Urdu   /   English   /   Nawayathi

ಕ್ಷಿಪಣಿ ಸ್ಥಳಗಳ ನಾಶ ಶೀಘ್ರ: ಟ್ರಂಪ್‌ ವಿಶ್ವಾಸ

share with us

ವಾಷಿಂಗ್ಟನ್‌: 14 ಜೂನ್ (ಫಿಕ್ರೋಖಬರ್ ಸುದ್ದಿ) ‘ಕ್ಷಿಪಣಿ ಸ್ಥಳಗಳನ್ನು ನಾಶಪಡಿಸುವ ಯೋಜನೆಯನ್ನು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

‘ಅಣ್ವಸ್ತ್ರಗಳನ್ನು ನಾಶಪಡಿಸುವ ಭರವಸೆಯನ್ನು ಕಿಮ್‌ ನೀಡಿದ್ದಾರೆ. ಶೀಘ್ರದಲ್ಲೇ ಇದು ಆರಂಭವಾಗಲಿದೆ. ಇತರ ಕ್ಷಿಪಣಿ ಸ್ಥಳಗಳ ನಾಶದ ಬಗ್ಗೆಯೂ ಇನ್ನು ಕೆಲವೇ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ. ಕ್ಷಿಪಣಿ ಎಂಜಿನ್‌ ಪರೀಕ್ಷೆ ಸ್ಥಳಗಳನ್ನು ನಾಶಪಡಿಸುವ ಬಗ್ಗೆಯೂ ಕಿಮ್‌ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕಿಮ್‌ ಅವರ ಜತೆಗಿನ ಐತಿಹಾಸಿಕ ಶೃಂಗಸಭೆಯಿಂದ ಅಣ್ವಸ್ತ್ರ ದುರಂತ ನಡೆಯುವುದು ತಪ್ಪಿದೆ. ಉತ್ತರ ಕೊರಿಯಾ ಜನತೆಗಾಗಿ ದೃಢವಾದ ನಿರ್ಧಾರ ಕೈಗೊಂಡಿರುವ ಕಿಮ್‌ ಅಭಿನಂದನಾರ್ಹರು. ಅಣ್ವಸ್ತ್ರ ಪರೀಕ್ಷೆ ಅಥವಾ ಸಂಶೋಧನೆ, ರಾಕೆಟ್‌ಗಳ ಉಡಾವಣೆ ಇನ್ನು ಮುಂದೆ ಇಲ್ಲ. ಅಮೆರಿಕ ಮತ್ತು ಉತ್ತರ ಕೊರಿಯಾ ನಾಯಕರ ನಡುವೆ ನಡೆದ ಈ ಸಭೆಯಿಂದ ನಿಜವಾದ ಬದಲಾವಣೆ ಸಾಧ್ಯ ಎನ್ನುವುದು ಸಾಬೀತಾಗಿದೆ’ ಎಂದು ಟ್ರಂಪ್‌ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ. ‘ದಕ್ಷಿಣ ಕೊರಿಯಾದಿಂದ ಅಮೆರಿಕ ಪಡೆಗಳನ್ನು ವಾಪಸ್‌ ಕರೆಯಿಸಿಕೊಳ್ಳುವ ಬಗ್ಗೆ ಕಿಮ್‌ ಜತೆ ಚರ್ಚಿಸಿಲ್ಲ’ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

‘ಶ್ವೇತಭವನಕ್ಕೆ ಭೇಟಿ ನೀಡುವಂತೆ ಕಿಮ್‌ ಅವರನ್ನು ಆಹ್ವಾನಿಸಿದ್ದೇನೆ. ಆದರೆ, ಈ ಭೇಟಿಗೂ ಮುನ್ನ ನಿಶ್ಶಸ್ತ್ರೀಕರಣದ ಪ್ರಗತಿಯೂ ಕಾಣಬೇಕು ಎನ್ನುವುದು ನಮ್ಮ ಆಶಯ’ ಎಂದು ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಸಿಂಗಪುರದಲ್ಲಿ ಮಂಗಳವಾರ ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಅಣ್ವಸ್ತ್ರಗಳ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಕಿಮ್‌ ಒಪ್ಪಿಗೆ ಸೂಚಿಸಿದ್ದರು. ಅಮೆರಿಕ ಉತ್ತರ ಕೊರಿಯಾಗೆ ಭದ್ರತೆಯ ಖಾತರಿ ನೀಡಿದೆ.

‘ಶಾಂತಿಗಾಗಿ ಮೊದಲ ಹೆಜ್ಜೆ’

ಸೋಲ್‌(ಎಎಫ್‌ಪಿ): ಕಿಮ್‌ ಜಾಂಗ್‌ ಉನ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಅವರ ನಡುವಣ ಐತಿಹಾಸಿಕ ಶೃಂಗಸಭೆಯ ಬಗ್ಗೆ ದಕ್ಷಿಣ ಕೊರಿಯಾದ
ದಿನಪತ್ರಿಕೆಗಳು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿವೆ. ಬಹುತೇಕ ದಿನಪತ್ರಿಕೆಗಳು ಶಾಂತಿಗಾಗಿ ಮೊದಲ ಹೆಜ್ಜೆ ಎಂದು ಬಣ್ಣಿಸಿದರೆ, ಉಭಯ ದೇಶಗಳ ನಡುವಣ ಒಪ್ಪಂದ ಹಾಸ್ಯಾಸ್ಪದ ಎಂದು ಕೆಲವು ಟೀಕಿಸಿವೆ.

‘ನಿಶ್ಶಸ್ತ್ರೀಕರಣ ಗುರಿ ತಲುಪಲು ನಿಗದಿತ ವೇಳಾಪಟ್ಟಿ ರೂಪಿಸುವಲ್ಲಿ ಸಭೆ ವಿಫಲವಾಗಿದೆ. ಆದರೆ, ಉತ್ತರ ಕೊರಿಯಾದ ಅಣ್ವಸ್ತ್ರಗಳನ್ನು ನಾಶಪಡಿಸಲು ದೃಢವಾದ ಕ್ರಮ ಕೈಗೊಳ್ಳುವ ಕುರಿತು ಇನ್ನು ಮುಂದೆ ನಡೆಯುವ ಸಂಧಾನ ಸಭೆಗಳು ನಿರ್ಧರಿಸಬಹುದು. ಜತೆಗೆ ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವೆ ಶಾಂತಿ ಸ್ಥಾಪಿಸುವ ಪ್ರಕ್ರಿಯೆ ಇದೀಗ ಆರಂಭವಾಗಿದೆ’ ಎಂದು ’ಹಾಂಕೂಕ್‌’ ದಿನಪತ್ರಿಕೆ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

‘ಭಾರತ–ಪಾಕ್‌ ಮಾತುಕತೆ ನಡೆಸಲಿ’

ಲಾಹೋರ್‌(ಪಿಟಿಐ): ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ ಶೃಂಗಸಭೆಯ ರೀತಿಯಲ್ಲೇ ಭಾರತ ಮತ್ತು ಪಾಕಿಸ್ತಾನ ಸಹ ಶಾಂತಿ ಮಾತುಕತೆಯನ್ನು ಮತ್ತೆ ಆರಂಭಿಸಬೇಕು ಎಂದು ಪಿಎಂಎಲ್‌–ಎನ್‌ ಮುಖ್ಯಸ್ಥ ಶಹಬಾಜ್‌ ಷರೀಫ್‌ ತಿಳಿಸಿದ್ದಾರೆ.

‘ಕೊರಿಯಾ ಯುದ್ಧ ಆರಂಭವಾದ ಬಳಿಕ ಉಭಯ ದೇಶಗಳು ಅಣ್ವಸ್ತ್ರಗಳ ಬಳಸುವ ಬಗ್ಗೆ ಬೆದರಿಕೆ ಹಾಕುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ದ್ವೇಷವನ್ನು ಮರೆತು ಮಾತುಕತೆಗೆ ಮುಂದಾಗಿರುವಾಗ ಭಾರತ ಮತ್ತು ಪಾಕಿಸ್ತಾನ ಅದೇ ರೀತಿಯ ಮಾದರಿ ಏಕೆ ಅನುಸರಿಸಬಾರದು’ ಎಂದು ಹೇಳಿದ್ದಾರೆ.

’ಆರಂಭದಲ್ಲಿ ಕಾಶ್ಮೀರ ಕುರಿತು ಮಾತುಕತೆ ನಡೆಯಲಿ’ ಎಂದು ಪದಚ್ಯುತಗೊಂಡಿರುವ ಪ್ರಧಾನಿ ನವಾಜ್‌ ಷರೀಫ್‌ ಅವರ ಸಹೋದರರು ಆಗಿರುವ ಶಹಬಾಜ್‌ ಟ್ವೀಟ್‌ ಮಾಡಿದ್ದಾರೆ.

* ನಮಗೆ ಯುದ್ಧ ಬೇಕಾಗಿಲ್ಲ. ಯಾರು ಬೇಕಾದರೂ ಯುದ್ಧ ಮಾಡಬಹುದು. ಆದರೆ, ಅತಿಯಾದ ಧೈರ್ಯವಂತರು ಮಾತ್ರ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಾರೆ. 

  - ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا