Urdu   /   English   /   Nawayathi

ಕೇರಳದಲ್ಲಿ ಹರತಾಳ: ಸುಳ್ಳುಸುದ್ದಿಗೆ ಹೆದರಿ ಅಂಗಡಿ ಮುಚ್ಚಿದರು, ಹಲವೆಡೆ ಕಲ್ಲುತೂರಾಟ

share with us

ಪಾಲಕ್ಕಾಡ್: 16 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಜಮ್ಮು ಕಾಶ್ಮೀರದ ಕಠುವಾದಲ್ಲಿ ಎಂಟರ ಹರೆಯದ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಕೇರಳದಲ್ಲಿ ಸೋಮವಾರ ಹರತಾಳ ಆಚರಿಸಲಾಗುತ್ತಿದೆ ಎಂಬ ವದಂತಿ ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಹರತಾಳವು ಯಾವುದೇ ಸಂಘಟನೆ, ಪಕ್ಷಗಳಿಂದ ಪ್ರೇರಿತ ಅಲ್ಲ ಹಾಗಾಗಿ ಎಲ್ಲರೂ ಸಹಕರಿಸಬೇಕೆಂಬ ಸಂದೇಶ ಹರಿದಾಡಿದ್ದರಿಂದ ಸೋಮವಾರ ಕೇರಳದಲ್ಲಿ ಅಘೋಷಿತ ಹರತಾಳ ನಡೆಯಿತು.

ಹರತಾಳ ಎಂಬುದು ಸುಳ್ಳು ಸುದ್ದಿ
ಕಠುವಾ ಅತ್ಯಾಚಾರ ಪ್ರಕರಣವನ್ನು  ಖಂಡಿಸಿ ಹರತಾಳ ನಡೆಸಲಾಗುತ್ತಿದೆ ಎಂಬ ಸುದ್ದಿ ಸುಳ್ಳು. ಯಾವುದೇ ಪಕ್ಷ ಅಥವಾ ಸಂಘಟನೆಗಳು ಹರತಾಳಕ್ಕೆ ಆಹ್ವಾನ ನೀಡಿಲ್ಲ. ಈ ವದಂತಿಗೆ ಕಿವಿಗೊಡಬೇಡಿ ಎಂದು ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸಿದರೂ ಪ್ರಯೋಜನವಾಗಲಿಲ್ಲ. ಏಪ್ರಿಲ್ 2 ರಂದು ಕೇಂದ್ರ ಸರ್ಕಾರದ ಉದ್ಯೋಗ ನಿಯಮ ತಿದ್ದುಪಡಿ ವಿರುದ್ಧ  ನೌಕರರ ಸಂಘಟನೆಗಳು ಹರತಾಳ ನಡೆಸಿದ್ದವು. ಏಪ್ರಿಲ್  9ರಂದು ಉತ್ತರಭಾರತದಲ್ಲಿ  ದಲಿತರ ಹತ್ಯೆ ಖಂಡಿಸಿ ಕೇರಳದ ದಲಿತ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಈ ತಿಂಗಳ ಎರಡು ಸೋಮವಾರ ಹರತಾಳ ನಡೆದಿದ್ದರಿಂದ ಈ ಸೋಮವಾರವೂ ಹರತಾಳ ಇದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು.

ಎಲ್ಲೆಲ್ಲಿ ಏನೇನಾಯ್ತು?
ಪಾಲಕ್ಕಾಡ್

ರಸ್ತೆಗಿಳಿದ ವಾಹನಗಳಿಗೆ ಕೆಲವರು ತಡೆಯೊಡ್ಡಲು ಆರಂಭಿಸಿದಾಗ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಕೆಎಸ್‍ಆರ್‍‍ಟಿಸಿ  ಬಸ್  ನಿಲ್ದಾಣದಲ್ಲಿ ಪೊಲೀಸ್ ಪಹರೆ ಇದೆ. ಸುಲ್ತಾನ್ ಪೇಟೆ ಜಂಕ್ಷನ್‍ನಲ್ಲಿ ಟಯರ್‍‍ಗೆ ಬೆಂಕಿ ಇಡಲಾಗಿದೆ, ವಾಹನಗಳಿಗೆ ತಡೆಯೊಡ್ಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ತೆರೆದಿದ್ದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಎರಡು ಬಾರಿ ಲಾಠಿ ಚಾರ್ಜ್ ಮಾಡಿದ್ದಾರೆ.

ಕಣ್ಣೂರು
ಕಣ್ಣೂರಿನಲ್ಲಿ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿತ್ತು. ಕೆಲವು ಕಡೆ ವಾಹನಗಳಿಗೆ ತಡೆಯೊಡ್ಡಲಾಗಿತ್ತು. ಮುಸ್ಲಿಂ ಲೀಗ್ ಅಧಿಪತ್ಯವಿರುವ ಪ್ರದೇಶಗಳಲ್ಲಿ ಜನ ಜೀವನ ಸ್ಥಗಿತಗೊಂಡಿತ್ತು. ಎಸ್‍ಡಿಪಿಐ ಕಾರ್ಯಕರ್ತರು ವಾಹನಗಳಿಗೆ ತಡೆಯೊಡ್ಡಿದ್ದು, ನಗರದಲ್ಲಿ ಹೋಟೆಲ್‍ಗಳು ಕಾರ್ಯವೆಸಗಿಲ್ಲ.
ಹರತಾಳಕ್ಕೆ ಬೆಂಬಲ ಸೂಚಿಸಿ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿದ ಎಸ್‍ಡಿಪಿಐ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿದ್ದು, 22 ಮಂದಿ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ಸುಳ್ಳು ಸುದ್ದಿ ನಂಬಿ ವಾಹನಗಳಿಗೆ ತಡೆಯೊಡ್ಡಿದ 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದನ್ನು ಪ್ರತಿಭಟಿಸಿ  ಪೊಲೀಸ್ ಠಾಣೆಗೆ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮಲಪ್ಪುರಂ
ಇಲ್ಲಿನ ಪ್ರಮುಖ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕೋಯಿಕ್ಕೋಡ್ - ತ್ರಿಶ್ಶೂರ್ ,  ಕೋಯಿಕ್ಕೋಡ್ - ಮಲಪ್ಪುರಂ -  ಪಾಲಕ್ಕಾಡ್ ದಾರಿಯಲ್ಲಿ ವಾಹನಗಳಿಗೆ ತಡೆಯೊಡ್ಡಲಾಗಿದೆ.
ಪೆರಿಂದಲ್ ಮಣ್ಣಾ ಡಿಪೋದಿಂದ ಕೆಎಸ್‍ಆರ್‍‍ಟಿಸಿ ಸೇವೆಗಳು ಸ್ಥಗಿತಗೊಂಡಿದ್ದವು. ಕೋಯಿಕ್ಕೋಡ್ - ನಿಲಂಬೂರ್ -ಗುಡಲ್ಲೂರ್ (ಸಿಎನ್‍ಜಿ) ರಸ್ತೆಯ ಎಡಕ್ಕರದಲ್ಲಿ ವಾಹನಗಳಿಗೆ ತಡೆಯೊಡ್ಡಿದವರನ್ನು ಚದುರಿಸಲು ಪೊಲೀಸ್ ಲಾಠಿ ಪ್ರಹಾರ ಮಾಡಿದ್ದಾರೆ. ಏಳು ಮಂದಿಯನ್ನು ಬಂಧಿಸಲಾಗಿದೆ. ವೆಟ್ಟಿಚ್ಚಿರ, ತಾನೂರ್ ಮತ್ತು ಪೊನ್ನಾನಿಯಲ್ಲಿ ಸಂಘರ್ಷವುಂಟಾಗಿದೆ.

ವಯನಾಡ್
ಕಲ್ಪಟ್ಟಾ ನಗರದಲ್ಲಿ ಅಂಗಡಿಗಳು ಮುಚ್ಚಿದ್ದವು. ಬೆಳಗ್ಗೆ 8 ಗಂಟೆಗೆ ಜನರ ಗುಂಪೊಂದು ಹರತಾಳಕ್ಕೆ ಬೆಂಬಲ ಸೂಚಿಸಿ ಮೆರವಣಿಗೆ ನಡೆಸಿತ್ತು.

ಕಾಸರಗೋಡು
ತೆಕ್ಕಿಲ್ ನಲ್ಲಿ ಕೆಎಸ್‍ಆರ್‍‍ಟಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು, ಚಾಲಕ ಗಾಯಗೊಂಡಿದ್ದಾರೆ. ಅಂಗಡಿ ಮತ್ತು ಹೋಟೆಲ್‍ಗಳು ತೆರೆದಿಲ್ಲ. ಕೆಎಸ್‍ಆರ್‍‍ಟಿಸಿ ಸಂಚಾರ ನಡೆಸಿದ್ದರೂ, ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ.

ಕೊಲ್ಲಂ
ಅಂಗಡಿಗಳನ್ನು ಬಲವಂತವಾಗಿ ಮುಚ್ಚಲಾಯಿತು.

ಆಲಪ್ಪುಳ
ಆಲಪ್ಪುಳ ಕೈಚುಂಡಿ ಮುಕ್ಕ್, ಕೊಮ್ಮಾಡಿಯಿಂದ ಕಲ್ಲುಪಾಲಂವರೆಗೆ ಅಂಗಡಿಗಳು ಮುಚ್ಚಿದ್ದವು.

ಕೋಯಿಕ್ಕೋಡ್
ಮಿಠಾಯಿ ತೆರುವ್‍ನಲ್ಲಿ ಅಂಗಡಿಗಳು ಮುಚ್ಚಿದ್ದವು, ಎಸ್‍ಡಿಪಿಐ ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚಲು ಯತ್ನಿಸಿದ್ದು ಮೂವರನ್ನು ಪೊಲೀಸರು  ಬಂಧಿಸಿದ್ದಾರೆ.

ತಿರುವನಂತಪುರಂ
ವಾಹನಗಳಿಗೆ ತಡೆಯೊಡ್ಡಲಾಗಿದ್ದು, ಅಂಗಡಿಗಳು ಮುಚ್ಚಿದ್ದವು. ಪನವೂರ್, ಚುಳ್ಳಿಮಾನೂರ್, ಅಳಿಕ್ಕೋಡ್, ನೆಡುಮಂಞಾಡ್ ಪ್ರದೇಶಗಳಲ್ಲಿ  ಬಲವಂತವಾಗಿ ಅಂಗಡಿಗಳನ್ನು ಮುಚ್ಚಲಾಗಿತ್ತು,  ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳನ್ನು ಒತ್ತಾಯಪೂರ್ವಕ ಮುಚ್ಚಿಸಲಾಗಿತ್ತು. ತಿರುವನಂತಪುರಂ -ತೆಂಗಾಶಿ ದಾರಿಯಾಗಿರುವ ಪೆಟ್ರೋಲ್ ಬಂಕ್ ಗಳನ್ನು ಮುಚ್ಚಲಾಗಿದೆ, 

ಎರ್ನಾಕುಳಂ
ಮುವಾಟ್ಟುಪ್ಪುಳದಲ್ಲಿ ಹರತಾಳ ಪೂರ್ಣವಾಗಿತ್ತು, ತೃಕಳತ್ತೂರ್, ಪೆಳಕೋಪ್ಪಿಳ್ಳಿಯಿಂದ ಅಯವನವರೆಗೆ ನಗರದ ಬಹುತೇಕ ಕಡೆ ಅಂಗಡಿಗಳು ಮುಚ್ಚಿದ್ದವು.  ಬ್ಯಾಂಕ್ ಸೇರಿದಂತೆ ಸರ್ಕಾರಿ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಲಾಗಿತ್ತು.

ತ್ರಿಶ್ಶೂರ್
ಚಾನಕ್ಕಾಡ್-ಪೊನ್ನಾನಿ ರೂಟ್ ‍ನಲ್ಲಿ ಬಸ್ ಸಂಚಾರ  ಸ್ಥಗಿತವಾಗಿತ್ತು, ಖಾಸಗಿ ವಾಹನಗಳ ಸಂಚಾರ ನಡೆಸಿದ್ದವು

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا