Urdu   /   English   /   Nawayathi

ಲೋಕಸಭೆ ಚುನಾವಣೆ ಟಾರ್ಗೆಟ್ : ಮಹಾಘಟಬಂಧನಕ್ಕೆ ಕಾಂಗ್ರೆಸ್-ಜೆಡಿಎಸ್ ಮುನ್ನುಡಿ

share with us

ಬೆಂಗಳೂರು: 02 ಜೂನ್ (ಫಿಕ್ರೋಖಬರ್ ಸುದ್ದಿ) ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಮಹಾಘಟಬಂಧನಕ್ಕೆ ರಾಜ್ಯದಿಂದ ಮುನ್ನುಡಿ ಬರೆದಿವೆ. ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ್ದು, ಅದಾಗಲೇ ಜೆಡಿಎಸ್ ಹಾಗೂ ಬಿಎಸ್‍ಪಿ ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಇದು ಮುಂದುವರಿಯುವ ಜತೆಗೆ ಚುನಾವಣೆ ನಂತರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್-ಬಿಎಸ್‍ಪಿ ಮೈತ್ರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೂಡ ಮುಂದುವರೆಯಲಿದೆ ಎಂದಿದ್ದಾರೆ.

ಎರಡು ಪ್ರಮುಖ ಶಕ್ತಿ:
ಅಲ್ಲಿಗೆ ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಮಹಾಘಟ ಬಂಧನ ರಚನೆಯಾಗುವುದು ಖಚಿತವಾಗಿದೆ. ದೇಶಾದ್ಯಂತ ಈ ರೀತಿಯ ಹೊಂದಾಣಿಕೆಯಿಂದ ಬಿಜೆಪಿಯನ್ನು ಮಟ್ಟ ಹಾಕಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿಯ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಹೇಗೆ ರಾಜ್ಯದಲ್ಲಿ ಕಡಿವಾಣ ಹಾಕಲಾಯಿತೋ, ಅದೇ ರೀತಿ ಕಾಂಗ್ರೆಸ್ ಇಲ್ಲಿಂದಲೇ ಮಹಾಘಟಬಂಧನಕ್ಕೆ ಮುಂದಾಗಿದೆ.

ರಾಜ್ಯ ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಕಂಡು ಬರದಂತೆ, ಒಂದೊಮ್ಮೆ ಉದ್ಭವಿಸಿದರೆ ಅದನ್ನು ಸರಿಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಕೂಡ ರಚಿಸಲಾಗಿದೆ. ಈ ಎಲ್ಲಾ ನಿಟ್ಟಿನಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಲಗೊಳ್ಳುವ ಸೂಚನೆ ಸಿಕ್ಕಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಕೂಡ ಒಟ್ಟಾಗಿ ಸಾಗಲು ನಿರ್ಧರಿಸಿರುವುದು, ಬಿಜೆಪಿ ಪಾಲಿಗೆ ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಲಿದೆ.

ತೃತೀಯರಂಗ ಯುಪಿಎನಲ್ಲಿ ವಿಲೀನ :
ಸಚಿವ ಸಂಪುಟ ಹಂಚಿಕೆ ಸಂದರ್ಭದಲ್ಲಿಯೇ ಕಾಂಗ್ರೆಸ್ ವಲಯದಲ್ಲಿ ಒಂದಿಷ್ಟು ಅಸಮಾಧಾನ ಉಂಟಾಗಿದೆ. ಆದರೆ ಹೈಕಮಾಂಡ್ ಮಾತಿಗೆ ಯಾರೂ ಚಕಾರ ಎತ್ತದೇ ಕುಳಿತಿದ್ದಾರೆ. ಒಂದರ್ಥದಲ್ಲಿ 78 ಸ್ಥಾನ ಹೊಂದಿರುವ ಕಾಂಗ್ರೆಸ್, 38 ಸ್ಥಾನ ಹೊಂದಿರುವ ಜೆಡಿಎಸ್‍ನ ಅಧೀನದಲ್ಲಿ ಬರುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ಖಾತೆಗಳನ್ನು ತಮ್ಮ ಬಳಿ ಇರಿಸಿಕೊಂಡಿರುವ ಜೆಡಿಎಸ್, ಜಾಣ್ಮೆಯಿಂದ ತಲೆ ಬಿಸಿಯ ಗೃಹ ಖಾತೆಯನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ. ಕೇವಲ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬಾರದು ಎನ್ನುವ ಉದ್ದೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕೈಗೊಂಡಿರುವ ನಿರ್ಧಾರ ಭವಿಷ್ಯದಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳಲು ಕಾರಣವಾಗಬಹುದು ಎನ್ನಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಉಂಟಾದ ರಾಜಕೀಯ ಅತಂತ್ರ ಸ್ಥಿತಿ ತೃತೀಯ ರಂಗ ರಚನೆಗೆ ವೇದಿಕೆ ಆಗಿದೆ ಎಂದು ಊಹಿಸಲಾಗಿತ್ತು. ಆದರೆ ತೃತೀಯ ರಂಗವೇ ಯುಪಿಎನಲ್ಲಿ ವಿಲಿನವಾಗಲಿದೆ ಎನ್ನುವ ಸೂಚನೆ ಕೂಡ ಈ ರೂಪದಲ್ಲಿ ಸಿಗುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا