Urdu   /   English   /   Nawayathi

ಲಂಡನ್’ನಲ್ಲಿದ್ದಾನಂತೆ ವಂಚಕ ನೀರವ್ ಮೋದಿ

share with us

ಲಂಡನ್: 11 ಜೂನ್ (ಫಿಕ್ರೋಖಬರ್ ಸುದ್ದಿ) ಭಾರತದಲ್ಲಿ ಸಾವಿರಾರು ಕೋಟಿ ಬ್ಯಾಂಕ್‍ಗೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣಗಳ ವ್ಯಾಪಾರಿ ನೀರವ್ ಮೋದಿ ಲಂಡನ್‍ನಲ್ಲಿ ನೆಲೆಸಿದ್ದಾನೆಂದು ವರದಿಯಾಗಿದೆ. ಬ್ರಿಟನ್ ರಾಜಧಾನಿ ಲಂಡನ್‍ನಲ್ಲಿ ನೆಲೆಸಿರುವ ನೀರವ್ ಮೋದಿ, ಅಲ್ಲಿ ರಾಜಕೀಯ ಆಶ್ರಯ ಪಡೆಯಲು ಯತ್ನಿಸುತ್ತಾದ್ದಾರೆ ಎಂದು ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದು ನೀರವ್ ಮೋದಿಯ ವೈಯಕ್ತಿಕ ಪ್ರಕರಣ ವಾಗಿರುವುದರಿಂದ ಈ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಬಹಿರಂಗಪಡಿಸಿವುದಿಲ್ಲವೆಂದು ಬ್ರಿಟನ್ ಗೃಹ ಇಲಾಖೆ ಖಚಿತ ಪಡಿಸಿದೆ.  ರಾಯ್ಟರ್ಸ್ ಸುದ್ದಿ ಸಂಸ್ಥೆ ಇದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿತಾದರೂ ಗೃಹ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ನೀರವ್ ಮೋದಿ ಲಂಡನ್‍ನಲ್ಲಿ ಇರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ವಿದೇಶಾಂಗ ವ್ಯವಹಾರಗಳ ಇಲಾಖೆ ಕೂಡ ಆತನನ್ನು ವಶಕ್ಕೆ ಪಡೆಯಲು ಮುಂದಾಗಿದೆ.

ಈಗಾಗಲೇ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ನೀರವ್ ಮೋದಿ ಮೊದಲು ಲಂಡನ್‍ನಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿದೆ. ಆತ ಇಲ್ಲಿ ಇರುವುದು ಖಚಿತವಾದರೆ ಭಾರತಕ್ಕೆ ಹಸ್ತಾಂತರಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐ, ಜಾರಿ ನಿರ್ದೇಶನಾಲಯ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಈಗಾಗಲೇ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ಕಾರ್ಯೋನ್ಮುಖವಾಗಿವೆ. ಭಾರತ ಮತ್ತು ಬ್ರಿಟನ್ ನಡುವೆ ಅಪರಾಧಿಗಳ ಹಸ್ತಾಂತರ ವಿನಿಮಯ ಒಪ್ಪಂದವಾಗಿರುವುದರಿಂದ ಕಾನೂನಿನಡಿಯೇ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಏನಿದು ಪ್ರಕರಣ: ಭಾರತದಲ್ಲಿ ಎರಡನೇ ಅತೀ ದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ನೀರವ್‍ಮೋದಿ 13,000 ಕೋಟಿ ರೂ. ಸಾಲ ಪಡೆದಿದ್ದ. ಮೂಲತಃ ವಜ್ರಾಭರಣಗಳ ವ್ಯಾಪಾರಿಯಾಗಿದ್ದ ಈತ ಕೋಟ್ಯಾಧಿಪತಿಯೂ ಹೌದು.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ 13,000 ಕೋಟಿ ಪಡೆದ ನೀರವ್ ಮೋದಿ ಹಾಗೂ ಆತನ ಚಿಕ್ಕಪ್ಪ ಮೇಹುಲ್ ಚೋಕ್ಸಿ ಸಕಾಲಕ್ಕೆ ಸಾಲ ಪಾವತಿಸದೆ ಬ್ಯಾಂಕ್‍ಗೆ ವಂಚಿಸಿ ಕೊನೆಗೊಂದು ದಿನ ದೇಶದಿಂದಲೇ ವಿದೇಶಕ್ಕೆ ಪರಾರಿಯಾದ. ಬ್ಯಾಂಕ್‍ಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದಿದ್ದ ಎಂಬುದು ತನಿಖೆಯಿಂದ ಋಜುವಾತಾಯಿತು. ಈತನಿಗೆ ಸಾಲ ನೀಡಲು ಕೆಲವು ಬ್ಯಾಂಕ್ ಅಧಿಕಾರಿಗಳು ಕೂಡ ನಿಯಮಗಳನ್ನು ಗಾಳಿಗೆ ತೂರಿ ಲಂಚ ಪಡೆದು ಸಾಲ ಮಂಜೂರು ಮಾಡಿದ್ದರು.  ಯಾವಾಗ ನೀರವ್ ಮೋದಿ ಆತನ ಚಿಕ್ಕಪ್ಪ ಬ್ಯಾಂಕ್‍ಗೆ ಉಂಡೆನಾಮ ಹಾಕಿ ವಿದೇಶಕ್ಕೆ ಪರಾರಿಯಾದರೋ ಪ್ರಕರಣ ಬಯಲಾಗುತ್ತಿದ್ದಂತೆ ದೇಶದಲ್ಲಿ ಭಾರೀ ಅಲ್ಲೋಲ-ಕಲ್ಲೋಲವೇ ಸೃಷ್ಟಿಯಾಗಿತ್ತು.

ಮೊದಲು ಈತ ಅಮೆರಿಕದಲ್ಲಿ ನೆಲೆಸಿದ್ದಾನೆಂಬ ಮಾತುಗಳು ಕೇಳಿಬಂದಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಆದೇಶ ನೀಡಿತ್ತು. ದೇಶದ ವಿವಿಧ ಭಾಗಗಳಲ್ಲಿರುವ ನೀರವ್ ಮೋದಿಯ ಎಲ್ಲ ಸಂಪತ್ತನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಒಟ್ಟು 12,000 ಪುಟಗಳ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಹಣ ವಂಚನೆ ಪ್ರಕರಣ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.   ಆರೋಪ-ಪ್ರತ್ಯಾರೋಪ: ನೀರವ್ ಮೋದಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರವೇ ನಡೆದಿತ್ತು. ನೀರವ್ ಮೋದಿ ತಲೆಮರೆಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಅನೇಕರು ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ನೀರವ್ ಮೋದಿಗೆ ಸಾಲ ಮಂಜೂರು ಮಾಡಿದ್ದೇ ಯುಪಿಎ ಅವಧಿಯಲ್ಲಿ. ಇದಕ್ಕೆ ಅಂದಿನ ಸರ್ಕಾರವೇ ಹೊಣೆ ಎಂದು ಆರೋಪಿಸಿತ್ತು. ಮೂವರು ಲಂಡನ್‍ನಲ್ಲಿ: ಇದೀಗ ಭಾರತದಲ್ಲಿ ಸಾವಿರಾರು ಕೋಟಿ ವಂಚನೆ ಮಾಡಿರುವ ಮೂವರು ಅತಿ ಭ್ರಷ್ಟರು ಲಂಡನ್‍ನಲ್ಲೇ ರಾಜಾಶ್ರಯ ಪಡೆದಿರುವುದು ವಿಶೇಷ. ಐಪಿಎಲ್ ಹಗರಣದ ಪ್ರಮುಖ ರೂವಾರಿ ಲಲಿತ್ ಮೋದಿ, ಹೆಂಡದ ದೊರೆ ವಿಜಯ್ ಮಲ್ಯ ಹಾಗೂ ಪಂಜಾಬ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿ ಕೂಡ ಇಲ್ಲೇ ಇರುವುದು ಮತ್ತೊಂದು ವಿಶೇಷ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا