Urdu   /   English

ಗರ್ವ, ಅಹಂಕಾರ ಮತ್ತು ಮನಃಸಾಕ್ಷಿ...

share with us

ಹೌದು ನಾನು ಗರ್ವಿಷ್ಠನೇ.
‘ನೀವು ಒಬ್ಬ ನಟ. ಸುಲಭವಾಗಿ ನಾಲ್ಕು ಕಾಸು ಸಂಪಾದಿಸಬಲ್ಲಿರಿ. ಸಂಬಳಕ್ಕಿಂತ ಹೆಚ್ಚು ಹೆಸರು ಗಳಿಸುವ ಎತ್ತರದಲ್ಲಿದ್ದೀರಿ. ನೀವು ನಿಮಗನ್ನಿಸಿದ ಹಾಗೆ ಇರಬಹುದು. ನಿಮ್ಮ ಹಾಗೆ ಎಲ್ಲರಿಗೂ ಗರ್ವಿಷ್ಠರಂತೆ ಇರಲು ಸಾಧ್ಯವೇ?’ ಎಂದು ಹೆಣ್ಣುಮಗಳೊಬ್ಬಳು ಕೇಳಿದಳು.

ಹೌದು, ನಾನು ಯಾವಾಗಲೂ ಗರ್ವಿಷ್ಠನಂತೆ ಇರುತ್ತೇನೆ. ಆದರೆ ಆ ಗರ್ವ ನನ್ನ ಆಯುಧವಲ್ಲ. ಅದು ನನ್ನ ಗುರಾಣಿ. ಏಕೆಂದರೆ ಗೆಲುವಿನಲ್ಲಿ ನನ್ನೊಳಗೆ ಗರ್ವ ತುಂಬಿರುವುದಿಲ್ಲ. ಆದರೆ ಸೋಲು ಎದುರಾದಾಗ ಹತ್ತು ಪಟ್ಟು ಗರ್ವದಿಂದ ಅಲೆಯುತ್ತಿರುತ್ತೇನೆ. ಮೌನವಾಗಿರುತ್ತೇನೆ. ಆ ಮೌನದ ಆಳದಲ್ಲಿ ನನ್ನ ಗರ್ವ ಕುಳಿತಿರುತ್ತದೆ. ಮತ್ತೆ ಎದ್ದುಬರುವೆನೆಂದು ಸಾರುವ ಗರ್ವವದು. ಎಲ್ಲರೊಳಗೂ ಆ ಗರ್ವವಿರಬೇಕು. ‘ಅಂಜುವುದು ತಪ್ಪು’ ಎಂದು ಆರಂಭವಾಗುವ ತಮಿಳು ಲೇಖಕ ಭಾರತಿಯ ಮಾತುಗಳಲ್ಲಿ ಅಡಗಿರುವುದು ಅನೀತಿಯನ್ನು ವಿರೋಧಿಸುವ ಗರ್ವವೇ.

ಆತ್ರೇಯ ಎಂಬುವರು ತೆಲುಗಿನ ಅದ್ಭುತ ಕವಿ. ಬದುಕಿನಲ್ಲಿ ಹೇಗೆ ಹೋರಾಡಬೇಕು ಎಂಬುದನ್ನು ತಮ್ಮ ಕೃತಿಗಳ ಮೂಲಕ ಮೈ ನವಿರೇಳಿಸುವ ಹಾಗೆ ಸಾರಿ ಹೇಳಿದ ಕವಿ ಅವರು. ಅವರಿಗೆ ಪ್ರತಿದಿನ ಕುಡಿಯುವ ಅಭ್ಯಾಸ. ತನ್ನನ್ನು ನೆಚ್ಚಿ ಬಂದ ಹಲವು ಗೆಳತಿಯರ ಸಹವಾಸದಲ್ಲಿದ್ದವರು. ‘ನಿಮ್ಮ ಹಲವು ಕೆಟ್ಟ ಅಭ್ಯಾಸಗಳಿಂದಾಗಿ ನೀವು ತುಂಬ ಅಸಹ್ಯವಾದವರು ಎಂದು ಜನ ಆಡಿಕೊಳ್ಳುತ್ತಿದ್ದಾರಲ್ವಾ?’ ಎಂದು ಕೇಳಿದವರಿಗೆ ಆತ್ರೇಯ ಕೊಟ್ಟ ಉತ್ತರವೇನು ಗೊತ್ತೇ? ‘ನಾನು ಒಬ್ಬ ಕವಿ. ನನ್ನ ಕೃತಿಗಳನ್ನು, ಬದುಕಿನ ಗ್ರಹಿಕೆಗಳನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದೇನೆ. ಅದ್ಭುತವಾದ ಕೃತಿಗಳು ಎಂದು ನೀವೇ ಹೊಗಳುತ್ತಿದ್ದೀರಿ. ಆದರೆ ಅದನ್ನು ಬಿಟ್ಟು ಅವನವನೊಳಗಿನ ಅಸಹ್ಯವನ್ನು ನನ್ನೊಳಗೇಕೆ ಹುಡುಕುತ್ತಿದ್ದೀರಿ?’– ಇದು ತುಂಬ ಸುಂದರವಾದ ಗರ್ವ.

ಸಿನಿಮಾವೊಂದರಲ್ಲಿ ನಟಿಸಲು ನನ್ನನ್ನು ಕರೆದರು. ಐವತ್ತು ಲಕ್ಷ ರೂಪಾಯಿ ಸಂಭಾವನೆ ಕೊಡುವುದಾಗಿ ಹೇಳಿದರು. ಇಪ್ಪತ್ತು ದಿನಗಳ ಕಾಲ್‌ಶೀಟ್‌. ಅದು ಪ್ರಮುಖ ನಾಯಕನಟನೊಬ್ಬನ ಸಿನಿಮಾ. ಆದರೆ ಕಥೆ ಕಳಪೆಯದ್ದಾಗಿತ್ತು. ನಟಿಸಲು ಅವಕಾಶವೇ ಇಲ್ಲದ ನೀರಸ ಪಾತ್ರ. ಎಷ್ಟು ದೊಡ್ಡ ಸಂಭಾವನೆಯಾದರೂ ನಟಿಸಲು ಮನಸೊಪ್ಪಲಿಲ್ಲ. ‘ಸಾಧ್ಯವಾಗಲ್ಲ’ ಎಂದೆ. ಅಂದು ಸಂಜೆ ಚಲನಚಿತ್ರ ತರಬೇತಿ ಕಾಲೇಜಿನ ವಿದ್ಯಾರ್ಥಿಗಳು ಬಂದು ‘ಸರ್, ಮೂಢನಂಬಿಕೆಗಳ ವಿರುದ್ಧ ಒಂದು ಡಾಕ್ಯುಮೆಂಟರಿ ಮಾಡುತ್ತಿದ್ದೇವೆ. ಹಳ್ಳಿಗನೊಬ್ಬನ ಪಾತ್ರ. ಕಾಲೇಜ್ ಪ್ರಾಜೆಕ್ಟ್‌. ಎಂಟು ದಿನದ ಡೇಟ್‌ಬೇಕು. ಸಂಭಾವನೆ ಕೊಡಕ್ಕಾಗಲ್ಲ. ಸಾಧ್ಯವೇ?’ ಎಂದರು. ಅವರೊಂದಿಗೆ ದೂರದ ಹಳ್ಳಿಗೆ ಹೊರಟೆ. ‘ಪ್ರಕಾಶ್‌ ರಾಜ್‌ ದೊಡ್ಡ ಬ್ಯಾನರ್‌ನ ಸಿನಿಮಾ ಬೇಡ ಅನ್ನುವಷ್ಟು ಗರ್ವಿಷ್ಠ’ ಎಂದು ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಿದರು. ನಾನು ನಕ್ಕೆ.

ಈ ಗರ್ವ ದಿಢೀರೆಂದು ನಿನ್ನೆ ಮೊನ್ನೆ ಬಂದಿದ್ದಲ್ಲ. ಇನ್ನೂ ಹೇಳಬೇಕೆಂದರೆ ಈ ಗರ್ವವೇ ಇಂದು ನೀವು ನೋಡುತ್ತಿರುವ ಪ್ರಕಾಶ್‌ ರೈ ಅಥವಾ ರಾಜ್‌ ಎನ್ನುವ ನಟನನ್ನು ನಿಮ್ಮ ಮುಂದೆ ನಿಲ್ಲಿಸಿರುವುದು. ದೊಡ್ಡ ಹಣವಂತರ ಮನೆಯಲ್ಲಿ ನಾನು ಹುಟ್ಟಲಿಲ್ಲ. ಕೆಳಮಧ್ಯಮ ವರ್ಗದ ಕುಟುಂಬ. ಅಮ್ಮನ ಸಂಬಳದಿಂದಲೇ ಮನೆ ನಡೆಯುತ್ತಿತ್ತು. ಅಂಥ ಕುಟುಂಬದಲ್ಲಿ ಹಿರಿಯ ಮಗನಾಗಿ ಹುಟ್ಟಿದರೆ ಅವನ ಜವಾಬ್ದಾರಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಏಳನೇ ತರಗತಿಯವರೆಗೆ ನಟನೆಗೂ ನನಗೂ ಯಾವ ಸಂಬಂಧವೂ ಇರಲಿಲ್ಲ.

ಯಾವಾಗಲೂ ಪುಸ್ತಕದ ಹುಳುವಿನಂತೆ ಪಾಠಗಳನ್ನು ಓದುವ ಒಳ್ಳೆಯ ಹುಡುಗನಾಗಿದ್ದೆ. ಎಲ್ಲ ಪಾಠಗಳೂ ಮನಃಪಾಠವಾಗಿದ್ದವು. ಆಗಲೇ ಜ್ಞಾಪಕಶಕ್ತಿ ಹೆಚ್ಚು ನನಗೆ. ನನ್ನ ತಂಗಿಯೂ ತಮ್ಮನೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಗೆದ್ದು ಸೋಪ್‌ ಡಬ್ಬಗಳನ್ನೋ, ಪ್ಲಾಸ್ಟಿಕ್ ಟಿಫಿನ್‌ ಬಾಕ್ಸ್‌ಗಳನ್ನೋ, ಪ್ರಮಾಣಪತ್ರಗಳನ್ನೋ ಬಹುಮಾನವಾಗಿ ತರುವುದನ್ನು ಆಶ್ಚರ್ಯದಿಂದ ನೋಡುತ್ತಿದ್ದೆ.

‘ಪ್ರಕಾಶ್‌, ಬರೀ ಓದುವುದು ಬದುಕಿಗೆ ಸಾಲದು. ಹಲವು ಪೋಟಿಗಳಲ್ಲಿ ತೊಡಗಿಕೊಂಡರೇ ನಾಲ್ಕು ವಿಷಯ ಕಲಿತುಕೊಳ್ಳಲು ಸಾಧ್ಯ ಎಂದು ಅಮ್ಮ ಕಳವಳದಿಂದ ಹೇಳಿದಳು. ಮಾರನೇ ದಿನ ತರಗತಿಯಲ್ಲಿ ‘ಸುಭಾಷ್‌ ಚಂದ್ರ ಬೋಸ್‌ ಅವರ ಬಗ್ಗೆ ಯಾರೆಲ್ಲ ವೇದಿಕೆಯನ್ನೇರಿ ಮಾತನಾಡುತ್ತೀರಿ?’ ಎಂದಾಗ ನಾನು ಕೈ ಎತ್ತಿದ್ದೆ. ಬೋಸ್‌ ಬಗ್ಗೆ ಅಪ್ಪನಿಂದ ಸಾಕಷ್ಟು ತಿಳಿದುಕೊಂಡು ಮನಃಪಾಠ ಮಾಡಿ ಮೊದಲ ಬಾರಿ ವೇದಿಕೆಯೇರಿದಾಗ ಭಯವಿರಲಿಲ್ಲ. ಬೋಸ್‌ರ ಬಗ್ಗೆ ಹೆಮ್ಮೆಯಿಂದ ಬೋಸ್‌ ಅವರಂತೇ ಹಾವಭಾವಗಳ ಮೂಲಕ ಮಾಡಿದ ಭಾಷಣಕ್ಕೆ ಚಪ್ಪಾಳೆಗಳ ಸುರಿಮಳೆ. ಮಾರನೇ ದಿನ ಅಸೆಂಬ್ಲಿಯಲ್ಲಿ ಪ್ರಿನ್ಸಿಪಾಲ್‌ ನನ್ನನ್ನು ಹೊಗಳಿದಾಗ ಮತ್ತೆ ಚಪ್ಪಾಳೆ.

ಚಪ್ಪಾಳೆ ರುಚಿ ಇಷ್ಟವಾಗತೊಡಗಿತು. ಅಷ್ಟೆ, ಪಾಠಗಳಲ್ಲಿನ ನನ್ನ ಆಸಕ್ತಿ ಕಾಣೆಯಾಯಿತು. ಅಲ್ಲಿಂದ ಚರ್ಚಾ ಸ್ಪರ್ಧೆ ನಾಟಕಗಳ ಗುಂಗು ಹತ್ತಿತು. ರಾಜ್ಯಮಟ್ಟದ ವಿಧವಿಧ ವೇದಿಕೆಗಳಲ್ಲಿ, ಬೇರೆ ಬೇರೆ ಊರಿನ ಶಾಲೆಗಳಲ್ಲಿ ಚಪ್ಪಾಳೆಗಳ ಗುಂಗಿಗೆ ಶರಣಾದೆ. ಶಾಲೆಯಿಂದ ಕಾಲೇಜು. ಸೈನ್ಸ್‌ ಕಾಲೇಜಿನಲ್ಲಿ ಸೀಟು ಸಿಕ್ಕರೂ ‘ಬೇಡ’ಎಂದು ಹಟದಿಂದ ನಿಂತ ಮಗನನ್ನು ಕಂಡು ಅಮ್ಮ ಕಂಗಾಲಾದಳು. ‘ಬದುಕಿಗೆ ಓದು ಮುಖ್ಯ ಕಣೋ’ ಎಂದು ಪ್ಲೇಟ್ ಬದಲಾಯಿಸಿದಳು.

ಓದಿಗಿಂತ ಕನ್ನಡ ಕಲಿಸುವ, ನಾಟಕಗಳಿಗೆ ಆದ್ಯತೆ ನೀಡುವ ಕನ್ನಡ ಸಂಘಗಗಳಿದ್ದ ಕಾಲೇಜನ್ನು ಹುಡುಕಿ ಹೊರಟೆ. ಕನ್ನಡ ಸಾಹಿತ್ಯ, ವಿಶ್ವರಂಗಭೂಮಿಯ ದಿಗ್ಗಜರ ಪರಿಚಯವಾಗತೊಡಗಿತು. ಚಪ್ಪಾಳೆಗಳ ಗುಂಗಿಗಿಂತ ಬದುಕಿನಲ್ಲಿ ಬೇರೊಂದಿದೆ ಎಂದು ಅರಿವಾಗುತ್ತಿದ್ದಂತೆ ಕಾಲೇಜನ್ನು ಅರ್ಧಕ್ಕೇ ಬಿಟ್ಟು ಕನ್ನಡ ರಂಗಭೂಮಿಯತ್ತ ಮುಖಮಾಡಿದೆ. ಭಾರತವೇ ಕನ್ನಡ ರಂಗಭೂಮಿಯತ್ತ ತಿರುಗಿ ನೋಡುವಂತಿದ್ದ ಪರ್ವಕಾಲವದು. ಕಾರಂತರು, ಕಂಬಾರರು, ಕಾರ್ನಾಡರು, ಸುಬ್ಬಣ್ಣ, ಪ್ರಸನ್ನ, ಸಿಜಿಕೆ, ನಾಗೇಶ್‌ ಹೀಗೆ ಇನ್ನೆಷ್ಟೋ ಘನಾನುಘಟಿಗಳಿಂದ ಕಂಗೊಳಿಸುತ್ತಿತ್ತು.

‘ಅಭಿನಯತರಂಗ’ದ ಭಾನುವಾರದ ರಂಗಶಾಲೆಗೆ ಕಾಲಿಟ್ಟೆ. ವಿಜಯಮ್ಮ, ಎ.ಎಸ್. ಮೂರ್ತಿಗಳ ಆಶ್ರಯ ಸಿಕ್ಕಿತು. ಬಿ.ಸುರೇಶ್‌, ಪ್ರಕಾಶ್ ಬೆಳವಾಡಿ, ಎ.ಎಂ. ಪ್ರಕಾಶ್‌ ಅವರಂಥವರ ಗೆಳೆತನ. ದಿನವೆಲ್ಲಾ ಹಿರಿಯರು, ತಿಳಿದವರು ಪಾಠಮಾಡುತ್ತ, ಸಂಜೆ ಒಂದುಗೂಡಿ ಚಿರ್ಚಿಸುತ್ತಿರುವಾಗ ಹತ್ತಿರದಲ್ಲೇ ಕುಳಿತು ಕೇಳಿಸಿಕೊಳ್ಳುವ ಸದವಕಾಶ. ಲಂಕೇಶರ ಆಫೀಸಿಗೆ ಹೋಗಿ ಕುಳಿತರೂ ಅದೇ ಭಾಗ್ಯ.

ಬೀದಿನಾಟಕಗಳನ್ನು ಆಡಲು ಆರಂಭಿಸಿದೆವು. ಬೇರೆ ಬೇರೆ ಊರುಗಳಲ್ಲಿ, ಗ್ರಾಮಗಳಲ್ಲಿ ಬಸ್ಸಿನಿಂದಿಳಿದು ಬಾಡಿಗೆ ಸೈಕಲ್‌ ಮೇಲೆ ಸವಾರಿ. ರೇಷನ್‌ ಅಂಗಡಿಯ ಸಮಸ್ಯೆಗಳಿಂದ ಹಿಡಿದು ನೀರು, ಮೂಢನಂಬಿಕೆಗಳು, ರಾಜಕೀಯ... ಇವೆಲ್ಲವೂ ನಾಟಕದ ವಿಷಯಗಳಾದವು. ಬೀದಿಯಲ್ಲಿ ಐವತ್ತು ಜನ ಸೇರಿದರೆ ಸಾಕು, ಬಹುದೊಡ್ಡ ಯಶಸ್ಸು. ನಟನೆಯನ್ನು ಬದುಕನ್ನು ಓದುತ್ತ ಬೆಳೆದೆ. ಹಲವು ಗೆಳೆಯರು ಕೆಲಸ ಸಿಕ್ಕು, ಮದುವೆಯಾಗಿ ಮಾಯವಾಗುತ್ತಿದ್ದಂತೆ ಮತ್ತೆ ಒಂಟಿಯಾಗಿ ನಿಂತೆ. ಆಕಾಶವಾಣಿಯಲ್ಲಿ ನಾಟಕಕ್ಕೆ ಛಾನ್ಸ್‌ ಕೇಳಿ ನಿಂತರೆ ನನ್ನ ಧ್ವನಿ ಸರಿಯಿಲ್ಲವೆಂದರು. ದೂರದರ್ಶನ ನಾಟಕಗಳಲ್ಲಿ ಹೆಚ್ಚು ಕೆಲಸಸಿಗುವುದು ಕಷ್ಟವಾಗತೊಡಗಿತು. ಎಲ್ಲ ಪ್ರಯತ್ನಗಳು ವಿಫಲವಾಗುತ್ತಿದ್ದವು. ಆಗ ಮನಸ್ಸೊಡೆದು ನಿಂತಿದ್ದೇನೆ. ಕಾಸಿಲ್ಲದೆ ಅತ್ತಿದ್ದೇನೆ. ನಂಬಿಕೆ ಕಳೆದುಕೊಳ್ಳಲಿಲ್ಲ. ಯಾರಿಗೂ ಮೋಸ ಮಾಡಲಿಲ್ಲ. ಹಸಿವಿನಲ್ಲಿಯೂ ಗರ್ವದಿಂದ ತಲೆಯೆತ್ತಿ ನಿಂತಿದ್ದೇನೆ; ನನ್ನ ಆ ಗರ್ವವನ್ನು ಆಸ್ವಾದಿಸಿದ್ದೇನೆ.

ಹಸಿವನ್ನೂ ನೋವನ್ನೂ ಗೆಲ್ಲುವ ಶಕ್ತಿ ನನಗೆ ನನ್ನ ಗರ್ವ ಕೊಟ್ಟಿದೆ. ನನ್ನೊಂದಿಗೆ ಇದ್ದ ಉತ್ತಮ ನಟನೊಬ್ಬ ಒಂದು ಕ್ಲರ್ಕ್‌ ಕೆಲಸ ಸಿಕ್ಕಿತೆಂದು ಸೆಟಲ್‌ ಆದಾಗಲೂ ನಾನು ಧೃತಿಗೆಡದೆ ಒಬ್ಬನೇ ಗರ್ವದಿಂದ ನಿಂತಿದ್ದೆ. ಆಗೆಲ್ಲ ಸಿನಿಮಾ ಕ್ಷೇತ್ರದಲ್ಲಿ ನೊಳೆಯುವುದು ಅಷ್ಟು ಸುಲಭವಾಗಿರಲಿಲ್ಲ. ಹೆಸರಾಂತ ನಟರ ಮಕ್ಕಳು, ನಿರ್ಮಾಪಕ, ನಿರ್ದೇಶಕರ ಮಕ್ಕಳು ಮಾತ್ರ ರಾರಾಜಿಸುತ್ತಿದ್ದ ಕಾಲವದು. ಅವರ ನಾಲ್ವರು ಸ್ನೇಹಿತರಲ್ಲಿ ಒಬ್ಬ ಸ್ನೇಹಿತನಾಗಿ ನಟಿಸಲು ಅವಕಾಶ ಸಿಕ್ಕರೇ ದೊಡ್ಡ ವಿಷಯ.

ಹೀಗೆ ‘ಹರಕೆಯ ಕುರಿ’ ಚಿತ್ರದಲ್ಲಿ ಪರಿಚಯವಾದ ನಟಿ ಗೀತಾ ಅವರ ಅಭಿಮಾನದಿಂದ ಪ್ರೀತಿಯಿಂದ ತಮಿಳಿನ ಕೆ. ಬಾಲಚಂದರ್‌ ಅವರ ‘ಡ್ಯೂಯೆಟ್‌’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ತಮಿಳನ್ನು ಕಲಿತೆ. ಅಲ್ಲಿಂದ ತೆಲುಗು, ಮಲಯಾಳಂ... ದಶಕದ ಹಾದಿಯಲ್ಲಿ ಎಲ್ಲ ಭಾಷೆಗಳಲ್ಲಿ ನಟಿಸುವ ತಾರೆಯಾದೆ. ಗಳಿಸಿದ ಹಣದಲ್ಲಿ ಕಲ್ಯಾಣ ಮಂಟಪಗಳನ್ನು ಕಟ್ಟಲು, ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ಕಟ್ಟಲು ಆಸ್ತಿ ಕೂಡಿಡಲು ಹಲವಾರು ಗೆಳೆಯರು ಬುದ್ಧಿ ಮಾತು ಹೇಳಿದರು. ಆದರೆ ನಾನು ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವಂತೆ ಉತ್ತಮ ಅಭಿರುಚಿಯ ಸಿನಿಮಾವನ್ನು ನಿರ್ಮಿಸಿದೆ, ನಿರ್ದೇಶಿಸಿದೆ.

ಪ್ರತಿಭಾವಂತರಾದ ಹೊಸ ನಿರ್ದೇಶಕರನ್ನು, ತಂತ್ರಜ್ಞರನ್ನೂ ಕಲಾವಿದರನ್ನೂ ಪರಿಚಯಿಸಿದೆ. ‘ಇವನು ಯಾರ ಮಾತನ್ನೂ ಕೇಳದ ಅಹಂಕಾರಿ, ಗರ್ವಿಷ್ಠ’ ಎಂದು ಕುಹಕವಾಡಿದರು. ಸಾಕಷ್ಟು ನಷ್ಟವಾಗಿ ಹಣ ಕಳೆದುಕೊಂಡೆ. ಆದರೆ ನನ್ನ ಗರ್ವವನ್ನು ಕಳೆದುಕೊಳ್ಳಲಿಲ್ಲ. ಏಕೆಂದರೆ ನನ್ನ ಅಪ್ಪ ಎಂದೋ ಸಂಪಾದಿಸಿದ್ದನ್ನು ತಂದು ಸುರಿದು ನಾನು ಕಳೆಯಲಿಲ್ಲ. ನನ್ನ ಬಳಿ ಬಂದದ್ದೆಲ್ಲ ಸಿನಿಮಾ ಕೊಟ್ಟಿದ್ದು. ಒಂದು ಒಳ್ಳೆಯ ಸಿನಿಮಾ ಮಾಡುವ ಪ್ರಯತ್ನದಲ್ಲಿ ಅದನ್ನು ಕಳೆದುಕೊಂಡಿದ್ದರಲ್ಲಿ ನನಗೆ ಬೇಸರವಿರಲಿಲ್ಲ. ಇದೂ ಇವನ ಗರ್ವ ತಂದ ಅಹಂಕಾರವೆಂದು ಸಾಕಷ್ಟು ಜನ ಆಡಿಕೊಂಡರು.

ನನ್ನ ದಾರಿಯಲ್ಲಿ ನಾನು ಬೆಳೆಯುತ್ತ ಹೋದಂತೆ ಹಳ್ಳಿಗಳನ್ನು ದತ್ತು ತೆಗೆದುಕೊಂಡೆ. ಸಂಪಾದಿಸಿದ ಹಣದಿಂದ ಹೆಸರಿನಿಂದ ಊರುಗಳನ್ನು ಕಟ್ಟತೊಡಗಿದೆ. ‘ಇವನಿಗೆ ದಕ್ಕಿದ್ದನ್ನು ಉಳಿಸಿಕೊಳ್ಳುವುದು ಗೊತ್ತಿಲ್ಲ. ಸಂಪಾದಿಸಬಲ್ಲೆನೆಂಬ ಅಹಂಕಾರ, ದರ್ಪ, ಗರ್ವ ಕೊನೆಗೊಂದು ದಿನ ಬೀದಿಯಲ್ಲಿ ನಿಲ್ಲಿಸಿದಾಗ ಅರಿವಾಗುತ್ತದೆ’ ಎಂದು ಮಾತನಾಡಿಕೊಂಡರು. ನಾನು ನಗುತ್ತಲೇ ಮುಂದುವರಿದಿದ್ದೇನೆ.

ಇಂದು ನನ್ನ ಬದುಕಿನ ಇನ್ನೊಂದು ದಿಗಂತದಲ್ಲಿ ನಿಂತಿದ್ದೇನೆ. ನನ್ನ ರಾಜಕೀಯ ಪ್ರಜ್ಞೆಯಿಂದ ಹೊಸ ಹುಟ್ಟೊಂದನ್ನು ಬದುಕುತ್ತಿದ್ದೇನೆ. ಈಗಲೂ ನನ್ನ ಚಾರಿತ್ರ್ಯಹರಣ ಮಾಡುತ್ತ, ವೈಯಕ್ತಿಕ ಬದುಕನ್ನು ಅವಮಾನಿಸುತ್ತ, ಅಸಭ್ಯ ಮಾತುಗಳಿಂದ ಅಪಪ್ರಚಾರ ಮಾಡುತ್ತಿದ್ದರೂ ಜರ್ಝರಿತವಾಗದ ನನ್ನ ಅಂತಃಕರಣದ ಕೋಪಕ್ಕೆ, ಆವೇದನೆಗೆ ಮತ್ತೆ ಅಹಂಕಾರಿ, ಗರ್ವಿಷ್ಠನೆಂದು ಪಟ್ಟಕಟ್ಟುತ್ತಿದ್ದಾರೆ. ನನ್ನ ವೃತ್ತಿಜೀವನದ ದುಡಿಮೆಗೆ ಕಲ್ಲುಹಾಕುವ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ನಾನು ಗೌರವಿಸುವ, ನನ್ನ ಈ ಪಯಣಕ್ಕೆ ಅರ್ಥ ತುಂಬುವ ಲಕ್ಷಾಂತರ ಮನಸ್ಸುಗಳ ಹಾರೈಕೆ ನನ್ನ ಶಕ್ತಿಯಾಗಿ ಮುನ್ನಡೆಸುತ್ತಿದೆ. ಮುಂದೊಂದು ದಿನ ಈ ನನ್ನ ಗರ್ವವೇ ನನ್ನ ಮನಃಸಾಕ್ಷಿ ಎಂದು ಸಾರಿ ಹೇಳುವ ಗರ್ವ ನನ್ನಲ್ಲಿನ್ನೂ ಇದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا