Urdu   /   English

ಜನಸ್ನೇಹಿ ಆಡಳಿತ : ಕುಟುಂಬದಂತೆ ಕೆಲಸ ಮಾಡೋಣ-ಅಧಿಕಾರಿಗಳಿಗೆ ಸಿ.ಎಂ. ಸೂಚನೆ

share with us

ಬೆಂಗಳೂರು: 14 ಜೂನ್ (ಫಿಕ್ರೋಖಬರ್ ಸುದ್ದಿ) ” ನಾವು ಹೇಳಿದ ಹಾಗೇ ಕೇಳಬೇಕು ಎನ್ನುವ ಭಾವನೆ ಬೇಡ. ನಿಮ್ಮ ಮೇಲೆ ಸವಾರಿ ಮಾಡುವುದೂ ಇಲ್ಲ. ಜನ ಸಾಮಾನ್ಯರಿಗೆ ಜನಸ್ನೇಹಿ ಆಡಳಿತ ನೀಡುವುದು ಸರ್ಕಾರದ ಆಶಯ. ಕಾರ್ಯಕ್ರಮಗಳನ್ನು ಪರಿಣಾಮವಾಗಿ ಜಾರಿಗೆ ತರಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕುಟುಂಬವಾಗಿ ಕೆಲಸ ಮಾಡೋಣ.” ಹೀಗಂತ ಮುಖ್ಯಮಂತ್ರಿ ಹಚ್.ಡಿ. ಕುಮಾರಸ್ವಾಮಿ ಅವರು ಹಿರಿಯ ಅಧಿಕಾರಿಗಳಿಗೆ ಇಂದಿಲ್ಲಿ ಕಿವಿ ಮಾತು ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ರಾಜ್ಯದ ಹವಾಮಾನ ಪರಿಸ್ಥಿತಿ, ಬೆಳೆ ಪರಿಸ್ಥಿತಿ, ಕುಡಿಯುವ ನೀರು ಸರಬರಾಜು ಹಾಗೂ ಬೆಳೆ ಹಾನಿಯ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಅವರು, ಲೋಪದೋಷ, ಸಮಸ್ಯೆಗಳನ್ನು ಮೆಲುಕು ಹಾಕದೆ, ಮುಂದಿನ ಹಾದಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪೆನಿಗಳು ಕೆಲಸ ಮಾಡುವ ರೀತಿ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡೋಣ. ಎಲ್ಲರ ಸಹಕಾರ ಮುಖ್ಯ ಎಂದರು.

ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು ಹಾಗೂ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುವುದು ಅಧಿಕಾರಿಗಳಾದ ನಿಮ್ಮ ಕೈಯಲ್ಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಒಗ್ಗೂಡಿ ಕೆಲಸ ಮಾಡೋಣ ಎಂದರು.

ಜನರು ಸರ್ಕಾರದಿಂದ ಬಯಸುತ್ತಿರುವುದು ದೊಡ್ಡ ಮಟ್ಟದ ಫಲಾಪೇಕ್ಷೆಗಳೆನಲ್ಲ. ಅವರಿಗೆ ಬೇಕಾಗಿರುವುದು ನೀರು, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ಸಮಸ್ಯೆಗಳನ್ನು ಯಾವುದೇ ಸಮಸ್ಯೆಯಾಗದಂತೆ ತಲುಪಿಸಿದರೆ ಜನರು ಖುಷಿಪಡುತ್ತಾರೆ. ಅಂತಹ ಕೆಲಸವನ್ನು ನಾವು, ನೀವು ಜತೆಗೂಡಿ ಮಾಡೋಣ ಎಂದು ಹೇಳಿದರು.

ಇತ್ತೀಚೆಗೆ ಜನತಾದರ್ಶನದಲ್ಲಿ ಈ ಸಮಸ್ಯೆಗಳ ಬಗ್ಗೆಯೇ ಜನರಿಂದ ಹೆಚ್ಚು ಅಹವಾಲು ಬರುತ್ತಿದೆ. ಹೀಗಾಗಿ ಅವರ ಕಡೆ ಗಮನಹರಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ಕೆಳ ಹಂತದಲ್ಲಿಯೇ ಸಮಸ್ಯೆಯನ್ನು ಪರಿಹರಿಸಿ ಎಂದು ಸೂಚನೆ ನೀಡಿದರು.

ಉತ್ತಮ ಹಾಗೂ ಒಳ್ಳೆಯ ಅಧಿಕಾರಿಗಳ ರಕ್ಷಣೆ ಸರ್ಕಾರದ ಆದ್ಯತೆ. ಎಷ್ಟೇ ಒತ್ತಡಗಳು ಬಂದರೂ ರಕ್ಷಣೆಗೆ ಬದ್ಧ. ಆದರೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಸಲಹೆ ಮಾಡಿದರು.

ಅಧಿಕಾರಿಗಳು ಶಾಮೀಲು

ಆರ್‌ಸಿವಿ ಅಡಿಯಲ್ಲಿ ಪ್ರತಿವರ್ಷ ಖಾಸಗಿ ಶಾಲೆಗಳಿಗೆ 700-800 ಕೋಟಿ ರೂ. ಸರ್ಕಾರ ಹಣ ನೀಡುತ್ತಿದೆ. ಹಾಗಿದ್ದರೂ ಖಾಸಗಿ ಶಾಲೆಗಳು ಸರ್ಕಾರದಿಂದಲೂ ಹಣ ಪಡೆದು, ಪೋಷಕರಿಂದಲೂ ಹಣ ಪಡೆಯುತ್ತಿದ್ದಾರೆ. ಇಂತಹದಕ್ಕೆ ಕಡಿವಾಣ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಡಿಓ ಮತ್ತು ಡಿಡಿಪಿಐಗಳು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೊಂದಿಗೆ ಶಾಮೀಲಾಗಿರುವುದೇ ಇಂತಹ ಸಮಸ್ಯೆಗೆ ಕಾರಣ. ಭವಿಷ್ಯದಲ್ಲಿ ಮರು ಕಳುಹಿಸದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು

ಖಾಸಗಿ ಶಾಲೆಗಳಲ್ಲಿ ಸಿಗುತ್ತಿರುವ ಶಿಕ್ಷಣ, ಮೂಲ ಸೌಕರ್ಯ, ಸರ್ಕಾರಿ ಶಾಲೆಗಳಲ್ಲಿ ಏಕೆ ಸಿಗುತ್ತಿಲ್ಲ ಎನ್ನುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನೀಲಿನಕ್ಷೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ರಾಜ್ಯದ ಜನರಿಗೆ ಒಳ್ಳೆಯ ಆಡಳಿತ ನೀಡಬೇಕು ಎನ್ನುವುದು ಸರ್ಕಾರದ ಉದ್ದೇಶ. ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಆದ್ಯತೆಗಳನ್ನು ಸಾಮಾನ್ಯ ಸಮಿತಿ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು. ಉತ್ತಮ ಅಧಿಕಾರಿಗಳಿದ್ದೀರಿ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬಗೆಹರಿಸಿ ಎಂದರು.

ರೈತರಿಗೆ ಪಹಣಿ, ಖಾತೆ ನೀಡಿಕೆಯಲ್ಲಿ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ. ಪೊಲೀಸ್ ಇಲಾಖೆಯಲ್ಲಿ ಠಾಣೆಗೆ ಹೋದವರಿಗೆ ನ್ಯಾಯ ಸಿಕ್ಕರೆ ಅದೇ ಉತ್ತಮ ಆಡಳಿತ. ಇಂತಹ ಆಡಳಿತ ನೀಡುವ ನಿಟ್ಟಿನಲ್ಲಿ ಗಮನಹರಿಸಿ ಎಂದರು.

ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಈ ಶಾಲೆಗಳ ಸಬಲೀಕರಣಕ್ಕೆ ಏನು ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದರು. ರಾಜ್ಯದಲ್ಲಿ ಬರಗಾಲ, ಮಳೆ ಏನೇ ಆದರೂ ಜಿಲ್ಲಾಧಿಕಾರಿ ಹಾಗೂ  ಸಿಇಓಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ. ಇದಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ಘಟಕ ತೆರೆದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ನಿರುದ್ಯೋಗಿ ಯವಕರಿಗೆ ಕೆಳಹಂತದಲ್ಲೇ ಉದ್ಯೋಗ ನೀಡಲು ಮುಂದಾಗದೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಿರುದ್ಯೋಗ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಲಿದೆ. ಹೀಗಾಗಿಯೇ ಸಮ್ಮಿಶ್ರ ಸರ್ಕಾರ ನಿರುದ್ಯೋಗ ನಿವಾರಣೆಗೆ ಆದ್ಯತೆ ನೀಡಿದೆ ಎಂದರು.

ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ, ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂ, ವಾ ವರದಿ

More

Prayer Timings

Fajr 03:18 فجر
Dhuhr 12:57 الظهر
Asr 16:58 أسر
Maghrib 20:30 مغرب
Isha 22:27 عشا

Prayer Timings

Fajr 03:18 فجر
Dhuhr 12:57 الظهر
Asr 16:58 أسر
Maghrib 20:30 مغرب
Isha 22:27 عشا