Urdu   /   English   /   Nawayathi

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲ ಆಳ್ವಿಕೆ ಜಾರಿ

share with us

ನವದೆಹಲಿ/ಶ್ರೀನಗರ: 20 ಜೂನ್ (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಬಿಜೆಪಿ ಖತಂಗೊಳಿಸಿದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕಳೆದ 10 ವರ್ಷಗಳಲ್ಲಿ ನಾಲ್ಕನೇ ಬಾರಿ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಂತಾಗಿದೆ. ಸರ್ಕಾರ ರಚಿಸಲು ಪಿಡಿಪಿಗೆ ಈ ಹಿಂದೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದ ನಂತರ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸರ್ಕಾರ ರಚನೆಗೆ ಯಾವ ಪಕ್ಷಗಳೂ ಮುಂದೆ ಬರದ ಹಿನ್ನೆಲೆಯಲ್ಲಿ ರಾಜ್ಯಪಾಲ ಎನ್.ಎನ್.ವೋರಾ ಜಮ್ಮು ಮತ್ತು ಕಾಶ್ಮೀರದಲ್ಲಿ ಗೌರ್ನರ್ ಆಳ್ವಿಕೆಗೆ ಶಿಫಾರಸು ಮಾಡಿ ರಾಷ್ಟ್ರಪತಿ ಅವರಿಗೆ ಪತ್ರ ರವಾನಿಸಿದ್ದರು. ಈ ಪತ್ರಕ್ಕೆ ಕೋವಿಂದ್ ಅಂಕಿತ ಹಾಕಿದ್ದು, ಕಣಿವೆ ರಾಜ್ಯದಲ್ಲಿ ಇಂದಿನಿಂದ ಅಧಿಕೃತವಾಗಿ ರಾಜ್ಯಪಾಲರ ಅಡಳಿತ ಜಾರಿಗೆ ಬಂದಿದೆ.

ಅಪವಿತ್ರ ಮೈತ್ರಿ ಎಂದೇ ವಿರೋಧ ಪಕ್ಷಗಳಿಂದ ಟೀಕಿಸಲ್ಪಡುತ್ತಿದ್ದ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿದ್ದ ವ್ಯಾಪಕ ಹಿಂಸಾಚಾರ ಮತ್ತು ಭಯೋತ್ಪಾದನೆ ಚಟುವಟಿಕೆಗಳಿಂದ ಅರೋಪಗಳಿಗೆ ಗುರಿಯಾಗಿದ್ದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ನಿನ್ನೆ ಪತನಗೊಂಡಿದ್ದು, ನಿನ್ನೆ ಸಂಜೆಯಿಂದ ನಡೆದ ನಿರಂತರ ಬೆಳವಣಿಗೆ ಬಳಿಕ ರಾಜ್ಯಪಾಲರ ಆಡಳಿತ ಹೇರಲಾಗಿದೆ.

ಈ ಮಧ್ಯ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ಇಂದು ಬೆಳಗ್ಗೆ ಉನ್ನತ ಮಟ್ಟದ ಸಭೈ ನಡೆಸಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು. ಗೃಹ ಸಚಿವಾಲಯ ಕಾರ್ಯದರ್ಶಿ ರಾಜೀವ್ ಗೌಬಾ ಹಾಗೂ ಗುಪ್ತಚರ ಇಲಾಖೆಯ ಉನ್ನತಾಧಿಕಾರಿಗಳು ಸಭೈಯಲ್ಲಿ ಭಾಗವಹಿಸಿದರು. ರಾಜ್ಯದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಯೋಧರು ಮತ್ತು ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ನಿನ್ನೆ ಹಠಾತ್ತನೇ ಬೆಂಬಲ ವಾಪಸ್ ಪಡೆದಿತ್ತು. ಇದರೊಂದಿಗೆ ನಾಲ್ಕು ವರ್ಷಗಳ ದೋಸ್ತಿ ಸರ್ಕಾರದ ಆಡಳಿತ ಕೊನೆಗೊಂಡಿತು. ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದ ಬಳಿಕ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಸ್ಥಾನಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ರಾಷ್ಟ್ರಪತಿ ಅವರಿಗೆ ರವಾನಿಸಿದ್ದರು. ನಂತರ ಅವರ ರಾಜೀನಾಮೆಪತ್ರವನ್ನು ಅಂಗೀಕರಿಸಲಾಗಿತ್ತು.ಅಲ್ಲದೇ ಕಾಂಗ್ರೆಸ್, ನ್ಯಾಷನಲ್ ಕಾನ್ಫೆರೆನ್ಸ್ ಸೇರಿದಂತೆ ಯಾವುದೇ ಪಕ್ಷಗಳು ಸರ್ಕಾರ ರಚನೆಗೆ ಪಿಡಿಪಿ ಜೊತೆ ಹೊಂದಾಣಿಕೆಗೆ ಮುಂದಾಗದ ಕಾರಣ ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದಿದೆ.

ಮೈತ್ರಿ ಖತಂಗೆ ಕಾರಣವೇನು ?:

ತದ್ವಿರುದ್ಧ ಚಿಂತನೆ ಹೊಂದಿರುವ ಪಿಡಿಪಿ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದೇ ಹಲವು ರಾಜಕೀಯ ಪಕ್ಷಗಳಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಪಾಕಿಸ್ತಾನ ಬೆಂಬಲಿತ ಕಾಶ್ಮೀರಿ ಉಗ್ರರ ನಿಗ್ರಹ, ಪ್ರತ್ಯೇಕತಾವಾದಿಗಳ ಜೊತೆ ಮಾತುಕತೆ ವಿಚಾರದಲ್ಲಿ ಈ ಎರಡೂ ಪಕ್ಷಗಳ ನಡುವೆ ಮೊದಲಿನಿಂದಲೂ ಭಿನ್ನಾಭಿಪ್ರಾಯದ ಹೊಗೆಯಾಡುತ್ತಿತ್ತು.

ಸೇನಾ ಅಧಿಕಾರಿಗಳು ಮತ್ತು ಕಾಶ್ಮೀರಿ ಪೊಲೀಸರ ಭಿನ್ನಾಭಿಪ್ರಾಯ ವಿಷಯದಲ್ಲೂ ಉಭಯ ಪಕ್ಷಗಳ ನಡುವೆ ವೈಮನಸ್ಯ ತಲೆದೋರಿತ್ತು. ಇತ್ತೀಚೆಗೆ ಕತುವಾ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣದಲ್ಲಿ ಬಿಜೆಪಿ-ಪಿಡಿಪಿ ಸಂಬಂಧ ಮತ್ತಷ್ಟು ಹಳಸಿತ್ತು. ಅಲ್ಲದೇ ರಂಜಾನ್ ಕದನ ವಿರಾಮ ಉಲ್ಲಂಘನೆ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ, ಯೋಧರ ಹತ್ಯಾಕಾಂಡಗಳ ಪ್ರಕರಣಗಳಿಂದಾಗಿ ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಖತಂಗೊಂಡಿದ್ದು, ಗೌರ್ನರ್ ರೂಲ್ ಜಾರಿಗೆ ಬಂದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا