Urdu   /   English   /   Nawayathi

ಆಡಿಯೊ: ಪುಟ್ಟಸ್ವಾಮಿ, ವಿಜಯೇಂದ್ರ ಧ್ವನಿಯಲ್ಲವೆಂದು ಸಾಬೀತಾದರೆ ರಾಜಕೀಯ ನಿವೃತ್ತಿ –ವಿ.ಎಸ್ ಉಗ್ರಪ್ಪ

share with us

ಬೆಂಗಳೂರು: 21 ಮೇ (ಫಿಕ್ರೋಖಬರ್ ಸುದ್ದಿ) ‘ದೂರವಾಣಿ ಕರೆಯಲ್ಲಿರುವ ಧ್ವನಿ ಪುಟ್ಟಸ್ವಾಮಿ ಹಾಗೂ ವಿಜಯೇಂದ್ರ ಅವರದ್ದು ಅಲ್ಲ ಎಂದು ಸಾಬೀತುಪಡಿಸಿದರೆ ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ. ನಿವೃತ್ತಿ ಘೋಷಿಸುತ್ತೇನೆ. ತಾಕತ್ತಿದ್ದರೆ ಸವಾಲು ಸ್ವೀಕರಿಸಿ’ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಕೆಪಿಸಿಸಿ‌ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅದು ನಕಲಿ ಆಡಿಯೋ ಅಲ್ಲ, ಅಲ್ಲಿ ನಡೆದಿರುವ ಸಂಭಾಷಣೆ ಸತ್ಯವಾದದ್ದು, ಆದರೆ ನಾನು ಯಾವ ಶಾಸಕರ ಹೆಸರನ್ನೂ ಹೇಳಿರಲಿಲ್ಲ. ಅದೊಂದು ಮಾರುವೇಷದ ಕಾರ್ಯಾಚರಣೆ. ಅದರಲ್ಲಿ ಶಿವರಾಮ್ ಹೆಬ್ಬಾರ್ ಪತ್ನಿ ಎಂದು ಮಾಧ್ಯಮದವರೇ ಮಾತನಾಡಿದ್ದಾರೆ. ಅದನ್ನು ತಿಳಿದುಕೊಳ್ಳದ ಬಿ.ಜೆ ಪುಟ್ಟಸ್ವಾಮಿ ₹ 15 ಕೋಟಿ ಹಣ, ಇಲ್ಲವೇ, ಮಂತ್ರಿ ಸ್ಥಾನ ಮತ್ತು ₹ 5 ಕೋಟಿ ಕೊಡುತ್ತೇನೆ ಎಂದಿದ್ದಾರೆ.

ವಿಜಯೇಂದ್ರ ಮಾತನಾಡಿ, ‘ಪುಟ್ಟಸ್ವಾಮಿ ಭರವಸೆಗಳನ್ನು ಈಡೇರಿಸುವುದಾಗಿ, ಜತೆಗೆ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ಇಲ್ಲಿರುವ ಮಹಿಳೆಯ ಧ್ವನಿ ಶಾಸಕರ‌ ಪತ್ನಿಯದ್ದಲ್ಲ, ಆದರೆ ಪುಟ್ಟಸ್ವಾಮಿ, ವಿಜಯೇಂದ್ರ ಮಾತನಾಡಿರುವುದು ಸತ್ಯ. ಈ ಬಗ್ಗೆ ಬೇಕಾದರೆ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ಧ್ವನಿ ಪರೀಕ್ಷೆ ಮಾಡಿಸಲಿ’ ಎಂದು ಸವಾಲೆಸೆದರು.

‘ಶಾಸಕರ ಖರೀದಿ ಕುರಿತು ಅಷ್ಟು‌ ಕೋಟಿ‌ ಇಷ್ಟು ಕೋಟಿ‌ ಹಣ ನೀಡುತ್ತಾರಂತೆ ಎನ್ನುವ ಮಾಹಿತಿ ಹಿನ್ನಲೆಯಲ್ಲಿ ಬಿ.ಸಿ ಪಾಟೀಲ್‌ರನ್ನು ಸಂಪರ್ಕಿಸಲು ನಾನೇ ನಂಬರ್ ಕೊಟ್ಟೆ, ಮುರಳಿಧರರಾವ್, ಯಡಿಯೂರಪ್ಪ ಮಾತನಾಡಿದ್ದಾರೆ. ಇದನ್ನು ಸದನದಲ್ಲಿ ಒಪ್ಪಿಕೊಂಡೂ ಇದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಇದು‌ ಸ್ಪಷ್ಟ ಸಾಕ್ಷಿ ಅಲ್ಲವೇ’ ಎಂದರು.

‘ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಮುರಳಿಧರ ರಾವ್, ಯಡಿಯೂರಪ್ಪ, ಅನಂತ್ ಕುಮಾರ್, ಸದಾನಂದಗೌಡರ ಪಾತ್ರವೂ ಇದರಲ್ಲಿದೆ. ಆದರೆ, ಇವರೆಲ್ಲಾ ಇಲ್ಲಿಯವರೆಗೂ ಉಸಿರೇ ಬಿಡದೇ ಇರುವುದನ್ನು ನೋಡಿದರೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಸದನದಲ್ಲೇ ಒಪ್ಪಿಕೊಂಡಿದ್ದಾರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿ ಎಂದಿದ್ದರು. ಆದರೆ ಸಂವಿಧಾನದ 10ನೇ ಪರಿಚ್ಛೇದದಲ್ಲಿ‌ ಆತ್ಮಸಾಕ್ಷಿ ವಿಷಯವೇ ಬರುವುದಿಲ್ಲ. ಶಾಸಕರು ಸ್ವಯಂ ಮತ ಹಾಕಬೇಕು. ಪಕ್ಷ ತೊರೆದರೆ ಆತ ಅನರ್ಹತೆಗೆ ಒಳಗಾಗಬೇಕು, ವ್ಹಿಪ್ ಉಲ್ಲಂಘಿಸಿ ಅಡ್ಡ ಮತ ಹಾಕಿದರೆ ಹಾಗೂ ವ್ಹಿಪ್ ಪಡೆದು ಗೈರಾದರೂ ಶಾಸಕತ್ವದಿಂದ ಅನರ್ಹತೆಗೆ ಒಳಗಾಗಬೇಕಿದೆ. ಸ್ಥಾನಗಳ ಅಂಕಿ ಅಂಶ ಗೋಡೆ ಬರಹದಂತೆ ಸ್ಪಷ್ಟವಿದ್ದರೂ ಯಡಿಯೂರಪ್ಪ ಬಹುಮತಕ್ಕೆ ಯತ್ನಿಸಿದರು. ಅವರ ಮುಂದೆ ಶಾಸಕರ ಖರೀದಿ ಅಲ್ಲದೆ ಮತ್ಯಾವ ಮಾರ್ಗವೂ ಇರಲಿಲ್ಲ‌. ಹಾಗಾಗಿ ಶಾಸಕರ ಖರೀದಿಗೆ ಕೈ ಹಾಕಿದರು’ ಎಂದರು.

‘ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡದೆ ಪಲಾಯನ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮೀತ್ ಶಾ ಸೋಲಾಗಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಜಾತ್ಯಾತೀತ ಶಕ್ತಿಗಳ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಸಂದ ಜಯವಾಗಿದೆ. ಏನೆಲ್ಲಾ ಆಮಿಷಗಳನ್ನು ಬಿಜೆಪಿ ರಾಷ್ಟ್ರೀಯ, ರಾಜ್ಯದ ನಾಯಕರು ನಮ್ಮ ಶಾಸಕರಿಗೆ‌ ಒಡ್ಡಿದ್ದರು. ಸಂಚು ನಡೆಸಿದರು. ಆದರೂ ಯಾವುದಕ್ಕೂ ಜಗ್ಗದೇ ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು, ಜನಾದೇಶಕ್ಕೆ‌ ಗೌರವ ಕೊಡಬೇಕು, ಜಾತ್ಯಾತೀತ ಶಕ್ತಿಗಳ ಸರ್ಕಾರ ರೂಪಗೊಳ್ಳಲು ನಮ್ಮ ಪಕ್ಷದ 78 ಹಾಗೂ ಪಕ್ಷೇತರ ಇಬ್ಬರು ಮತ್ತು ಜೆಡಿಎಸ್‌ನ 37 ಶಾಸಕರು ಗಟ್ಟಿಯಾಗಿ ಉಳಿದು, ದೇಶದಲ್ಲಿ ಬಿಜೆಪಿಯ ಅವಸಾನಕ್ಕೆ ನಾಂದಿ ಹಾಡಿದ್ದಾರೆ’ ಎಂದರು.

‘ನಾವು ಆಡಿಯೊ ಬಿಡುಗಡೆ ಮಾಡಿದ್ದೆವು, ಅವು ನಕಲಿ ಆಡಿಯೊ ಅಲ್ಲ. ನಾನು 32 ವರ್ಷದಿಂದ ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ, ಕಾನೂನು ವಿದ್ಯಾರ್ಥಿಗಳಿಗೆ ಸಂವಿಧಾನದ ಪಾಠ ಮಾಡಿದ್ದೇನೆ, ನಾನು ನಕಲಿ ಆಡಿಯೊ ಸಿದ್ದಪಡಿಸಿ ಬಿಡುಗಡೆ ಮಾಡುವಂತಹ ನೀಚ‌ಕೃತ್ಯ ಮಾಡುವವನಲ್ಲ, ಮಾಡುವುದೂ ಇಲ್ಲ, ನಾನು ಸೃಷ್ಠಿ ಮಾಡಿಲ್ಲ. ಬಿಡುಗಡೆಯಾದ ಆಡಿಯೊ ಅಸಲಿ’ ಎಂದು ಸ್ಪಷ್ಟೀಕರಣ ನೀಡಿದರು.

‘ಆಡಿಯೊ ಮಾತುಕತೆ ಕುರಿತು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಇದರಲ್ಲಿ ಕೇಂದ್ರ ಸಚಿವರ ಪಾತ್ರವೂ ಇದ್ದು ಸಮಗ್ರ ತನಿಖೆಯ ಅಗತ್ಯವಿದೆ ಹಾಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಉಗ್ರಪ್ಪ ಒತ್ತಾಯಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا