Urdu   /   English   /   Nawayathi

ವಾಹನಗಳಿಗೆ ಕಲ್ಲು ತೂರಿ ದಾಂಧಲೆ ನಡೆಸಿದ್ದ ಕುಖ್ಯಾತ ದರೋಡೆಕೋರರಿಗೆ ಗುಂಡೇಟು

share with us

ಬೆಂಗಳೂರು: 20 ಜೂನ್ (ಫಿಕ್ರೋಖಬರ್ ಸುದ್ದಿ) ವಾಹನಗಳ ಗ್ಲಾಸ್‍ಗಳನ್ನು ಜಖಂಗೊಳಿಸಿ ಪರಾರಿಯಾಗಿದ್ದ ಇಬ್ಬರು ಕುಖ್ಯಾತ ಅಂತಾರಾಜ್ಯ ದರೋಡೆಕೋರರನ್ನು ಉತ್ತರ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಮಲಾನಗರದ ನಿವಾಸಿ ರಫೀಕ್(28) ಮತ್ತು ಪ್ರಕಾಶ್‍ನಗರದ ನಿವಾಸಿ ಸುಧಾಕರ್(30) ಗುಂಡೇಟಿನಿಂದ ಗಾಯಗೊಂಡಿರುವ ದರೋಡೆಕೋರರು.

ಆರೋಪಿ ರಫೀಕ್ ವಿರುದ್ಧ ಬಸವೇಶ್ವರನಗರ ಠಾಣಾ ಸರಹದ್ದಿನಲ್ಲಿ ನಡೆದಿದ್ದ ಮೂರು ಕೊಲೆ ಪ್ರಕರಣ, ಎರಡು ದರೋಡೆ ಯತ್ನ, ಒಂದು ಹಲ್ಲೆ ಪ್ರಕರಣ, ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಒಂದು ದರೋಡೆ ಯತ್ನ, ತಾವರೆಕೆರೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ, ತಮಿಳುನಾಡು ರಾಜ್ಯದಲ್ಲಿ ಹಣಕ್ಕಾಗಿ ಒಬ್ಬ ಅಪಹರಣ, ರಾಜಾಜಿನಗರ ವ್ಯಾಪ್ತಿಯಲ್ಲಿ ಸುಲಿಗೆ ಪ್ರಕರಣ, ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ವಾಹನಗಳಿಗೆ ಹಾನಿ ಉಂಟು ಮಾಡಿರುವ ಎಂಟು ಪ್ರಕರಣಗಳು ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ.

ಮತ್ತೊಬ್ಬ ಆರೋಪಿ ಸುಧಾಕರ್‍ನ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಸಂಬಂಧಿಸಿದ ಕೊಲೆಯತ್ನ , ಸಾರ್ವಜನಿಕರ ವಾಹನಗಳಿಗೆ ಹಾನಿಯುಂಟು ಮಾಡಿರುವ 8 ಪ್ರಕರಣಗಳು, ಪೀಣ್ಯ-1 ದರೋಡೆ, ಜಯನಗರ-ಸುಲಿಗೆ, ಚಂದ್ರಲೇಔಟ್-ಕಳ್ಳತನ, ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಕಳ್ಳತನ, ಶ್ರೀರಾಮಪುರ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ, ರಾಜಾಜಿನಗರ ವ್ಯಾಪ್ತಿಯ ಸುಲಿಗೆ ಪ್ರಕರಣ, ತಮಿಳುನಾಡಿನಲ್ಲಿ ಒಂದು ಅಪಹರಣ ಪ್ರಕರಣ ಹಾಗೂ ಹಣಕ್ಕಾಗಿ ಅಪಹರಣ ಪ್ರಕರಣ ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ.

ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಜೆಸಿನಗರ ಏರಿಯಾದ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ 16 ವಾಹನಗಳ ಗ್ಲಾಸ್‍ಗಳನ್ನು ಜೂ.17ರಂದು ರಾತ್ರಿ ಕಿಡಿಗೇಡಿಗಳು ಲಾಂಗ್‍ಗಳಿಂದ ಒಡೆದು ಜಖಂಗೊಳಿಸಿ ಸಾರ್ವಜನಿಕರು ಭಯಭೀತರಾಗುವ ವಾತಾವರಣ ಸೃಷ್ಟಿ ಮಾಡಿದ್ದರು. ಈ ಬಗ್ಗೆ ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಉತ್ತರ ವಿಭಾಗದ ಡಿಸಿಪಿ ಅವರು ಮಹಾಲಕ್ಷ್ಮಿಲೇಔಟ್, ಸುಬ್ರಹ್ಮಣ್ಯನಗರ, ಜಾಲಹಳ್ಳಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದರು.

ಈ ತಂಡ ನಿನ್ನೆ ತಡರಾತ್ರಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಮಾರುತಿ ಜೆನ್ ಕಾರಿನಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಹೋಗುತ್ತಿದ್ದುದನ್ನು ಗಮನಿಸಿ ತಕ್ಷಣ ಬೆನ್ನಟ್ಟಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಇನ್‍ಸ್ಪೆಕ್ಟರ್ ಲೋಹಿತ್, ಸುಬ್ರಹ್ಮಣ್ಯನಗರ ಠಾಣೆ ಇನ್‍ಸ್ಪೆಕ್ಟರ್ ಮಹೇಂದ್ರ ಕುಮಾರ್, ಜಾಲಹಳ್ಳಿ ಠಾಣೆ ಇನ್‍ಸ್ಪೆಕ್ಟರ್ ನಿರಂಜನ್‍ಕುಮಾರ್ ಹಾಗೂ ಸಿಬ್ಬಂದಿಗಳು ಬೆನ್ನಟ್ಟಿ ರಾಜಗೋಪಾಲನಗರ ಠಾಣಾ ಸರಹದ್ದಿನ ಕರೀಂಸಾಬ್ ಲೇಔಟ್ ಬಳಿ ಇನ್‍ಸ್ಪೆಕ್ಟರ್ ಲೋಹಿತ್ ಅವರು ಆರೋಪಿಗಳು ಹೋಗುತ್ತಿದ್ದ ಜೆನ್ ಕಾರಿನ ಟೈರ್‍ಗೆ ಗುಂಡು ಹಾರಿಸಿ ಕಾರನ್ನು ನಿಲ್ಲಿಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲು ಮುಂದಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಡ್ರಾಗರ್ ಹಾಗೂ ಬಟನ್ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಇನ್‍ಸ್ಪೆಕ್ಟರ್ ಲೋಹಿತ್ ಹಾಗೂ ಮಹೇಂದ್ರ ಕುಮಾರ್ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡುಗಳು ಆರೋಪಿಗಳ ಕಾಲಿಗೆ ತಗುಲಿ ಕುಸಿದುಬಿದ್ದರು. ನಂತರ ಸುತ್ತುವರಿದ ಉತ್ತರ ವಿಭಾಗದ ಪೊಲೀಸರು ಅವರುಗಳನ್ನು ವಶಕ್ಕೆ ತೆಗೆದುಕೊಂಡರು.

ಇವರಿಬ್ಬರು ಜೂ.17ರಂದು ಮಹಾಲಕ್ಷ್ಮಿ ಲೇಔಟ್ ಠಾಣೆ ಸರಹದ್ದಿನಲ್ಲಿ ಸುಮಾರು 14 ವಾಹನಗಳ ಗ್ಲಾಸ್‍ಗಳನ್ನು ಲಾಂಗ್‍ನಿಂದ ಒಡೆದು ಹಾನಿ ಮಾಡಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದ್ದರು. ಅಲ್ಲದೆ ಅದೇ ದಿನ ರಾತ್ರಿ ಈ ಇಬ್ಬರು ಆರೋಪಿಗಳು ಹಾಗೂ ಸಹಚರರೊಂದಿಗೆ ಸೇರಿ ರಾಜಾಜಿನಗರ ವ್ಯಾಪ್ತಿಯಲ್ಲಿ ಕೆಟಿಎಂ ಡ್ಯೂಕ್ ಬೈಕ್‍ನ್ನು ದರೋಡೆ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿ ಸುಧಾಕರ 2016ನೇ ಸಾಲಿನಲ್ಲಿ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು , ಇದುವರೆಗೂ ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನು.

ಈತನ ವಿರುದ್ಧ ಹಲವಾರು ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿ ವಾರೆಂಟ್ ಇದೆ. ಈ ಆರೋಪಿಗಳು ಕೃತ್ಯ ನಡೆಸಿದ ನಂತರ ಮತ್ತೊಂದು ರಾಜ್ಯಕ್ಕೆ ಹೋಗಿ ಅಲ್ಲಿ ನೆಲೆಸಿ ಅಪರಾಧಗಳನ್ನು ಮಾಡುವ ಚಾಳಿವುಳ್ಳವಾಗಿದ್ದು ಅಂತಾರಾಜ್ಯ ದರೋಡೆಕೋರರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا