Urdu   /   English   /   Nawayathi

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ ಅನಿವಾರ್ಯ : ಪರಂ

share with us

ಬೆಂಗಳೂರು: 21 ಮೇ (ಫಿಕ್ರೋಖಬರ್ ಸುದ್ದಿ) ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಬಾರದಿತ್ತು ಎಂದು ಕೆಲವರು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮಗೆ ಅನಿವಾರ್ಯವಾಗಿದ್ದು, ಹಾಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ಮೈತ್ರಿ ಸರ್ಕಾರ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ದಿವಂಗತ ರಾಜೀವ್‍ಗಾಂಧಿಯವರ 27ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ಆಸೆಯಿಂದ ಮೈತ್ರಿ ಮಾಡಿಕೊಂಡಿಲ್ಲ. ಮುಂದೆ ನಮಗೆ ಕಠಿಣ ಪರಿಸ್ಥಿತಿಯ ದಿನಗಳಿವೆ. ಆದರೆ ಅವನ್ನು ಸಹಿಸಿಕೊಂಡೇ ನಾವು ಪಕ್ಷ ಕಟ್ಟಬೇಕಿದೆ. ಇನÉ್ನೂಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ನಾವೆಲ್ಲ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬಹುಮತ ಸಿಗಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೊಳಿಸಿದ ಜನಪರ ಯೋಜನೆಗಳು ಜನರಿಗೆ ಅರ್ಥ ಆಗಿಲ್ಲ. ಅವು ಎಷ್ಟು ಪ್ರಯೋಜನಕಾರಿ ಎಂಬುದು ಭವಿಷ್ಯದಲ್ಲಿ ಗೊತ್ತಾಗಲಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಕಾಂಗ್ರೆಸ್ ವರಿಷ್ಠರು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಂತೆ ಸೂಚನೆ ನೀಡಿದರು. 2008 ರಿಂದ 2013ರ ನಡುವೆ ಬಿಜೆಪಿ ಮಾಡಿದ ಭ್ರಷ್ಟಾಚಾರ ನಮ್ಮ ಕಣ್ಣಮುಂದೆ ಇದೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಇಂದಿರಾಗಾಂಧಿ ಅವರ ಹತ್ಯೆಯ ನಂತರ ದೇಶದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದಿದೆ ಎಂಬ ಆತಂಕ ಎದುರಾಗಿತ್ತು. ಆದರೆ ರಾಜೀವ್‍ಗಾಂಧಿಯವರು ಅಧಿಕಾರ ವಹಿಸಿಕೊಂಡ ಮೇಲೆ ದೇಶದ ದಿಕ್ಕೇ ಬದಲಾಗಿದೆ. 21ನೇ ಶತಮಾನದಲ್ಲಿ ನಿರುದ್ಯೋಗ, ಬಡತನ ಸಮಸ್ಯೆ ಇರಬಾರದು, ಯಾರೂ ಕಣ್ಣೀರಿಡಬಾರದೆಂಬುದು ರಾಜೀವ್‍ಗಾಂಧಿ ಆಶಯವಾಗಿತ್ತು.

ದೂರಸಂಪರ್ಕ ಕ್ಷೇತ್ರದಲ್ಲಿ ರಾಜೀವ್‍ಗಾಂಧಿಯವರು ಮಾಡಿದ ಕ್ರಾಂತಿಯಿಂದಾಗಿ ಇಂದು ಹಣ್ಣು, ಹೂವು, ತರಕಾರಿ ಮಾರುವವರ ಕೈಯಲ್ಲೂ ಫೋನ್‍ಗಳಿವೆ. ಅಷ್ಟೇ ಏಕೆ ಭಿಕ್ಷೆ ಬೇಡುವವನ ಬಳಿಯೂ ಫೋನ್ ಇದೆ. 21ನೇ ಶತಮಾನಕ್ಕೆ ರಾಜೀವ್‍ಗಾಂಧಿ ಭಾರತವನ್ನು ಸಜ್ಜುಗೊಳಿಸಿದ್ದರು. ಅವರ ಉದ್ದೇಶಗಳಲ್ಲಿ ಒಂದನ್ನು ಈಗಿನ ಕೇಂದ್ರ ಸರ್ಕಾರ ಪಾಲನೆ ಮಾಡಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.

ಆದರೆ ಬಿಜೆಪಿ ದೇಶವನ್ನು ಅಭಿವೃದ್ಧಿ ಮಾಡುವ ಬದಲು ಒಡೆದು ಛಿದ್ರ ಛಿದ್ರ ಮಾಡುತ್ತಿದೆ. ಜಾತಿ-ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತಿದೆ. ಬಿಜೆಪಿಯನ್ನು ಬೆಂಬಲಿಸಿದ ವರ್ತಕ ಸಮುದಾಯವೂ ಇಂದು ಭಯದಲ್ಲಿದೆ. ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಆತಂಕದಲ್ಲಿದ್ದಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅಧಿಕಾರದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂಬ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ದು, 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದ್ದು, ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದು ರಾಜೀವ್‍ಗಾಂಧಿಯವರು. ರಾಜಕೀಯದ ಆಗುಹೋಗುಗಳಲ್ಲಿ ಭಾಗಿಯಾಗುವ ಮೂಲಕ ರಾಜೀವ್‍ಗಾಂಧಿಯವರಿಗೆ ನಾವು ಗೌರವ ಸಲ್ಲಿಸಬೇಕು ಎಂದು ಹೇಳಿದರು.

ರಾಜೀವ್‍ಗಾಂಧಿ ಆಶಯದಂತೆ ಈ ದೇಶವನ್ನು ಕಟ್ಟಬೇಕು. ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ನಾನು ಪ್ರತಿದಿನ ರಾಜೀವ್‍ಗಾಂಧಿಯವರ ವಿಚಾರಧಾರೆಗಳನ್ನು ನೆನಪಿಸಿಕೊಂಡೇ ಕೆಲಸ ಆರಂಭಿಸುತ್ತೇನೆ. ನೆಹರೂ ಕುಟುಂಬ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ತ್ಯಾಗ ಮಾಡಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಪ್ರತಿ ರಾಜ್ಯದಲ್ಲೂ ಸಾವಿರಾರು ಜನನಾಯಕರನ್ನು ನೆಹರೂ ಕುಟುಂಬ ಹುಟ್ಟು ಹಾಕಿದೆ ಎಂದು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಯುವ ಕಾಂಗ್ರೆಸ್‍ನಲ್ಲಿ ಕಾರ್ಯಕರ್ತನಾಗಿದ್ದ ನನ್ನನ್ನು ರಾಜೀವ್‍ಗಾಂಧಿ ರಾಜ್ಯಸಭಾ ಸದಸ್ಯನನ್ನಾಗಿ ಮಾಡಿದರು. ದೇಶಾದ್ಯಂತ 32 ಜನ 35 ವರ್ಷದೊಳಗಿನ ಯುವಕರನ್ನು ಗುರುತಿಸಿ ರಾಜ್ಯಸಭೆಗೆ ಸದಸ್ಯರನ್ನಾಗಿ ಮಾಡುವ ಮೂಲಕ ನಾಯಕತ್ವವನ್ನು ಬೆಳೆಸಿದರು.

ರಾಜೀವ್‍ಗಾಂಧಿ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದ್ದಾಗ ಬಿಜೆಪಿಯ ಹಿರಿಯ ನಾಯಕ ವಾಜಪೇಯಿ ಅವರು ಟೀಕೆ ಮಾಡಿದರು. ರಾಜೀವ್‍ಗಾಂಧಿ ಕಂಪ್ಯೂಟರ್ ತರುವ ಮೂಲಕ ನಿರುದ್ಯೋಗವನ್ನು ಹೆಚ್ಚಿಸುತ್ತಿದ್ದಾರೆ ಎಂದು ಟೀಕಿಸಿದರು. ಆದರೆ ಇಂದು ಅದೇ ಬಿಜೆಪಿಯವರು ತಮ್ಮ ಮಾತಿಗೆ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا