Urdu   /   English   /   Nawayathi

ಪ್ರಚಾರಕ್ಕೆ ಹೋಗದ್ದಕ್ಕೆ ಗರಂ ಆದ ಅಮಿತ್‌ ಶಾ

share with us

ಬೆಂಗಳೂರು: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ನಾಯಕರು ಪ್ರಚಾರಕ್ಕೆ ಹೋಗದ ಬಗ್ಗೆ ಗರಂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯೇಂದ್ರಗೆ ಟಿಕೆಟ್‌ ಕೊಡದ ಕಾರಣ ಎರಡೂ ಜಿಲ್ಲೆಗಳಲ್ಲಿ ನಡೆಸಿದ ಪ್ರತಿಭಟನೆಯೂ ಪಕ್ಷಕ್ಕೆ ಹಾನಿಯುಂಟುಮಾಡಿದೆ. ಅಲ್ಲಿ ಉದ್ಭವಿಸಿರುವ ಗೊಂದಲ ತಕ್ಷಣ ಬಗೆಹರಿಸಬೇಕು. ಪಕ್ಷದ ಅಭ್ಯರ್ಥಿಗಳ ಪರ ಒಗ್ಗೂಡಿ ಪ್ರಚಾರ ಮಾಡಬೇಕು ಎಂದೂ ತಾಕೀತು ಮಾಡಿದರು ಎಂದು ತಿಳಿದು ಬಂದಿದೆ.

ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅಮಿತ್‌ ಶಾರನ್ನು ಯಡಿಯೂರಪ್ಪ ಭೇಟಿ ಮಾಡಿ, ಹಾಸನದಲ್ಲಿ ಕಾರ್ಯಕ್ರಮ ಇರುವ ಬಗ್ಗೆ ಹೇಳಿ ಹೊರಟರು. ನಂತರ ಅಮಿತ್‌ ಶಾ ಅವರು ಅನಂತಕುಮಾರ್‌, ಪ್ರಕಾಶ್‌ ಜಾವಡೇಕರ್‌, ಮುರುಳೀಧರ್‌ರಾವ್‌, ಬಿ.ಎಲ್‌.ಸಂತೋಷ್‌, ಆರ್‌.ಅಶೋಕ್‌ ಅವರೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ರೆಡ್ಡಿ ವಿಚಾರ ಪ್ರಸ್ತಾಪಿಸಿ,ಮುಂದಿನ ದಿನಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು ಎನ್ನಲಾಗಿದೆ.

ಯಡಿಯೂರಪ್ಪ ಅವರು ಮೋದಿ ಹಾಗೂ ಅಮಿತ್‌ ಶಾ ಭಾಗಿಯಾಗುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವುದಿಲ್ಲ. ಎಲ್ಲಾ ನಾಯಕರೂ ಪ್ರತ್ಯೇಕವಾಗಿಯೇ ಪ್ರಚಾರದಲ್ಲಿ ತೊಡಗಲಿದ್ದಾರೆ. ಮೋದಿಯವರ ಒಂದು ಕಾರ್ಯಕ್ರಮದಲ್ಲಿ ಮಾತ್ರ ಬಿಎಸ್‌ವೈ ಭಾಗಿಯಾಗಲಿದ್ದು, ಉಳಿದಂತೆ ತಾವೇ ಪ್ರತ್ಯೇಕವಾಗಿ ನಿಗದಿತ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ನಾಯಕರೂ ಇದೇ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಶಾ ಭೇಟಿಗೆ ಜ್ಯೋತಿಷಿ ಪಟ್ಟು
ಈ ಮಧ್ಯೆ, ಶುಕ್ರವಾರ ಅಮಿತ್‌ ಶಾ ಉಳಿದುಕೊಂಡಿರುವ ಚಾಲುಕ್ಯ ಸರ್ಕಲ್‌ ಬಳಿಯ ನಿವಾಸಕ್ಕೆ ಶಿರಸಿಯ ಶ್ರೀಕಾಂತ್‌ ಭಟ್‌ ಎಂಬ ಜ್ಯೋತಿಷಿ ಆಗಮಿಸಿ ಅಮಿತ್‌ ಶಾ ಭೇಟಿಗೆ ಪಟ್ಟು ಹಿಡಿದರು. ಆದರೆ, ಭದ್ರತಾ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್‌ ಬೆಂಬಲ ಬೇಕೇ ಬೇಕು. ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ನಿರ್ಧಾರ ಮಾಡುವವರು ದೇವೇಗೌಡರು ಎಂದು ಭವಿಷ್ಯ ನುಡಿದರು. ಬಿಜೆಪಿಗೆ ಎಷ್ಟು ಸೀಟು ಬರುತ್ತದೆ, ಎಷ್ಟು ಮತ ಪಡೆಯುತ್ತದೆ ಎಂಬುದರ ನಿಖರ ಮಾಹಿತಿ ನನ್ನ ಬಳಿ ಇದೆ. ಅಮಿತ್‌ ಶಾ ಅವರಿಗೆ ಹೇಳುವ ಸಲುವಾಗಿಯೇ ಬಂದಿದ್ದೇನೆ ಎಂದರೂ ಭದ್ರತಾ ಸಿಬ್ಬಂದಿ ಬಿಡಲಿಲ್ಲ ಎಂದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا