Urdu   /   English   /   Nawayathi

ಮೊದಲು ನಾವೆಲ್ಲರೂ ಒಳ್ಳೆಯವರಾಗಿ ಬದುಕೋಣ: ಸಿ.ಎನ್.ಆರ್. ರಾವ್

share with us

ಬೆಂಗಳೂರು: 23 ಜೂನ್ (ಫಿಕ್ರೋಖಬರ್ ಸುದ್ದಿ) ಕಕ್ಕಿರಿದು ತುಂಬಿದ್ದ ರವೀಂದ್ರ ಕಲಾಕ್ಷೇತ್ರದಲ್ಲಿದ್ದ ಸಭಿಕರಲ್ಲಿ ‘ನನಗೂ ಪ್ರಶ್ನೆ ಕೇಳಲು ಅವಕಾಶ ಸಿಗಬೇಕಿತ್ತು' ಎನ್ನುವ ಭಾವ. ಎಲ್ಲರ ಮಾತಿಗೆ ಕಿವಿಯಾಗುವಷ್ಟು ತಾಳ್ಮೆ ಅಲ್ಲಿದ್ದ ಹಿರಿಯಜ್ಜನಿಗೆ ಇತ್ತು. ಆದರೆ ಸಮಯ ಯಾರ ಹಂಗಿಗೂ ಸಿಗದೆ ಓಡುತ್ತಿತ್ತು. ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡ ಕೆಲವರು ಪ್ರಶ್ನೆಗಳನ್ನು ಅರ್ಪಿಸಿದರು. ಉತ್ತರ ರೂಪದಲ್ಲಿ ಸಿಕ್ಕ ಮಾತುಗಳನ್ನು, ಅದರಲ್ಲಿ ಅಡಗಿದ್ದ ಚಿಂತನೆಗಳನ್ನು ಜೋಪಾನವಾಗಿ ಎತ್ತಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮನದಂಗಳ ತೆರೆದಿಟ್ಟೆ ಹಿರಿಯ ಸಂಶೋಧಕ, ವಿಜ್ಞಾನಿ ಸಿ.ಎನ್.ಆರ್‌. ರಾವ್ ಅವರು ಸಂವಾದದಲ್ಲಿ ತೆರೆದುಕೊಂಡ ಬಗೆ ಇದು.

ನನ್ನ ಕೆಲಸ ನನ್ನದು

ನನ್ನನ್ನು ದಯವಿಟ್ಟು ಬುದ್ಧಿವಂತ ಅಂದ್ಕೊಬೇಡಿ. ನನ್ನ ಕೆಲಸಗಳನ್ನು ನಾನು ಶ್ರದ್ಧೆಯಿಂದ ಮಾಡ್ತೀನಿ ಅಷ್ಟೇ. ಡಾಕ್ಟರೇಟ್ ಸಿಗಲಿ ಅಂತ್ಲೋ, ಪ್ರಶಸ್ತಿ–ಗೌರವ ಸಿಗಲಿ ಅಂತ್ಲೋ ನಾನು ಸಂಶೋಧನೆ ನಡೆಸಲ್ಲ. ಅವು ತಾನಾಗಿಯೇ ಬರುತ್ವೆ. ಇಂಥದ್ದು ಕೊಡಿ ಅಂತ ನಾನು ಯಾರನ್ನೂ ಕೇಳಲ್ಲ.

ಹಳ್ಳಿ ಹುಡುಗರಲ್ಲಿ ಫ್ಯಾರೆಡೆ, ನ್ಯೂಟನ್‌ ಇದ್ದಾರೆ

ನನಗೆ ಯುವಜನರ ಜೊತೆಗೆ ಮಾತನಾಡೋದು ತುಂಬಾ ಇಷ್ಟ. ಜೀವನದಲ್ಲಿ ಸರಳತೆಗೆ ಒತ್ತುಕೊಟ್ಟ ಮೈಕೆಲ್ ಫ್ಯಾರೆಡೆ, ಮಹಾತ್ಮಗಾಂಧಿ ನನಗೆ ಪ್ರೇರಣೆ. ಹಳ್ಳಿಯ ಮಕ್ಕಳಿಗೂ ಅರ್ಥವಾಗುವಂತೆ ಈಗ ವಿಜ್ಞಾನ ಪುಸ್ತಕ ರೂಪಿಸ್ತಾ ಇದ್ದೀವಿ. ಹೆಂಡತಿ ಜೊತೆ ಸೇರಿ ಹಳ್ಳಿಗಳನ್ನು ತಿರುಗ್ತಾ ಇದೀನಿ. ಹುಬ್ಬಳ್ಳಿಯ ಲಕ್ಷ್ಮೇಶ್ವರ, ಉತ್ತರಾಖಂಡ ಮತ್ತು ಕೇರಳ ರಾಜ್ಯಗಳಲ್ಲಿ ನಮ್ಮ ಕೆಲಸಗಳು ನಡೆಯುತ್ತಿವೆ. ಮಕ್ಕಳ ಆಸಕ್ತಿ ಮತ್ತು ಉತ್ಸಾಹ ನಮಗೆ ಸ್ಫೂರ್ತಿ. ಎರಡು ತಿಂಗಳ ಕೆಳಗೆ ಲಕ್ಷ್ಮೇಶ್ವರದಲ್ಲಿ ದೊಡ್ಡ ವಿಜ್ಞಾನ ಕ್ಷೇತ್ರ ಆರಂಭಿಸಿದ್ದೇವೆ. ಇನ್ನೂ ಬಹಳ ಮಾಡ್ತೀವಿ. ನಮ್ಮ ದೇಶದಲ್ಲಿ ಕೋಟ್ಯಂತರ ಮಕ್ಕಳು ಇದ್ದಾರೆ. ಹಳ್ಳಿಗಳಲ್ಲಿ ಬುದ್ಧಿವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿರುವ ನ್ಯೂಟನ್, ಐನ್‌ಸ್ಟೈನ್, ಫ್ಯಾರಡೆಯನ್ನು ಹುಡುಕಬೇಕಿದೆ. ಎಂಜಿನಿಯರಿಂಗ್ ಮಾಡಿ ಕೆಲಸವಿಲ್ಲದ ಸಾವಿರಾರು ಹುಡುಗರು ಬೆಂಗಳೂರಿನಲ್ಲಿ ಇದ್ದಾರೆ. ಮಕ್ಕಳಿಗೆ ಯಾವುದರಲ್ಲಿ ಇಷ್ಟ ಇದೆಯೋ ಅದನ್ನು ಓದಲು ದೊಡ್ಡವರು ಅವಕಾಶ ಮಾಡಿಕೊಡಬೇಕು. 

ರಾಜ್ಯದಲ್ಲಿ ಪ್ರೋತ್ಸಾಹ ಸಾಕಷ್ಟಿದೆ

ನಾನು ನಾಲ್ಕೈದು ಪ್ರಧಾನಿಗಳ ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನ್ನ ಸಲಹೆಗಳನ್ನು ಯಾರೂ ತೆಗೆದುಹಾಕಿಲ್ಲ. ಮನಮೋಹನ್ ಸಿಂಗ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಾನು ಸುಮ್ಮಸುಮ್ಮನೆ ಸರ್ಕಾರವನ್ನು ಬೈಯಲಾರೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ವಿಜ್ಞಾನಕ್ಕೆ ಹೆಚ್ಚು ಪ್ರೋತ್ಸಾಹ ಕೊಡ್ತಿದೆ. ನಮ್ಮ ಎಲ್ಲ ಮುಖ್ಯಮಂತ್ರಿಗಳೂ ವಿಜ್ಞಾನ ಕ್ಷೇತ್ರದ ಒಳಿತಿಗೆ ದುಡ್ಡು ಕೊಟ್ಟಿದ್ದಾರೆ. ಜಾಸ್ತಿ ಬೇಕಿದ್ರೆ ಕೇಳಿ, ಕೊಡೋಣ ಎಂದಿದ್ದಾರೆ. ಇಲ್ಲಿ ಒಂದು ವಿಷನ್ ಗ್ರೂಪ್ ಆಗಿದೆ. ಆದರೆ ದೊಡ್ಡ ಮಟ್ಟದ ಸಂಶೋಧನೆಗೆ ಕೇಂದ್ರ ಸರ್ಕಾರದ ನೆರವು ಬೇಕೇಬೇಕು. ಅದು ಇನ್ನೂ ಜಾಸ್ತಿ ಆಗಬೇಕಿದೆ. ವಿಜ್ಞಾನ ಓದಲು ಆಸಕ್ತಿ ಇರುವ ಹುಡುಗರಿಗೆ ಸಾಕಷ್ಟು ಅವಕಾಶಗಳಿವೆ.

ಶಿಕ್ಷಕರು ಬದಲಾಗಬೇಕು

ವಿಜ್ಞಾನ ಅಂದ್ರೇನೇ ಹೊಸತನ, ಬದಲಾವಣೆ. ಏನು ಬದಲಾಗಿದೆ ಎನ್ನುವುದನ್ನು ಮೊದಲು ಶಿಕ್ಷಕರು ಅರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಹೊಸತನವನ್ನು ಒಪ್ಪಿಕೊಳ್ಳಲು ಮತ್ತು ಹೊಸತನ್ನು ಅರಿಯಲು ಶಿಕ್ಷಕರು ಸದಾ ತುದಿಗಾಲಲ್ಲಿ ಇರಬೇಕು. ನಮ್ಮ ದೇಶದ ವಿದ್ಯಾರ್ಥಿಗಳು ಚೆನ್ನಾಗಿದ್ದಾರೆ. ಆದರೆ ಮೇಷ್ಟ್ರುಗಳು ಇನ್ನಷ್ಟು ಪರಿಶ್ರಮ ಹಾಕಬೇಕಿದೆ.

ಪರಿಸರ ಹಾಳಾಗಿದೆ

ವಾತಾವರಣ ಬದಲಾವಣೆ ನಮ್ಮ ದೇಶದ ದೊಡ್ಡ ಸಮಸ್ಯೆ. ಇದನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟವಾಗ್ತಿದೆ. ಬೆಂಗಳೂರಿನಲ್ಲಿರೋರು ಒಳ್ಳೇ ಗಾಳಿಗೆ ಪರದಾಡಬೇಕು. ನಾನು ಸಣ್ಣ ಹುಡುಗ ಇದ್ದಾಗ ಇಲ್ಲಿ ಎಷ್ಟು ಚೆನ್ನಾಗಿತ್ತು. ಎಲ್ಲಿ ನೋಡಿದ್ರೂ ಮರಗಳು. ಬೆಂಗಳೂರಿನ ಪರಿಸರ ಹಾಳಾಗಲು ಕಾರುಗಳೇ ಮುಖ್ಯಕಾರಣ. ಕಾರುಗಳಿಂದ ಬರುವಷ್ಟು ಕೆಟ್ಟ ಅನಿಲಗಳು ಬೇರೆ ಎಲ್ಲಿಂದಲೂ ಬರುವುದಿಲ್ಲ. ನಾನು ಜಲಜನಕದಿಂದ ಕಾರು ನಡೆಸುವ ಸಂಶೋಧನೆ ಮಾಡ್ತಾ ಇದ್ದೀನಿ. ಜಲಜನಕದ ಕಾರಷ್ಟೇ ಅಲ್ಲ ಟ್ರೇನ್‌ಗಳೂ ಆಗಬೇಕು. ಅದು ಸಾಧ್ಯವಾದರೆ ವಾತಾವರಣ ಸುಧಾರಿಸುತ್ತೆ.

ಒಳ್ಳೆಯವರಾಗಿ ಬದುಕಿ

ಹಸಿದುಕೊಂಡು ದೇವರ ಪೂಜೆ ಮಾಡಲು ಆಗುವುದಿಲ್ಲ. ನಮ್ಮ ಅಚಾರ್ಯರೆಲ್ಲಾ ಹೇಳಿದ್ದಾರೆ ಮೊದಲು ಜಗತ್ತಿನಲ್ಲಿ ಬೀಯಿಂಗ್ ಗುಡ್ ಆಗೋದು ಮುಖ್ಯ ಅಂತ.

ಮದುವೆ ದಿನ ಜನಿವಾರ ಹಾಕಿದರು

ನಾನು ಮೂಢನಂಬಿಕೆಗಳನ್ನು ಒಪ್ಪಲ್ಲ. ಆದರೆ ದೇವರ ಮೇಲಿನ ಭಕ್ತಿ, ಹಿರಿಯರಿಗೆ ಕೊಡುವ ಗೌರವವನ್ನು ಒಪ್ತೀನಿ. ಆದರೆ ಹೋಮ ಮಾಡಿದ್ರೆ ಮಳೆಯಾಗುತ್ತೆ ಅನ್ನೋದನ್ನು ನಾನು ನಂಬಲ್ಲ. ನನ್ನಪ್ಪ ಒಬ್ಬ ಭಂಡ. ನನ್ನ ಜಾತಕವನ್ನೇ ಅವರು ಬರೆಸಲಿಲ್ಲ. ನನ್ನ ಮದುವೆಯಾಗುವ ಹುಡುಗಿಗೆ ‘ಇವನ ಜಾತಕ ಬರೆಸಿಲ್ಲ. ಬರೆಸಲ್ಲ. ನೀನು ಜಾತಕ ನೋಡದೆ ಮದುವೆಯಾಗ್ತೀಯಾ?’ ಅಂತ ಕೇಳಿದ್ದರು. ನನಗೆ ಉಪನಯನವೇ ಆಗಿರಲಿಲ್ಲ. ಮದುವೆಯ ದಿನ ಭಟ್ಟರು ಜನಿವಾರ ಹಾಕಿಸಿ, ತಾಳಿ ಕಟ್ಟಿಸಿದರು. ಜ್ಯೋತಿಷ್ಯ ಶಾಸ್ತ್ರ ಅಂದ್ರೆ ಏನು ಅಂತ ನನಗೆ ಗೊತ್ತಿಲ್ಲ. ಈವರೆಗೆ ಅದನ್ನು ನಾನು ಉಪಯೋಗಿಸಿಲ್ಲ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا