕಲಿ ವೈದ್ಯರುಗಳು ರಾಜ್ಯದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಅದಕ್ಕಾಗಿ ರಾಜ್ಯದ ವಿವಿಧೆಡೆ ದಾಳಿ ನಡೆಸಿ ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದ್ದು, ಅವರಿಗೆ ಈ ರೀತಿ ಮಾಡಬಾರದೆಂದು ನೋಟಿಸ್ ನೀಡಲಾಗಿತ್ತು. ಇದೇ ಕಾರ್ಯವನ್ನು ಮುಂದುವರಿಸಿದವರಿಗೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗಿದೆ. ಹೊಸ ಕಾಯ್ದೆ ರೂಪಿಸುವ ಮೂಲಕ ಈ ನಕಲಿ ಹಾವಳಿಗೆ ಇತಿಶ್ರೀ ಹಾಡಲಾಗುವುದು ಎಂದು ಸಚಿವರು ಹೇಳಿದರು.

ವೈದ್ಯರ ಸಮಸ್ಯೆ, ಅವರ ಮೇಲೆ ನಡೆಯುವ ದೌರ್ಜನ್ಯ ತಡೆ, ವೇತನ ಹೆಚ್ಚಳ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು. ವಾಜಪೇಯಿ ಆರೋಗ್ಯಶ್ರೀ ಯೋಜನೆ, ಯಶಸ್ವಿನಿ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳನ್ನು ವಿಲೀನಗೊಳಿಸಿ ಯೂನಿವರ್ಸಲ್ ಹೆಲ್ತ್‍ಸ್ಕೀಮ್ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನೀಟ್ ಪರೀಕ್ಷೆ ಬರೆದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ರ್ಯಾಂಕ್ ಪಡೆದ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಹಾಗೂ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಎಂಎಸ್‍ನಲ್ಲಿ ಸೀಟು ಸಿಗಲಿದೆ ಎಂದು ಹೇಳಿದರು. ವೈದ್ಯಕೀಯ ಕ್ಷೇತ್ರದಲ್ಲಿನ ನಿರುದ್ಯೋಗ ತಡೆಗಟ್ಟುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಯಡಿ ಎಸ್‍ಎಸ್‍ಎಲ್‍ಸಿ ಪಾಸಾದವರಿಗೆ ಸೂಕ್ತ ತರಬೇತಿ ನೀಡಿ ಆಸ್ಪತ್ರೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಿವಕುಮಾರ್ ಹೇಳಿದರು.

ನಾನು ಇಂಧನ ಇಲಾಖೆ ಪಡೆಯಬೇಕೆಂಬ ಪ್ರಸ್ತಾಪ ಇಟ್ಟಿದ್ದೆ. ಆದರೆ, ನನಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಲಾಯಿತು. ಈ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿ ಮಾಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಹೇಳಿದರು.  ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ರಾಜ್ಯ ಶಾಖೆ ಅಧ್ಯಕ್ಷ ರವೀಂದ್ರ ಮಾತನಾಡಿ, ವೈದ್ಯರ ಮೇಲೆ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಭಯದ ವಾತಾವರಣದಲ್ಲಿ ವೈದ್ಯರು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ವೈದ್ಯಕೀಯ ಕಾರಣಗಳಿಗೆ ರೋಗಿ ಸಾವನ್ನಪ್ಪಿದರೂ ಹಲವೆಡೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿವೆ. ಇವುಗಳನ್ನು ಸರ್ಕಾರ ನಿಯಂತ್ರಿಸಬೇಕು, ವೈದ್ಯರಿಗೆ ರಕ್ಷಣೆ ನೀಡಬೇಕು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕಾಯ್ದೆಯಲ್ಲಿನ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಅವರು ಹೇಳಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا