Urdu   /   English   /   Nawayathi

ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧ ರದ್ದು

share with us

ಡಬ್ಲಿನ್‌: 27 ಮೇ (ಫಿಕ್ರೋಖಬರ್ ಸುದ್ದಿ) ಯುರೋಪ್‌ ನಲ್ಲಿಯೇ ಸಂಪ್ರದಾಯವಾದಿ ರಾಷ್ಟ್ರ ಎಂದು ಕರೆಸಿಕೊಳ್ಳುವ ಐರ್ಲೆಂಡ್‌ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಬದಲಾವಣೆ ತರುವ ಮೂಲಕ ಉದಾರವಾದದತ್ತ ಮುಖ ಮಾಡಿದೆ. ಶನಿವಾರ ನಡೆದ ಜನಮತ ಗಣನೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂಬುದರ ಪರವಾಗಿ ಶೇ 68ರಷ್ಟು ಜನರು ಮತ ಚಲಾಯಿಸಿದ್ದರೆ, ಶೇ 32ರಷ್ಟು ಜನರು ವಿರೋಧಿಸಿ ಮತ ಚಲಾಯಿಸಿದ್ದಾರೆ.

1995ರಲ್ಲಷ್ಟೇ ಜನಮತಗಣನೆ ನಡೆದು, ವಿವಾಹ ವಿಚ್ಛೇದನವನ್ನು ಕೆಲವೇ ಮತಗಳ ಅಂತರದಿಂದ ಕಾನೂನುಬದ್ಧಗೊಳಿಸಿದ್ದ ಐರ್ಲೆಂಡ್‌ನಲ್ಲಿ ಈಗ ಗರ್ಭಪಾತಕ್ಕೆ ಅವಕಾಶ ನೀಡಲು ಕಾನೂನು ತಿದ್ದುಪಡಿ ತರುತ್ತಿರುವುದು ರಾಷ್ಟ್ರ ಬದಲಾವಣೆಗೆ ತನ್ನನ್ನು ಒಡ್ಡಿಕೊಳ್ಳುವ ಪ್ರಕ್ರಿಯೆಯಲ್ಲಿ ಮೈಲುಗಲ್ಲು ಎಂದು ಬಣ್ಣಿಸಲಾಗುತ್ತಿದೆ.

‘ನಾಳೆ ನಾವು ಇತಿಹಾಸ ಸೃಷ್ಟಿಸುತ್ತಿದ್ದೇವೆ ಎನಿಸುತ್ತಿದೆ’ ಎಂದು ಉದ್ಗರಿಸಿರುವ ಪ್ರಧಾನಿ ಲಿಯೋ ವರಾಡ್ಕರ್‌, ಗರ್ಭಪಾತಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಸಂವಿಧಾನದ 8ನೇ ತಿದ್ದುಪಡಿ ರದ್ದತಿಗೆ ಬೆಂಬಲ ನೀಡುವುದಾಗಿ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.

‘ಪ್ರತಿವರ್ಷ ಐರ್ಲೆಂಡ್‌ನಿಂದ ಸಾವಿರಾರು ಗರ್ಭಿಣಿಯರು ಇಂಗ್ಲೆಂಡ್‌ಗೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರುತ್ತಾರೆ. ಇಷ್ಟು ವೆಚ್ಚವನ್ನು ಭರಿಸ
ಲಾಗದ ಅಸಹಾಯಕರು ಗರ್ಭಪಾತಕ್ಕೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಕುತ್ತು ಎದುರಾದಾಗ ಗರ್ಭಪಾತ ಅನಿವಾರ್ಯವಾಗಲಿದ್ದು, ಅದಕ್ಕೆ ಅವಕಾಶ ನೀಡಬೇಕು’ ಎಂದು ಈ ವಿಷಯದ ಪರವಾಗಿ ಇರುವವರು ವಾದ ಮಂಡಿಸಿದ್ದಾರೆ.

ಇದನ್ನು ವಿರೋಧಿಸುವ ಗುಂಪಿನವರು ಸಹ ತಮ್ಮ ವಾದ ಮಂಡಿಸಿದ್ದು, ‘ಇಂತಹ ನಡೆ ದೌರ್ಭಾಗ್ಯವೇ ಸರಿ’ ಎಂದಿದ್ದಾರೆ.

****

ಕಾನೂನು ತಿದ್ದುಪಡಿಗೆ ಸವಿತಾ ಸಾವು ಕಾರಣ

ಗರ್ಭಪಾತಕ್ಕೆ ಕಾನೂನಿನಡಿ ಅವಕಾಶ ನೀಡಬೇಕು ಎಂಬ ವಿಷಯ ಬಿಟ್ಟರೆ ಸಾಮಾಜಿಕವಾಗಿ ಪರಿಣಾಮ ಬೀರುವಂತೆ ಬೇರೆ ಯಾವುದೇ ವಿಷಯಗಳು ಅರ್ಧಕೋಟಿಯಷ್ಟಿರುವ ಐರಿಷ್‌ ಜನರ ನಡುವೆ ಇಷ್ಟೊಂದು ಭಿನ್ನಾಭಿಪ್ರಾಯ ಮೂಡಿಸಿರಲಿಲ್ಲ ಎನ್ನಲಾಗಿದೆ.

ಬೆಳಗಾವಿ ಮೂಲದ ದಂತ ವೈದ್ಯೆ ಡಾ.ಸವಿತಾ ಹಾಲಪ್ಪನವರ್, ಗರ್ಭ ಧರಿಸಿದ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದ ಕಾರಣ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಐರ್ಲೆಂಡ್‌ನ ಆಸ್ಪತ್ರೆಯೊಂದು ಗರ್ಭಪಾತ ಮಾಡಲು ನಿರಾಕರಿಸಿದ ಕಾರಣ  ಸವಿತಾ 2012ರಲ್ಲಿ ಮೃತಪಟ್ಟಿದ್ದರು.

ಈ ಘಟನೆ ನಂತರ, ಗರ್ಭದಲ್ಲಿರುವ ಮಗು ಅಥವಾ ತಾಯಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದಿಗೆ ವಿವಿಧ ಸಂಘಟನೆಗಳು ಹೋರಾಟ ಕೈಗೊಂಡಿದ್ದವು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا