Urdu   /   English   /   Nawayathi

ಬಜೆಟ್‌ ಮಂಡನೆ ಕುರಿತು ಮನವರಿಕೆ

share with us

ಮಂಗಳೂರು: 20 ಜೂನ್ (ಫಿಕ್ರೋಖಬರ್ ಸುದ್ದಿ) ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಮಾತುಕತೆ ನಡೆಸಿದರು.

ಚಾರ್ಮಾಡಿ ಘಾಟಿಯ ರಸ್ತೆ ಸ್ಥಿತಿ ವೀಕ್ಷಿಸಿದ ನಂತರ ನೇರವಾಗಿ ಉಜಿರೆಗೆ ಬಂದ ರೇವಣ್ಣ ಅವರು, ಸಿದ್ದರಾಮಯ್ಯ ಅವರ ಕೋಣೆಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹೊಸ ಸರ್ಕಾರದ ಬಜೆಟ್‌ ಮಂಡನೆಯ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಪಕ್ಷದ ಸಮನ್ವಯ ಸಮಿತಿಯಲ್ಲಿ ಚರ್ಚಿಸಿಯೇ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಮೈತ್ರಿ ಸರ್ಕಾರಕ್ಕೆ ತಮ್ಮ ಮಾರ್ಗದರ್ಶನ ಅಗತ್ಯವಾಗಿದೆ. ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿರುವ ವಿಷಯಗಳನ್ನು ಜೋಡಿಸಿಕೊಂಡೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ಅವರಿಗೆ ರೇವಣ್ಣ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಸಚಿವ ಸಂಪುಟ ವಿಸ್ತರಣೆ, ಸಮನ್ವಯ ಸಮಿತಿ ಸಭೆ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಮತ್ತೆ ಬಜೆಟ್‌ ಮಂಡನೆ ಬೇಡ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ನಂತರ ಮೊದಲ ಬಾರಿಗೆ ಎಚ್‌.ಡಿ. ರೇವಣ್ಣ ಅವರು ನಡೆಸಿರುವ ಈ ಮಾತುಕತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ನಂತರ ಮಾಧ್ಯಮದವರ ಜತೆ ಮಾತನಾಡಿದ ರೇವಣ್ಣ, ಇದೊಂದು ಸೌಹಾರ್ದ ಭೇಟಿ. ಈ ಭಾಗಕ್ಕೆ ಬಂದಿರುವುದರಿಂದ ಅವರನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದ್ದೇನೆ. ರಾಜಕೀಯ ವಿಷಯ ಮಾತನಾಡಿಲ್ಲ. ಬಜೆಟ್‌ ಕುರಿತು ಯಾವುದೇ ಗೊಂದಲವಿಲ್ಲ. ಚೆನ್ನಾಗಿ ಸರ್ಕಾರ ನಡೆಸಿಕೊಂಡು ಹೋಗುವಂತೆ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

ಚಾರ್ಮಾಡಿ–ಶಾಶ್ವತ ದುರಸ್ತಿ ಅಗತ್ಯ: ಇದಕ್ಕೂ ಮೊದಲು ಚಾರ್ಮಾಡಿ ಘಾಟಿಗೆ ಭೇಟಿ ನೀಡಿದ ಸಚಿವ ರೇವಣ್ಣ, ಭೂಕುಸಿತದಿಂದ ಆಗಿರುವ ಹಾನಿಯನ್ನು ವೀಕ್ಷಿಸಿದರು.

ನಂತರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಭೂಕುಸಿತ ಉಂಟಾಗುತ್ತಿದೆ. ಇದಕ್ಕೆ ₹250 ಕೋಟಿ ವೆಚ್ಚದಲ್ಲಿ ಶಾಶ್ವತ ಪರಿಹಾರ ಅಗತ್ಯವಾಗಿದೆ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಶಿರಾಡಿ ಘಾಟಿ ರಸ್ತೆ ಕಾಮಗಾರಿ ಈ ತಿಂಗಳ ಮಧ್ಯದಲ್ಲಿ ಪೂರ್ಣವಾಗಬೇಕಿತ್ತು. ಆದರೆ, ಮಳೆಯಿಂದಾಗಿ ವಿಳಂಬವಾಗಿದೆ. ಜುಲೈ ಮೊದಲ ವಾರದಲ್ಲಿ ಶಿರಾಡಿ ಘಾಟಿ ರಸ್ತೆ ಸಂಚಾರ ಆರಂಭವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಸ್ಪಷ್ಟಪಡಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا